Advertisement

ಪೊಲೀಸರ ವರ್ತನೆಯಲ್ಲಿರಲಿ ಕಠಿಣತೆ, ಸೌಜನ್ಯತೆ

11:52 AM Jul 26, 2017 | Team Udayavani |

ಬೆಂಗಳೂರು: ಸಮಾಜದಲ್ಲಿ ಶಾಂತಿ ಮೂಡಿಸುವ ಸಂದರ್ಭದಲ್ಲಿ ಕಠಿಣವಾಗಿ ವರ್ತಿಸುವುದರ ಜೊತೆಗೆ ಪೊಲೀಸರು ಸಾರ್ವಜನಿಕರೊಂದಿಗೆ ಮಧುರ ಬಾಂಧವ್ಯ ಇಟ್ಟುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ರಾಜ್ಯ ಸಶ‌ಸ್ತ್ರ ಮೀಸಲು ಪಡೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸೈಕಲ್‌ ಜಾಥಾದ ಮುಕ್ತಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಧಾನಸೌಧದ ಬೃಹತ್‌ ಮೆಟ್ಟಿಲುಗಳ ಮುಂಭಾಗದಲ್ಲಿ ಮಂಗಳವಾರ ಈ ಕಾರ್ಯಕ್ರಮ ನಡೆಯಿತು.

ಸಮಾಜದಲ್ಲಿ ಅನೇಕ ಉತ್ತಮ ಶಕ್ತಿಗಳ ಜೊತೆಗೆ ಕೆಲವು ದುಷ್ಟ ಶಕ್ತಿಗಳು ಇರುತ್ತವೆ. ದುಷ್ಟ ಶಕ್ತಿಗಳಿಂದ ಸಮಾಜವನ್ನು ರಕ್ಷಿಸುವ ಜವಾಬ್ದಾರಿ ಪೊಲೀಸರ ಮೇಲಿರುತ್ತದೆ. ಕಾನೂನು- ಸುವ್ಯವಸ್ಥೆ ದೃಷ್ಟಿಯಿಂದ ಸಮಾಜದಲ್ಲಿ ಶಾಂತಿ ತರಲು ಪೊಲೀಸರು ಅನೇಕ ಸಂದರ್ಭಗಳಲ್ಲಿ ಕಠಿಣವಾಗಿ ನಡೆದುಕೊಳ್ಳಬೇಕಾಗುತ್ತದೆ.

ಅದರ ಜೊತೆಗೆ ಸಾರ್ವಜನಿಕರೊಂದಿಗೆ ಪೊಲೀಸರು ಒಳ್ಳೆಯ ಸ್ನೇಹ ಸಂಬಂಧ ಇಟ್ಟುಕೊಳ್ಳಬೇಕಾದ್ದದ್ದು ಅವಶ್ಯಕವಾಗಿದೆ. ಪೊಲೀಸರಲ್ಲಿ ಆತ್ಮಸ್ಥೈರ್ಯ ಇರಬೇಕಾದರೆ, ಅವರು ಸಮಾಜಮುಖೀ ಆಗುವುದರ ಜೊತೆಗೆ ಕ್ರೀಯಾಶೀಲರಾಗಿರಬೇಕು ಎಂದರು.

ಪೊಲೀಸರಿಗೆ ಕರ್ತವ್ಯ ಮುಖ್ಯ. ಹಾಗಾಗಿ ಅವರು ಯಾವತ್ತೂ ಖನ್ನತೆಗೆ ಒಳಗಾಗಬಾರದು. ಅದಕ್ಕಾಗಿ ಪೊಲೀಸರಿಗಾಗಿ ಸಾಂಸ್ಕೃತಿಕ, ಕ್ರೀಡೆ ಮತ್ತು ಮನರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಪೊಲೀಸರು ಸಹಾಸ ಪ್ರವೃತ್ತಿಗಳು ಬೆಳೆಸಿಕೊಂಡರೆ ಎಂತಹದೆ ಕಠಿಣ ಪರಿಸ್ಥಿತಿಯಲ್ಲಿ ಮಾನಸಿಕ ಸ್ಥೈರ್ಯ ಸಿಗುತ್ತದೆ.

Advertisement

ಪೊಲೀಸರು ದೈಹಿಕವಾಗಿ ಸಮರ್ಥರಾಗಿರಬೇಕು. ಹೊಟ್ಟೆ ಬೆಳಸಿಕೊಳ್ಳಬಾರದು. ದೈಹಿಕ ಸಾಮರ್ಥಯ ಕಾಪಾಡಿಕೊಳ್ಳುವುದು ಕರ್ತವ್ಯದ ಒಂದು ಭಾಗವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು. 

ಜಾಥಾಗೆ ಅಭಿನಂದನೆ: ಬೀದರ್‌ನಿಂದ ಜು.12ರಂದು ಆರಂಭಗೊಂಡು ಜು.25ಕ್ಕೆ ಬೆಂಗಳೂರಿನಲ್ಲಿ ಕೊನೆಗೊಂಡ ಸೈಕಲ್‌ ಜಾಥಾಗೆ ಮುಖ್ಯಮಂತ್ರಿಯವರು ಅಭಿನಂದನೆ ಸಲ್ಲಿಸಿದರು. 28 ಜಿಲ್ಲೆಗಳ 1,750 ಕಿ.ಮೀ ಸಂಚರಿಸಿರುವ ಜಾಥ ಎರಡು ಸಾವಿರ ಹಳ್ಳಿಗಳನ್ನು ಸುತ್ತಿದೆ. ಈ ವೇಳೆ ಮಂದಿರ, ಮಸೀದಿ, ಚರ್ಚ್‌ ಮತ್ತು ಸರ್ಕಾರಿ ಕಚೇರಿಗಳಿಗೆ ಭೇಟಿ ಕೊಟ್ಟಿದೆ. ಹೀಗಾಗಿ ಜಾಥಾದಲ್ಲಿದ್ದವರಿಗೆ ಬದುಕಿನ ದರ್ಶನ ಆಗಿದೆ ಎಂದರು.

“ಪೊಲೀಸ್‌ ಇಲಾಖೆಯಲ್ಲಿ ಅಶಿಸ್ತು ಇರಬಾರದು. ಅದನ್ನು ಸರ್ಕಾರ ಸಹಿಸುವುದಿಲ್ಲ. ಒಂದು ವೇಳೆ ಅಶಿಸ್ತು ಕಂಡು ಬಂದರೆ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುವುದಿಲ್ಲ’.
-ಮುಖ್ಯಮಂತ್ರಿ ಸಿದ್ದರಾಮಯ್ಯ.

Advertisement

Udayavani is now on Telegram. Click here to join our channel and stay updated with the latest news.

Next