ದಾವಣಗೆರೆ: ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಪಟ್ಟಿ ತಯಾರಿಕೆಯಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಖಡಕ್ ಸೂಚನೆ ನೀಡಿದ್ದಾರೆ. ಬುಧವಾರ, ಜಿಲ್ಲಾಡಳಿತ ಭವನದಲ್ಲಿ ಮಾಯಕೊಂಡ ಕ್ಷೇತ್ರದ ಮತಗಟ್ಟೆ ಮಟ್ಟದ ಅಧಿಕಾರಿಗಳ ವಿಶೇಷ ಸಮಗ್ರ ಪರಿಷ್ಕರಣೆ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಮತಗಟ್ಟೆ ಮಟ್ಟದ ಅಧಿ ಕಾರಿಗಳು ಸೇರಿದಂತೆ ಎಲ್ಲರೂ ಪಕ್ಷಾತೀತವಾಗಿ, ಸರ್ಕಾರದ ಪ್ರತಿನಿಧಿ ಗಳಂತೆ, ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಚುನವಣಾ ಆಯೊಗ ಚುನಾವಣೆ ಕುರಿತು ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷ ಕಂಡು ಬಂದಲ್ಲಿ ನೇರವಾಗಿ ಬೂತ್ ಮಟ್ಟದ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಅವರು ಎಚ್ಚರಿಸಿದರು. ಮಾಯಕೊಂಡ ಕ್ಷೇತ್ರದಲ್ಲಿ 1,896 ಮತಗಟ್ಟೆಗಳಿದ್ದು, ಪ್ರಸ್ತುತ 8 ಮತಗಟ್ಟೆಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಕಳೆದ 2 ವರ್ಷಗಳಿಂದ 284 ಮತಗಟ್ಟೆಗಳಲ್ಲಿನ ಮತದಾರರ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗಿಲ್ಲ. ಅಂದರೆ ವರ್ಗಾವಣೆ, ಯಾವ ಮತದಾರರೂ ಮರಣ ಹೊಂದಿಲ್ಲ ಎಂಬುದು ಅಸಾಧ್ಯ. ಬೂತ್ ಮಟ್ಟದ ಅಧಿಕಾರಿಗಳು ಇದನ್ನು ಮನಗಂಡು ಪರಿಷ್ಕರಣೆ ಮಾಡಿ. ನಿಮಗೆ ಅನುಮಾನ ಬಂದಲ್ಲಿ ತಕ್ಷಣ ಮೇಲಾಧಿಕಾರಿಗಳ ಸಹಾಯ ಪಡೆಯಿರಿ. ಆದರೆ, ಯಾವುದೇ ಕಾರಣಕ್ಕೂ ಲೋಪ ಆಗದಂತೆ ನೋಡಿಕೊಳ್ಳಿ ಎಂದು ಅವರು ಸೂಚಿಸಿದರು.
ಇಲ್ಲಿವರೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಒಟ್ಟು 33 ಸಾವಿರ ಅರ್ಜಿಗಳು ಬಂದಿವೆ. ಅದರಲ್ಲಿ 262 ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಪರಿಷ್ಕರಣೆ ಮಾಡಿ ಸಿದ್ಧಗೊಳಿಸಲಾಗಿದೆ. ಉಳಿದ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಪರಿಷ್ಕರಿಸಿ, ಫೆ. 20ರೊಳಗೆ ಚುನಾವಣಾ ಗುರುತಿನ ಚೀಟಿ ಸಿದ್ಧಪಡಿಸಿ ಎಂದರು. ಆಯೋಗ ಈ ಬಾರಿ ಆಕ್ಸೆಸ್ ಟು ಎವರಿಒನ್ ಎಂಬ ಘೋಷವಾಕ್ಯದಡಿ ಚುನಾವಣೆಗೆ ಸಿದ್ಧತೆ ನಡೆಸಿದೆ. ಅದರಂತೆ ಪ್ರತಿಯೊಬ್ಬರೂ ಕೂಡ ಮತದಾನ ಮಾಡಬೇಕು. ಇದರಲ್ಲಿ ಬೂತ್ ಮಟ್ಟದ ಅಧಿಕಾರಿಗಳು, ಮೇಲ್ವಿಚಾರಕರ ಪಾತ್ರ ಮುಖ್ಯವಾಗುತ್ತದೆ ಎಂದ ಅವರು, ಜಿಲ್ಲೆಯಲ್ಲಿ 35 ಸಾವಿರ ವಿಶೇಷ ಚೇತನರು ಇದ್ದು, ಅವರೂ ಸಹ ಮತದಾನ ಮಾಡುವಂತಾಗಬೇಕು. ಪ್ರತಿ ಬೂತ್ ಮಟ್ಟದಲ್ಲಿ ಎಷ್ಟು ಜನ ವಿಶೇಷ ಚೇತನರಿದ್ದಾರೆ ಎಂಬುದನ್ನು ಮೊದಲೇ ಗುರುತಿಸಿರಬೇಕು. ದೈಹಿಕವಾಗಿ ತೀರಾ ದುರ್ಬಲರಾದ ಅಥವಾ ನಡೆಯದೇ ಇರುವಂತಹ ವಿಶೇಷ ಚೇತನರು ಮತದಾನ ಮಾಡಲು ಸಹಾಯಕವಾಗುವಂತೆ ವ್ಹೀಲ್‌ಚೇರ್ ವ್ಯವಸ್ಥೆ ಮಾಡುವುದು ಕಡ್ಡಾಯ ಎಂದು ಅವರು ಹೇಳಿದರು.
ಎಲ್ಲ ಮತಗಟ್ಟೆಗಳಲ್ಲಿ ನೀರು, ರಸ್ತೆ, ವಿದ್ಯುತ್, ಸೂಚನಾಫಲಕ, ಕಟ್ಟಡ ವ್ಯವಸ್ಥೆ ಮತ್ತು ಭದ್ರತೆ ಇರುವಂತೆ ನೋಡಿಕೊಳ್ಳಬೇಕು. ಒಂದು ವೇಳೆ
ಅಂತಹ ಸೌಲಭ್ಯಗಳಿಲ್ಲದೇ ಇರುವಂತಹ ಮತಗಟ್ಟೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
2018 ರ ಚುನಾವಣೆಯಲ್ಲಿ ಚುನಾವಣಾ ಆಯೋಗ ಇವಿಎಂ ಜೊತೆಗೆ ವಿವಿ ಪ್ಯಾಟ್ (ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್) ತಂತ್ರಜ್ಞಾನ ಅಳವಡಿಸಿದ್ದು, ಈ ತಂತ್ರಜ್ಞಾನದಡಿ ಮತದಾರ ಯಾರಿಗೆ ಮತ ಹಾಕಿದ್ದಾನೆ ಎಂಬುದನ್ನು ಖಚಿತಪಡಿಸಿಕೊಳ್ಳಲು 7 ಸೆಕೆಂಡ್‌ಗಳ ಕಾಲ ಅವಕಾಶವಿರುತ್ತದೆ. ಬ್ಯಾಲೆಟ್ ಯೂನಿಟ್‌ಗಳನ್ನು 3 ಹಂತಗಳಲ್ಲಿ ಪರಿಶೀಲನೆಗೊಳಪಡಿಸಲಾಗುತ್ತದೆ. ಇವಿಎಂ ಮತ್ತು ವಿವಿ ಪ್ಯಾಟ್ ತಂತ್ರಜ್ಞಾನಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಉಪವಿಭಾಗಾಧಿಕಾರಿ ಎನ್. ಸಿದ್ದೇಶ್ವರ್, ತಹಶೀಲ್ದಾರ್ ಸಂತೋಷ್‌ಕುಮಾರ್, ಚುನಾವಣಾ ತಹಶೀಲ್ದಾರ್ ಎಸ್.ಎ. ಪ್ರಸಾದ್, ಚುನಾವಣೆ ಶಿರಸ್ತೇದಾರ್ ರಾಜೇಶ್ ಕುಮಾರ್, ಇತರೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.