Advertisement

ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಲು ಖಡಕ್‌ ಸೂಚನೆ

10:04 AM Jul 09, 2019 | Team Udayavani |

ಬಳ್ಳಾರಿ: ಮುಂದಿನ ಒಂದು ತಿಂಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಪ್ರತಿಯೊಬ್ಬ ಮೇಲ್ವಿಚಾರಕರು ಭೇಟಿ ನೀಡಬೇಕು. ಮಗುವಿನ ತೂಕ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವ ಹಾಗೂ ಆರೋಗ್ಯಯುತ ಮಕ್ಕಳ ಬಗ್ಗೆ ಪರಿಶೀಲನೆ ನಡೆಸಿ ಸಮಸ್ಯೆಗಳು ಹಾಗೂ ಸಲಹೆಗಳ ಸಮೇತ ಅಂಗನವಾಡಿವಾರು ಮಾಹಿತಿಗಳನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್, ಇಲಾಖೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ಮಗುವಿಗೂ ಆರೋಗ್ಯ ತಪಾಸಣೆಯನ್ನು ಗ್ರೇಡ್‌ವೈಸ್‌ ಮಾಡಬೇಕು ಮತ್ತು ಮಕ್ಕಳಿಗೆ ಏನಾದರೂ ಸಮಸ್ಯೆ ಇದೆಯೇ? ಮತ್ತು ಬೇರೆ ಯಾವುದಾದರೂ ಕಾಯಿಲೆ ಇದೆಯಾ? ಎಂಬುದನ್ನು ಪರಿಶೀಲಿಸಬೇಕು. ಎರಡ್ಮೂರು ಅಂಗನವಾಡಿ ಸೇರಿಸಿಕೊಂಡು ಹೆಲ್ತ್ ಕ್ಯಾಂಪ್‌ ಮಾಡಿಸಬೇಕು. ಪ್ರತಿ ಮಗುವಿಗೂ ಆರೋಗ್ಯ ತಪಾಸಣೆ ಮಾಡಿ ಅದರ ವಿವರ ಒಳಗೊಂಡ ಕಾರ್ಡ್‌ ನಿರ್ವಹಿಸಬೇಕು. ಇದರಿಂದ ಆ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಹಿನ್ನೆಲೆ ತಿಳಿದು ಕ್ರಮವಹಿಸಲು ಅನುಕೂಲವಾಗುತ್ತದೆ ಎಂದರು.

ಸಿಡಿಪಿಒಗಳು ತಮ್ಮ ವ್ಯಾಪ್ತಿಯ ಮೇಲ್ವಿಚಾರಕರು ಕಡ್ಡಾಯವಾಗಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಡಿಎಚ್ಒ ಅವರು ತಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಸಭೆ ಕರೆದು ಅವರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ ಏರ್ಪಡಿಸುವಂತೆ ತಿಳಿಸಬೇಕು ಎಂದರು.

ಅಂಗನವಾಡಿವಾರು ಸಮಗ್ರ ಮಾಹಿತಿ ಒದಗಿಸಬೇಕು ಎಂದ ಡಿಸಿ ನಕುಲ್, ನಾನು ಮತ್ತು ಜಿಪಂ ಸಿಇಒ ಅವರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಮೇಲ್ವಿಚಾರಕರು ಪರಿಶೀಲಿಸಬೇಕು ಮತ್ತು ಅವರ ಸಹಿ ಹಾಜರಾತಿಯಲ್ಲಿರಬೇಕು. ಇಲ್ಲದಿದ್ದಲ್ಲಿ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದರು.

Advertisement

30 ಹೊಸ ಅಂಗನವಾಡಿ ಕೇಂದ್ರಗಳು: ಜಿಲ್ಲೆಯಲ್ಲಿ ಈ ವರ್ಷ ಹೊಸದಾಗಿ 30 ಅಂಗನವಾಡಿ ಕೇಂದ್ರಗಳು ಆರಂಭಿಸುವುದಕ್ಕೆ ಸರ್ಕಾರದಿಂದ ಮಂಜೂರಾತಿ ದೊರಕಿದ್ದು, ಅವುಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ನಕುಲ್ ಹೇಳಿದರು.

ಜಿಲ್ಲೆಯಲ್ಲಿ 2784 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 561 ಕೇಂದ್ರಗಳು ಬಾಡಿಗೆಯಲ್ಲಿ ನಡೆಯುತ್ತಿವೆ. 241 ಕಟ್ಟಗಳು ನಿರ್ಮಾಣ ಹಂತದಲ್ಲಿರುವುದನ್ನು ಸಿಡಿಪಿಒ ಉಷಾ ಅವರಿಂದ ತಿಳಿದುಕೊಂಡ ಡಿಸಿ ನಕುಲ್, ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ಬೇಕಿದ್ದರೇ ಮುತುವರ್ಜಿ ವಹಿಸಬೇಕು. ಸೈಟ್ ಸಮಸ್ಯೆ ಇದ್ದರೇ ಜಿಪಂ ಸಿಇಒ ಅವರನ್ನು ಭೇಟಿಯಾಗಿ ಬಗೆಹರಿಸಿಕೊಳ್ಳಬೇಕು ಎಂದರು.

ಈ ವರ್ಷ ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗಿದೆ. 169 ಗುರಿ ನಿಗದಿಯಾಗಿದೆ ಎಂದು ವಿವರಿಸಿದ್ದಕ್ಕೆ ಅರ್ಜಿಗಳು ಬಂದ ನಂತರ ಶೀಘ್ರ ತೆಗೆದುಕೊಂಡು ಬನ್ನಿ ಹಂಚಿಕೆ ಮಾಡೋಣ ಎಂದು ಡಿಸಿ ನಕುಲ್ ಹೇಳಿದರು.

ಸಭೆಯಲ್ಲಿ ಜಿಪಂ ಸಿಇಒ ಕೆ.ನಿತೀಶ್‌, ಪ್ರೊಬೆಷನರಿ ಐಎಎಸ್‌ ಈಶ್ವರ್‌, ಡಿಎಚ್ಒ ಶಿವರಾಜ ಹೆಡೆ, ವಾರ್ತಾಧಿಕಾರಿ ಬಿ.ಕೆ.ರಾಮಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಪ್ರತಿನಿಧಿಗಳು ಹಾಗೂ ವಿವಿಧ ತಾಲೂಕುಗಳ ಸಿಡಿಪಿಒಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next