ಕಾಸರಗೋಡು: ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಡಳಿತವೂ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸುತ್ತಿದ್ದು, ಸೋಂಕು ಬಾಧಿತರನ್ನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಮನೆಗಳಲ್ಲೇ ಇರಲು ಅವಕಾಶ ನೀಡದೆ ಆಸ್ಪತ್ರೆಗೆ ಅಥವಾ ಕೇರ್‌ಸೆಂಟರ್‌ಗೆ ದಾಖಲಿಸಲು ತೀರ್ಮಾನಿಸಿದೆ.
ಮಂಗಳವಾರ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‌ವೀರ್ ಚಂದ್ ಅಧ್ಯಕ್ಷತೆಯಲ್ಲಿ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ನ್ಯಾಶನಲ್ ಹೆಲ್ತ್ ಮಿಷನ್ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್ ಡಾ| ಎ.ವಿ. ರಾಮದಾಸ್ ಕೋವಿಡ್ ನಿರ್ಬಂಧಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಬಾಧಿತರು ಮನೆಗಳಲ್ಲಿ ಇದ್ದರೆ ರೋಗ ಹರಡುವಿಕೆ ಹೆಚ್ಚಾಗುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜತೆಗೆ ಸೋಂಕಿತರ ವಿಸ್ತೃತ ಸಂಪರ್ಕ ಪಟ್ಟಿ ಸಿದ್ಧಗೊಳಿಸಿ ಅವರ ಆರೋಗ್ಯ ತಪಾಸಣೆಯನ್ನು ಮಾಡಲಾಗುವುದು ಎಂದರು.
ಆರ್‌ಟಿಪಿಸಿಆರ್ ತಪಾಸಣೆ ನಡೆಸಿದವರು ಫಲಿತಾಂಶ ಲಭಿಸುವ ವರೆಗೆ ಯಾರ ಸಂಪರ್ಕಕ್ಕೂ ಬಾರದಂತೆ ನಿಗಾ ವಹಿಸುವಂತೆ, ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳು ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ ಕ್ವಾರಂಟೈನ್ ಖಚಿತಪಡಿಸುವಂತೆ ಆದೇಶಿಸಲಾಗಿದೆ.
ಆರ್‌ಟಿಪಿಸಿಆರ್ ಫಲಿತಾಂಶ ಪ್ರಕಟಗೊಳ್ಳಲು ಪ್ರಸ್ತುತ 5 ದಿನಗಳು ಬೇಕಿದ್ದು, ತ್ವರಿತಗತಿಯಲ್ಲಿ ಫಲಿತಾಂಶ ಲಭಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಜೈಸನ್ ಮಾಥ್ಯೂ ಉಪಸ್ಥಿತರಿದ್ದರು.