Advertisement

ಕೋವಿಡ್ ಕರ್ಫ್ಯೂ: ಗದಗ ಜಿಲ್ಲೆ ಸಂಪೂರ್ಣ ಸ್ತಬ್ಧ

10:36 AM May 11, 2021 | Team Udayavani |

ಗದಗ: ಮಹಾಮಾರಿ ಕೊರೊನಾ 2ನೇ ಅಲೆ ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 14 ದಿನಗಳ ಕಾಲ ಕೊರೊನಾ ಕರ್ಫ್ಯೂ ಜಾರಿಗೊಳಿಸಿದ್ದು, ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಅವಳಿ ನಗರದಲ್ಲಿ ಲಾಕ್‌ಡೌನ್‌ ನಿಮಯ ಮೀರಿ ಸಂಚರಿಸುತ್ತಿದ್ದವರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದರು. ಇನ್ನೂ, ಕೆಲವರಿಗೆ ಬಸ್ಕಿ ಹೊಡೆವ ಶಿಕ್ಷೆ ವಿಧಿ ಸಲಾಯಿತು. ಈಗಾಗಲೇ ಕೊರೊನಾ ಕರ್ಫ್ಯೂ ಮಧ್ಯೆಯೂ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿವೆ.

Advertisement

ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಗೊಳಿಸಿದ್ದು, ಅವಳಿ ನಗರ ಸಂಪೂರ್ಣ ಸ್ತಬ್ಧಗೊಂಡಿತ್ತು. ದಿನಸಿ, ಕಿರಾಣಿ ಹಾಗೂ ಔಷಧ ಅಂಗಡಿಗಳು ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಎಲ್ಲ ವ್ಯವಹಾರ ಸ್ಥಗಿತಗೊಂಡಿತ್ತು. ಲಾಕ್‌ಡೌನ್‌ ಕುರಿತು ಸರಕಾರ ಮೊದಲೇ ಮುನ್ಸೂಚನೆ ನೀಡಿದ್ದರಿಂದ ಕಳೆದ ಮೂರ್‍ನಾಲ್ಕು ದಿನಗಳಿಂದ ಬರದಿಂದ ಸಾಗಿದ್ದ ವ್ಯವಹಾರ, ಸೋಮವಾರ ಸ್ತಬ್ಧಗೊಂಡಿತ್ತು. ಅಲ್ಲದೇ, ಅನಗತ್ಯವಾಗಿ ಬೈಕ್‌ ಹಾಗೂ ಕಾರುಗಳ ಬಳಕೆಯನ್ನು ಸರಕಾರ ನಿಷೇಧಿಸಿದ್ದರಿಂದ ಅವಳಿ ನಗರದ ಮಾರುಕಟ್ಟೆ ಪ್ರದೇಶದತ್ತ ಜನರು ತಿರುಗಿಯೂ ನೋಡಲಿಲ್ಲ. ಹೀಗಾಗಿ, ಮಾರುಕಟ್ಟೆಯ ಪ್ರಮುಖ ರಸ್ತೆಗಳು ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು.

ಇನ್ನುಳಿದಂತೆ ಕೆಲವರು ಔಷ ಧ ಅಂಗಡಿ, ಆಸ್ಪತ್ರೆ ಹಾಗೂ ಕೋವಿಡ್‌ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು, ಮದುವೆಗೆ ತೆರಳುವವರು ಮಾತ್ರ ಆಹ್ವಾನ ಪತ್ರಿಕೆ ತೋರಿಸಿ ಸಂಚರಿಸುತ್ತಿದ್ದರು. ಹೀಗಾಗಿ, ಪ್ರಮುಖ ರಸ್ತೆಗಳಲ್ಲೂ ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ಕಂಡು ಬಂದವು.

ಗುತ್ತಿಗೆದಾರನಿಗೆ ಕಪಾಳ ಮೋಕ್ಷ: ಇಲ್ಲಿನ ಭೂಮರೆಡ್ಡಿ ವೃತ್ತದಲ್ಲಿ ಸೋಮವಾರ ಬೆಳಗ್ಗೆಯೇ ಸಂಚಾರಿ ಠಾಣೆ ಪಿಎಸ್‌ಐ ಕಮಲಾ ದೊಡ್ಡಮನಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದರು. ಅನಗತ್ಯವಾಗಿ ಓಡಾಡುವವರಿಗೆ ಎಚ್ಚರಿಕೆ ನೀಡಲಾಯಿತು. ಈ ವೇಳೆ ಹಳೇ ಜಿಲ್ಲಾ ಧಿಕಾರಿ ಕಚೇರಿ ವೃತ್ತದಿಂದ ಕೆ.ಎಚ್‌.ಪಾಟೀಲ ವೃತ್ತದತ್ತ ಸಾಗುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ತಡೆದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಕೊವಿಡ್‌ ಪರಿಷ್ಕೃತ ಮಾರ್ಗಸೂಚಿಯಂತೆ ವಾಹನಗಳನ್ನು ಬಳಸುವಂತಿಲ್ಲ ಎಂದು ಪಿಎಸ್‌ಐ ಕಮಲಾ ದೊಡ್ಡಮನಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಬೈಕ್‌ ಸವಾರ ಸುರೇಶ್‌ ಸೋಮಯ್ಯ ಹಿರೇಮಠ ಎಂಬಾತ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ತಾನು ಸಿವಿಲ್‌ ಕಾಂಟ್ರಾಕ್ಟರ್‌. ಹಳ್ಳಿಯಿಂದ ನಗರಕ್ಕೆ ಬಂದು ಹೋಗಬೇಕು. ಸಾಕಷ್ಟು ಕೆಲಸಗಳಿವೆ. ಬೇಕಾದರೆ ನಮ್ಮ ಪಕ್ಷದ ನಾಯಕರೊಂದಿಗೆ ಮಾತನಾಡಿ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾನೆ. ಇದರಿಂದ ಕೆರಳಿದ ಲೇಡಿ ಸಿಂಗಂ ದೊಡ್ಡಮನಿ, ಗುತ್ತಿಗೆದಾರರನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಬೈಕ್‌ ವಶಕ್ಕೆ ಪಡೆದಿದ್ದು, ಆತನನ್ನು ವಶಕ್ಕೆ ಪಡೆದಿದ್ದಾರೆ.

ವಾಹನ ಸೀಜ್‌-ಮಾಸ್ಕ್ ಇಲ್ಲದವರಿಗೆ ದಂಡ: ಬೆಳಗ್ಗೆ 10 ಗಂಟೆ ವರೆಗೆ ಕಾಲ್ನಡಿಗೆಯಲ್ಲೇ ಬಂದು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿಲಾಗಿದೆ. ಹೀಗಾಗಿ, ಅವಳಿ ನಗರದಲ್ಲಿ ವಾಹನಗಳ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲು ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್‌ ಹಾಕಿ, ಸಂಚಾರ ಸ್ಥಗಿತಗೊಳಿಸಲಾಗಿದೆ. ನಗರದ ಮಹಾತ್ಮ ಗಾಂಧಿ ವೃತ್ತ, ಗಂಗಾಪುರ ಪೇಟೆ, ಬವೇಶ್ವರ ಸರ್ಕಲ್‌, ಕೆ.ಎಚ್‌.ಪಾಟೀಲ ವೃತ್ತ ಸೇರಿದಂತೆ ಹುಡ್ಕೊà ಕಾಲೋನಿ, ಬೆಟಗೇರಿಯ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ, ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಜತೆಗೆ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ವಾಹನಗಳ ತಪಾಸಣೆಯಲ್ಲಿ ತೊಡಗಿದ್ದಾರೆ. ಈ ವೇಳೆ ಅನಗತ್ಯವಾಗಿ ಸಂಚರಿಸುತ್ತಿದ್ದವರ ವಾಹನಗಳನ್ನು ವಶಕ್ಕೆ ಪಡೆದರು. ಮಧ್ಯಾಹ್ನ 12 ಗಂಟೆ ವರೆಗೆ ಜಿಲ್ಲಾದ್ಯಂತ 350 ವಾಹನಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಯತೀಶ್‌ ಎನ್‌. ಮಾಹಿತಿ ನೀಡಿದರು.

Advertisement

ಬಸ್ಕಿ ಶಿಕ್ಷೆ: ಮಾರುಕಟ್ಟೆ ಪ್ರದೇಶದಲ್ಲಿ ಅಲೆಯುತ್ತಿದ್ದ ಕೆಲ ಯುವಕರಿಗೆ ಪೊಲಿಸರು ಬಸ್ಕಿ ಶಿಕ್ಷೆ ನೀಡಿದರು. ಅಲ್ಲದೇ, ನೇರವಾಗಿ ಮನೆಗೆ ತೆರಳಬೇಕು. ಮತ್ತೆ ಈ ಭಾಗದಲ್ಲಿ ಕಾಣಿಸಿದರೆ ಠಾಣೆಗೆ ಕರೆದೊಯ್ಯುವುದಾಗಿ ಎಚ್ಚರಿಕೆ ನೀಡಿ ಕಳುಹಿಸಿದರು. ಏಕಾಏಕಿ ಸೈಕಲ್‌ ಪ್ರೀತಿ: ಸರಕಾರ ವಾಹನಗಳ ಸಂಚಾರಕ್ಕೆ ನಿಷೇಧ ಹೇರುತ್ತಿದ್ದಂತೆ ಅನೇಕರಿಗೆ ಪರಿಸರ ಸ್ನೇಹಿ ಸೈಕಲ್‌ ಮೇಲೆ ಪ್ರೀತಿ ಉಕ್ಕಿ ಹರಿದಿದೆ. ಬೆಳಗ್ಗೆ 10 ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುವುದರಿಂದ ಅನೇಕರು ಸೈಕಲ್‌ನಲ್ಲೇ ಬಂದಿದ್ದರು. ಹೀಗಾಗಿ, ಸ್ಟೇಷನ್‌ ರಸ್ತೆ, ಪಾಲಾ ಬದಾಮಿ, ಕೆ.ಸಿ.ರಾಣಿ ರೋಡ್‌ ಹಾಗೂ ಹಾತಲಗೇರಿ ನಾಕಾ, ಮುಳಗುಂದ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈಕಲ್‌ ಸವಾರರು ಕಂಡು ಬಂದರು.

Advertisement

Udayavani is now on Telegram. Click here to join our channel and stay updated with the latest news.

Next