ವರದಿ: ಭೈರೋಬಾ ಕಾಂಬಳೆ
ಬೆಳಗಾವಿ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸೋಂಕು ತಡೆಗೆ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಕರ್ಫ್ಯೂ ವೇಳೆ ಯಾರಾದರೂ ಬಾಲ ಬಿಚ್ಚಿದರೆ ಹುಷಾರ್ ಎಂಬ ಎಚ್ಚರಿಕೆ ನೀಡಿದೆ.
ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರು ವುದರಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಹಾಗೂ ವಾರಾಂತ್ಯದಲ್ಲಿ ಸಂಪೂರ್ಣ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡು ಕರ್ಫ್ಯೂ ವೇಳೆ ಕೋವಿಡ್ ನಿಯಮಾವಳಿ ಉಲ್ಲಂಘನೆಯಾಗದಂತೆ ನೋಡಿ ಕೊಳ್ಳಲು ಸಿದ್ಧತೆ ನಡೆಸಿದೆ. ಸರ್ಕಾರದ ಆದೇಶದಂತೆ ಖಡಕ್ ಕರ್ಫ್ಯೂ ನಡೆಸಲು ಸಜ್ಜಾಗಿದೆ.
ನೆಗಟಿವ್ ಇದ್ದರೆ ಗಡಿ ಪ್ರವೇಶ: ಹೊರ ರಾಜ್ಯದಿಂದ ಬರುವ ಪ್ರಯಾಣಿಕರು ಜಿಲ್ಲೆಗೆ ಪ್ರವೇಶಿಸುವಾಗ ಆರ್‌ಟಿಪಿಸಿಆರ್ ವರದಿ ಕಡ್ಡಾಯವಾಗಿದೆ. ಕಳೆದ ಒಂದು ತಿಂಗಳ ಹಿಂದಿನಿಂದಲೇ ಜಿಲ್ಲಾಡಳಿತ ಗಡಿ ಭಾಗದ ಚೆಕ್ ಪೋಸ್ಟ್‌ಗಳಲ್ಲಿ ಈ ನಿಯಮ ಜಾರಿಗೆ ತಂದಿದೆ. ಹೀಗಾಗಿ ಗಡಿ ದಾಟಿ ಬರುವವರೆಗೆ ಕೋವಿಡ್ ತಪಾಸಣೆ ವರದಿ ನೆಗೆಟಿವ್ ಇದ್ದರೆ ಒಳ ಬಿಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವುದರಿಂದ ಜಿಲ್ಲಾದ್ಯಂತ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ನೈಟ್ ಕರ್ಫ್ಯೂ ವೇಳೆ ಯಾರೂ ಹೊರಗೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿಗಳು ಈಗಾಗಲೇ ಎಲ್ಲ ಪೊಲೀಸ್ ಠಾಣೆಗಳಿಗೂ ಸರ್ಕಾರದ ನಿರ್ದೇಶನದಂತೆ ಕಠಿಣ ಕ್ರಮ ಜರುಗಿಸಲು ಸೂಚನೆ ನೀಡಿದ್ದಾರೆ.
ಕಳ್ಳ ದಾರಿ ಮುಚ್ಚಿದ ಗ್ರಾಮಸ್ಥರು: ನೆರೆ ರಾಜ್ಯದಿಂದ ಬೆಳಗಾವಿ ಪ್ರವೇಶಗಳ ರಹದಾರಿ ಹೊರತುಪಡಿಸಿ ಚೆಕ್‌ಪೋಸ್ಟ್‌ಗಳನ್ನು ತಪ್ಪಿಸಿ ಕಾಲು ದಾರಿ, ಹೊಲಗಳಲ್ಲಿಯ ದಾರಿ, ಮಣ್ಣಿನ ದಾರಿ ಮೂಲಕ ಪ್ರವೇಶಕ್ಕೆ ಆಯಾ ಗ್ರಾಮ ಪಂಚಾಯಿತಿಯ ಸಹಾಯ ಪಡೆದು ಗ್ರಾಮಸ್ಥರು ಬಂದ್ ಮಾಡಿದ್ದಾರೆ. ಈ ಕಾಲು ದಾರಿಗಳಿಂದ ಜನರು ಸಂಚಿಸುತ್ತಿರುವುದಕ್ಕೂ ಕಡಿವಾಣ ಹಾಕಲಾಗಿದೆ. ಆಯಾ ಗ್ರಾಮದ ವ್ಯಾಪ್ತಿಯ ಜನರು ಜೆಸಿಬಿ ಮೂಲಕ ರಸ್ತೆ ಅಗೆದು ಯಾರು ಕಳ್ಳ ದಾರಿ ಹಿಡಿದುಕೊಂಡು ಪ್ರವೇಶಿಸದಂತೆ ನೋಡಿಕೊಳ್ಳುತ್ತಿದ್ದಾರೆ. ಹುಕ್ಕೇರಿ, ಯಮಕನಮರಡಿ, ಕಾಗವಾಡ, ಅಥಣಿ, ನಿಪ್ಪಾಣಿ, ಖಾನಾಪುರ, ಜಾಂಬೋಟಿ ಬಳಿಯ ಕಾಲು ದಾರಿಗಳನ್ನು ಗ್ರಾಮಸ್ಥರು ಕಲ್ಲು, ಮುಳ್ಳು, ಮಣ್ಣು ಹಾಕಿ ಮುಚ್ಚಿದ್ದಾರೆ.