ಬಾಗಲಕೋಟೆ: ಕೊರೊನಾ 2ನೇ ಅಲೆಯಿಂದ ಜಿಲ್ಲೆ ಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಇದನ್ನೇ ಕೆಲ ಖಾಸಗಿ ಆಸ್ಪತ್ರೆಗಳು ಬಂಡವಾಳ ಮಾಡಿಕೊಳ್ಳುತ್ತಿವೆ ಎಂಬ ಆರೋಪ ಪ್ರಬಲವಾಗಿ ಕೇಳಿ ಬಂದಿದೆ.
ಹೌದು, ಜಿಲ್ಲೆಯಲ್ಲಿ 2ನೇ ಅಲೆ ವೇಗ ಹೆಚ್ಚುತ್ತಿದೆ. ಜತೆಗೆ ಜನರಲ್ಲಿ ಭೀತಿಯೂ ಹೆಚ್ಚುತ್ತಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವು ರೀತಿಯ ಪ್ರಯತ್ನ ನಡೆಸಿವೆ. ಅಗತ್ಯವಿದ್ದ ಸೋಂಕಿತರಿಗೆ ಮಾತ್ರ ಆಕ್ಸಿಜನ್ ಬಳಕೆ ಮಾಡಬೇಕು. ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಪ್ರತಿಯೊಬ್ಬ ಸೋಂಕಿತರಿಗೂ ಆಕ್ಸಿಜನ್ ಬಳಕೆ ಮಾಡುವ ಮೂಲಕ ಆಕ್ಸಿಜನ್ ದುರ್ಬಳಕೆ ಆಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಶುಕ್ರವಾರ ಖಡಕ್ ಸೂಚನೆಯನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಿದೆ ಎನ್ನಲಾಗಿದೆ.
ದುರ್ಬಳಕೆ ಮಾಡಿಕೊಳ್ಳಬೇಡಿ: ಜಿಲ್ಲೆ ಅಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಉಂಟಾಗುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಆಕ್ಸಿಜನ್ ಅನ್ನು ಮಿತವಾಗಿ ಹಾಗೂ ಅಗತ್ಯವಿದ್ದವರಿಗೆ ಮಾತ್ರ ಬಳಕೆ ಮಾಡಬೇಕು. ದುರಾಸೆಗೆ ಬಿದ್ದು, ಅಗತ್ಯ ಇಲ್ಲದ ಸೋಂಕಿತರಿಗೂ ಆಕ್ಸಿಜನ್ ಬಳಕೆ ಮಾಡುವ ಮೂಲಕ ದುರ್ಬಳಕೆ ಅಥವಾ ಅನಗತ್ಯ ವೇಸ್ಟ್ ಮಾಡಬಾರದು. ಒಂದು ವೇಳೆ ಆ ರೀತಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಮುಖ್ಯವಾಗಿ ಕೋವಿಡ್ ಚಿಕಿತ್ಸೆಗೆ ನೀಡಿದ ಅನುಮತಿ ರದ್ದುಪಡಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
39 ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬಳಕೆ: ಜಿಲ್ಲೆಯಲ್ಲಿ ಕ್ಲಿನಿಕ್ ಗಳೂ ಸೇರಿದಂತೆ 815ಕ್ಕೂ ಹೆಚ್ಚು ಆಸ್ಪತ್ರೆಗಳಿವೆ. ಬಾಗಲಕೋಟೆ ನಗರವೊಂದರಲ್ಲೇ 192 ಆಸ್ಪತ್ರೆಗಳಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು 2ನೇ ಮೀರಜ್ ಎಂದೇ ಕರೆಯಲಾಗುತ್ತಿದೆ. ಬಾಗಲಕೋಟೆ ಜಿಲ್ಲೆ ಅಷ್ಟೇ ಅಲ್ಲ ಪಕ್ಷದ ವಿಜಯಪುರ ಜಿಲ್ಲೆಯ ನಿಡಗುಂದಿ, ಬಸವನಬಾಗೇವಾಡಿ, ಮುದ್ದೇಬಿಹಾಳ, ರಾಯಚೂರು ಜಿಲ್ಲೆಯ ಲಿಂಗಸುಗೂರು, ಮಸ್ಕಿ, ಕವಿತಾಳ, ಕೊಪ್ಪಳ ಜಿಲ್ಲೆಯ ಕುಷ್ಟಗಿ, ಗದಗ ಜಿಲ್ಲೆಯ ಗಜೇಂದ್ರಗಡ, ರೋಣ, ನರಗುಂದ, ಬೆಳಗಾವಿ ಜಿಲ್ಲೆಯ ರಾಮದುರ್ಗ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳ ರೋಗಿಗಳು ಬಾಗಲಕೋಟೆಗೆ ಚಿಕಿತ್ಸೆಗೆಂದು ಆಗಮಿಸುತ್ತಾರೆ. ಇದು ಹಲವು ವರ್ಷಗಳಿಂದಲೂ ನಡೆಯುತ್ತಿದೆ.
ಜಿಲ್ಲೆಗೆ ಬಂದ 15 ಕೆ.ಎಲ್ ಆಕ್ಸಿಜನ್: ಜಿಲ್ಲಾ ಕೋವಿಡ್ ಆಸ್ಪತ್ರೆಯೂ ಸೇರಿದಂತೆ 39 ಆಸ್ಪತ್ರೆಗಳಲ್ಲಿ ಸದ್ಯ ಆಕ್ಸಿಜನ್ ಬಳಕೆಯಾಗುತ್ತಿದೆ. ಕಳೆದ ಮೂರು ದಿನಗಳಿಂದ ಹಿಂದೆ ಜಿಲ್ಲೆಗೆ ನಿತ್ಯ 7.50 ಕೆ.ಎಲ್ ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಇದೀಗ ಗುರುವಾರದಿಂದ ಆಕ್ಸಿಜನ್ ಬರುವ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ತೀವ್ರವಾಗಿದ್ದ ಆಕ್ಸಿಜನ್ ಕೊರತೆ ಸದ್ಯಕ್ಕೆ ಸ್ವಲ್ಪ ಮಟ್ಟಿಗೆ ನಿರಾಳವಾಗಿದೆ ಎನ್ನಬಹುದು. ಜಿಲ್ಲೆಗೆ ಎರಡು ದಿನಗಳಿಂದ 15 ಕೆ.ಎಲ್. ಆಕ್ಸಿಜನ್ ಪೂರೈಕೆಯಾಗುತ್ತಿದ್ದು, 39 ಆಸ್ಪತ್ರೆಗಳಿಗೆ ನಿತ್ಯ 400 ಸಿಲಿಂಡರ್‌ಗಳ ಪೂರೈಕೆಯಾಗುತ್ತಿದೆ ಶೇ.30ರಷ್ಟು ವೇಸ್ಟ್!: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 450 ಬೆಡ್‌ಗಳಿದ್ದು, ಸುಮಾರು 300 ಬೆಡ್ ಗಳಿಗೆ ಆಕ್ಸಿಜನ್ ಸೌಲಭ್ಯವಿದೆ. ಇಲ್ಲಿ ನಿತ್ಯ 3 ಕೆ.ಎಲ್. ಆಕ್ಸಿಜನ್ ಬಳಕೆಯಾಗುತ್ತಿದ್ದು, ಅದರಲ್ಲಿ ಶೇ.30ರಷ್ಟು ಆಕ್ಸಿಜನ್ ಸೋರಿಕೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ.
ಖಾಸಗಿ ಆಸ್ಪತ್ರೆ ಮಾಲೀಕರು ಹೇಳುವುದೇ ಬೇರೆ: ಜಿಲ್ಲೆಗೆ ಆಕ್ಸಿಜನ್ ಪೂರೈಕೆಯಲ್ಲಿ ಕಡಿಮೆ ಇದೆ. ನಿತ್ಯವೂ 18ರಿಂದ 20 ಕೆ.ಎಲ್ ಆಕ್ಸಿಜನ್ ಬಳಕೆಯಾಗುತ್ತಿದೆ. ಜಿಲ್ಲಾಡಳಿತವೇ ಹೇಳುವಂತೆ ಜಿಲ್ಲೆಗೆ 10ರಿಂದ 15 ಕೆ.ಎಲ್. ಮಾತ್ರ ಪೂರೈಕೆಯಾಗುತ್ತಿದೆ. ಅಗತ್ಯದಷ್ಟು ಜಿಲ್ಲೆಗೆ ಆಕ್ಸಿಜನ್ ತರುವಲ್ಲಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಕೇವಲ ಸಭೆಯ ಮೇಲೆ ಸಭೆ ನಡೆಸುತ್ತಿದ್ದಾರೆ ಹೊರತು, ಪರಿಹಾರೋಪಾಯ ಪ್ರಮಾಣ ಕಡಿಮೆ. ತಮ್ಮ ನ್ಯೂನ್ಯತೆ ಮುಚ್ಚಿಕೊಳ್ಳಲು ಖಾಸಗಿ ಆಸ್ಪತ್ರೆಗಳು ಆಕ್ಸಿಜನ್ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಗುಮಾನಿ ಹೊರ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಯಾವುದೇ ಸೋಂಕಿತ ವ್ಯಕ್ತಿಗಳೂ ನಮ್ಮವರೇ. ಅವರಿಗೆ ಅಗತ್ಯವಿಲ್ಲದಿದ್ದರೂ ಆಕ್ಸಿಜನ್ ಬಳಕೆ ಮಾಡುವ ಪ್ರಮೇಯ ಬರುವುದಿಲ್ಲ. ಇರುವ ಸೋಂಕಿತರಿಗೆ ಸರಿಯಾಗಿ ಆಕ್ಸಿಜನ್ ಕೊಡಲು ಆಗುತ್ತಿಲ್ಲ.
ಇನ್ನು ಅಗತ್ಯವಿಲ್ಲದವರಿಗೂ ಆಕ್ಸಿಜನ್ ಬಳಕೆ ಮಾಡಲು ಹೇಗೆ ಸಾಧ್ಯ. ಸೋಂಕಿತರಿಗೆ ಯಾರಿಯಾದ ಚಿಕಿತ್ಸೆ, ಆಕ್ಸಿಜನ್ ನೀಡಲು ನಾವು ಸಾಕಷ್ಟು ಪ್ರಯಾಸಪಡುತ್ತಿದ್ದೇವೆ. ಇಂತಹ ಸಂಕಷ್ಟದ ಸಮಯದಲ್ಲಿ ಯಾವ ಆಸ್ಪತ್ರೆಗಳೂ ದುರ್ಬಳಕೆ ಮಾಡಿಕೊಳ್ಳುವ ಸಾಹಸಕ್ಕೆ ಹೋಗುವುದಿಲ್ಲ. ಇಂತಹ ಗುಮಾನಿ ಬಿಟ್ಟು, ಅಗತ್ಯ ಆಕ್ಸಿಜನ್ ಪೂರೈಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಖಾಸಗಿ ಆಸ್ಪತ್ರೆಯವರ ಒತ್ತಾಯ.