Advertisement

ಕಾರ್ಕಳ ತಾ.: ಇಂದಿನಿಂದ ಪ್ಲಾಸ್ಟಿಕ್‌ಗೆ ಕಟ್ಟುನಿಟ್ಟಿನ ನಿಷೇಧ

01:30 AM Dec 01, 2018 | Karthik A |

ಕಾರ್ಕಳ: ರಾಜ್ಯ ಸರಕಾರವು 2016ರ ಎ. 1ರಿಂದ ರಾಜ್ಯದಾದ್ಯಂತ ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸುವ ಕುರಿತಂತೆ ಅಧಿಸೂಚನೆ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನಾದ್ಯಂತ ಈಗಾಗಲೇ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ಡಿ. 1ರಿಂದ ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಾಗಿ ಕ್ರಮ ಜರಗಿಸಿ 5,000 ರೂ.ವರೆಗೆ ದಂಡ ವಿಧಿಸಲು ತಾಲೂಕಾಡಳಿತ ಕ್ರಮ ಕೈಗೊಂಡಿದೆ.

Advertisement

ಕಳೆದ ಆ. 22ರಂದು ಪ್ಲಾಸ್ಟಿಕ್‌ ನಿಷೇಧ ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ತಾ.ಪಂ.ನ ಸಭಾಭವನದಲ್ಲಿ ಸಭೆ ನಡೆಸಲಾಗಿತ್ತು. ಗ್ರಾ.ಪಂ. ಸಿಬಂದಿಗೆ ಸಭೆಯಲ್ಲಿ ನಿಷೇಧದ ಕುರಿತಂತೆ ನಿರ್ದೇಶನ ನೀಡಲಾಗಿದೆ. ಕಳೆದ ಸೆ. 1ರಂದು ಎಲ್ಲ ಗ್ರಾ.ಪಂ.ಗಳಲ್ಲಿ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ವಿಶೇಷ ಗ್ರಾಮಸಭೆ ಕರೆಯಲಾಗಿತ್ತು. ಈ ಸಭೆ ಕಡ್ಡಾಯ ಪ್ಲಾಸ್ಟಿಕ್‌ ನಿಷೇಧ ಹಾಗೂ ಪರ್ಯಾಯ ಕ್ರಮಗಳ ಬಗ್ಗೆ ಚರ್ಚಿಸಿ ನಿಯಮಾವಳಿ ರಚಿಸಿ (ಬೈಲಾ) ನಿಯಮ ಉಲ್ಲಂಘಿಸಿದವರಿಗೆ ವಿಧಿಸುವ ದಂಡನೆ ಇತ್ಯಾದಿಗಳ ನಿರ್ಣಯ ಕೈಗೊಂಡಿತ್ತು.

ಅ. 2ರ ಗಾಂಧಿ ಜಯಂತಿಯಂದು ಬೃಹತ್‌ ರ್ಯಾಲಿಯೊಂದಿಗೆ ಪ್ಲಾಸ್ಟಿಕ್‌ ಮುಕ್ತ ಕಾರ್ಕಳಕ್ಕೆ ಚಾಲನೆ ನೀಡಲಾಗಿತ್ತು. ಆದರೂ ತಾಲೂಕಿನ ಕೆಲವೆಡೆ ಪ್ಲಾಸ್ಟಿಕ್‌ ಬಳಕೆ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ತಾಲೂಕಾಡಳಿತ ನಿಯಂತ್ರಿಸಲು ಪ್ರತ್ಯೇಕ ಜಾಗೃತ ದಳವನ್ನು ರಚಿಸಿದೆ.

ಪ್ರತ್ಯೇಕ ಜಾಗೃತದಳ
ಪ್ಲಾಸ್ಟಿಕ್‌ ನಿಷೇಧ ಉಲ್ಲಂಘಿಸದಂತೆ, ತಾಲೂಕು ಮಟ್ಟದ ಪ್ರತ್ಯೇಕ ಜಾಗೃತ ದಳ ರಚಿಸಲಾಗಿದೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್‌, ಪುರಸಭೆ ಮುಖ್ಯಾಧಿಕಾರಿ, ಪಿಎಸ್‌ಐ ನಗರ ಠಾಣೆ, ಪಿಎಸ್‌ಐ ಗ್ರಾಮಾಂತರ ಠಾಣೆ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ತಂಡದಲ್ಲಿದ್ದಾರೆ. ಗ್ರಾ.ಪಂ. ಮಟ್ಟದಲ್ಲಿ ಪಿಡಿಒ, ಗ್ರಾಮಕರಣಿಕರು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಗ್ರಾಮದ ಪಿ.ಸಿ., ಸಿ.ಆರ್‌.ಪಿ. ಹಾಗೂ ಗ್ರಾ.ಪಂ. ನೋಡಲ್‌ ಅಧಿಕಾರಿಗಳು ಈ ತಂಡದಲ್ಲಿದಾರೆ ಎಂದು ಕಾರ್ಯನಿರ್ವಾಹಕ ಅಧಿಕಾರಿ, ಡಾ| ಮೇಜರ್‌ ಹರ್ಷ ಕೆ.ಬಿ., ತಹಶೀಲ್ದಾರ್‌ ಇಸಾಕ್‌ ಅಹಮ್ಮದ್‌, ಪುರಸಭೆ ಮುಖ್ಯಾಧಿಕಾರಿ ಮೇಬಲ್‌ ಡಿ’ಸೋಜಾ ಅವರು ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಏನೆಲ್ಲ ನಿಷೇಧ ?
ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ಪ್ಲಾಸ್ಟಿಕ್‌ ಭಿತ್ತಿಪತ್ರ, ಪ್ಲಾಸ್ಟಿಕ್‌ ತೋರಣ, ಫ್ಲೆಕ್ಸ್‌, ಬಾವುಟ, ಪ್ಲಾಸ್ಟಿಕ್‌ ಲೋಟ, ಪ್ಲಾಸ್ಟಿಕ್‌ ತಟ್ಟೆ, ಪ್ಲಾಸ್ಟಿಕ್‌ ಚಮಚ, ಕಿಂಗ್‌ ಫಿಲ್ಮ್, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್‌ ಹಾಳೆಗಳು, ಥರ್ಮೊಕೂಲ್‌ ಮುಂತಾದ ವಸ್ತುಗಳ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತು ವಿತರಿಸುವುದನ್ನು ಪೂರ್ಣ ನಿಷೇಧಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next