Advertisement

Kerala border: ಕೇರಳ ಗಡಿಯಲ್ಲಿ ಆರೋಗ್ಯ ಇಲಾಖೆಯಿಂದ ಬಿಗಿ ತಪಾಸಣೆ

03:20 PM Dec 21, 2023 | Team Udayavani |

ಗುಂಡ್ಲುಪೇಟೆ: ಕೇರಳದಲ್ಲಿ ಕೊರೊನಾ ರೂಪಾಂತರಿ ವೈರಸ್‌ ಜೆಎನ್‌-1 ಹೆಚ್ಚಳವಾಗುತ್ತಿರುವ ಹಿನ್ನೆಲೆ ತಾಲೂಕಿನ ಗಡಿ ಮೂಲೆಹೊಳೆ ಚೆಕ್‌ ಪೋಸ್ಟ್‌ನಲ್ಲಿ ಬುಧವಾರ ಬೆಳಗ್ಗೆಯಿಂದ ಆರೋಗ್ಯ ಇಲಾಖೆಯಿಂದ ತಪಾಸಣೆ ಆರಂಭಿಸಿ, ಕಟ್ಟೆಚ್ಚರ ವಹಿಸಲಾಗಿದೆ.

Advertisement

ಬಂಡೀಪುರದ ಮೂಲೆಹೊಳೆ ಚೆಕ್‌ ಪೋಸ್ಟ್‌ ಮೂಲಕ ರಾಜ್ಯ ಪ್ರವೇಶಿಸುವ ಪ್ರತಿ ಯೊಂದು ವಾಹನ ಚಾಲಕರು, ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ಆರೋಗ್ಯ ಇಲಾಖೆಯಿಂದ ಇಬ್ಬರು ಕಮ್ಯೂನಿಟಿ ಅಧಿಕಾರಿಗಳನ್ನು ನಿಯೋಜಿ ಸಲಾಗಿದೆ. ತಪಾಸಣೆ ವೇಳೆ ಜ್ವರ, ನೆಗಡಿ, ಕೆಮ್ಮು ಕಂಡುಬಂದರೆ ಅಂಥವರ ಹೆಸರು, ವಿಳಾಸ ಮತ್ತು ಮೊಬೈಲ್‌ ನಂಬರ್‌ ಪಡೆದು, ಪ್ರಯಾಣಿಕರು ಎಲ್ಲಿಗೆ ತೆರಳುತ್ತಾರೋ ಆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ರವಾನಿಸಲಾಗುತ್ತಿದೆ.

ಗಡಿ ಅಂಚಿನ ಗ್ರಾಮಗಳ ಮೇಲೆ ನಿಗಾ: ಕೇರಳ ಗಡಿ ಅಂಚಿಕೊಂಡಿರುವ ಕನ್ನೇಗಾಲ, ಬೇರಂಬಾಡಿ, ಮದ್ದೂರು, ಭೀಮನಬೀಡು, ಕೂತನೂರು ಸೇರಿದಂತೆ ಇನ್ನಿತರ ಹಲವು ಗ್ರಾಮಸ್ಥರು ಪ್ರತಿನಿತ್ಯ ಕೂಲಿ ಕೆಲಸಕ್ಕೆಂದು ಕೇರಳಕ್ಕೆ ತೆರಳಲಿ ವಾಪಸ್‌ ಆಗುತ್ತಾರೆ. ಇಂಥವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದ್ದು, ಪ್ರತಿ ಮನೆ ಮನೆಗೆ ತೆರಳಿ ಆರೋಗ್ಯ ಸಮಸ್ಯೆ ಕುರಿತು ವಿಚಾರಣೆ ನಡೆಸಲು ಆಯಾಯ ಸ್ಥಳೀಯ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗೆ ಸೂಚಿಸ ಲಾಗಿದೆ. ಜ್ವರ ಅಥವಾ ಕೆಮ್ಮು ಸೇರಿದಂತೆ ಕೋವಿಡ್‌ ಲಕ್ಷಣ ಕಂಡು ಬಂದರೆ ತಕ್ಷಣ ಅಂತವರನ್ನು ತಪಾಸಣೆ ಒಳಪಡಿಸಲು ಸಿದ್ಧತೆ ನಡೆಸಲಾಗಿದೆ.

ಶಬರಿಮಲೆಗೆ ಯಾತ್ರಿಗಳ ಮೇಲೆ ಹದ್ದಿನ ಕಣ್ಣು: ರಾಜ್ಯದಿಂದ ಸಾವಿರಾರು ಜನರು ನೂರಾರು ವಾಹನಗಳಲ್ಲಿ ಶಬರಿಮಲೆಗೆ ತೆರಳಿ ಮೂಲೆಹೊಳೆ ಚೆಕ್‌ಪೋಸ್ಟ್‌ ಮೂಲಕ ವಾಪಸ್‌ ಆಗುತ್ತಿದ್ದಾರೆ. ಇವರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಪ್ರತಿಯೊಬ್ಬರ ವ್ಯಕ್ತಿಯನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿದೆ. ಕೇರಳದಲ್ಲಿ ಕೊರೊನಾ ರೂಪಾಂತರಿ ವೈರಸ್‌ ಜೆ.ಎನ್‌-1 ಹೆಚ್ಚಳವಾಗುತ್ತಿರುವ ಕಾರಣ ರಾಜ್ಯದ ಜನರು ಶಬರಿಮಲೆ ಯಾತ್ರೆಯನ್ನು ಕೈಬಿಡಲು ಅಥವಾ ಮುಂದೂಡಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

Advertisement

ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿ ಪರಿಶೀಲನೆ: ಕೇರಳ ಗಡಿ ಮೂಲೆಹೊಳೆ ಚೆಕ್‌ ಪೋಸ್ಟ್‌ ನಲ್ಲಿ ಕೊರೊನಾ ರೂಪಾಂತರಿ ವೈರಸ್‌ ಜೆ.ಎನ್‌-1 ಕುರಿತು ತಪಾಸಣೆ ಆರಂಬಿಸಿದ ಹಿನ್ನೆಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಂಬರಂ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಭೇಟಿ ನೀಡಿ, ಪರಿಶೀಲನೆ ನಡೆಸಿ ಪರಿಸ್ಥಿತಿ ಅವಲೋಕಿಸಿ, ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದಾರೆ.

ತಾ. ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಮೇತ 20 ಬೆಡ್‌ ವ್ಯವಸ್ಥೆ :

ಕೊರೊನಾ ರೂಪಾಂತರಿ ವೈರಸ್‌ನ ತೀವ್ರತೆ ಹೆಚ್ಚು ಕಂಡ ಬಂದರೆ ಮೂಲೆಹೊಳೆ ಚೆಕ್‌ ಪೋಸ್ಟ್‌ನಲ್ಲಿಯೇ ರ್ಯಾಪಿಡ್‌ ಟೆಸ್ಟ್‌ ಮಾಡಲು ಸಿದ್ಧತೆ ನಡೆಸಲಾಗಿದೆ. ಜೊತೆಗೆ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಆಕ್ಸಿಜನ್‌ ಒಳಗೊಂಡ 20 ಬೆಡ್‌ ವ್ಯವಸ್ಥೆ ಮಾಡಲಾಗಿದ್ದು, ಪ್ರಕರಣ ಹೆಚ್ಚಾದರೆ ಕಗ್ಗಳದಹುಂಡಿ ಆರೋಗ್ಯ ಕೇಂದ್ರದಲ್ಲಿಯು ಸಹ ಚಿಕಿತ್ಸೆ ನೀಡಲು ತಯಾರಿ ನಡೆಸಲಾಗಿದೆ ಎಂದು ಆರೋಗ್ಯಾಧಿಕಾರಿ ಅಲೀಂ ಪಾಷಾ ಮಾಹಿತಿ ನೀಡಿದರು.

ಗಡಿಯಂಚಿನ ಗ್ರಾಮಗಳಲ್ಲಿ ಕೊರೊನಾ ಜಾಗೃತಿ:

ಗುಂಡ್ಲುಪೇಟೆ: ನೆರೆಯ ಕೇರಳದಲ್ಲಿ ಕೊರೊನಾ ರೂಪಾಂತರಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿಯಂಚಿನ ಗ್ರಾಮಗಳಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ ಜನರಿಗೆ ಪ್ರತಿ ಮನೆ

ಮನೆಗೂ ತೆರಳಿ ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸಲಾಯಿತು. ತಾಲೂಕಿನ ಮದ್ದೂರಿನ ವಾಲ್ಮೀಕಿ ಆಶ್ರಮ ಸೇರಿದಂತೆ ಹಲವು ಗಡಿ ಗ್ರಾಮಗಳಿಗೆ ಆರೋಗ್ಯಾಧಿಕಾರಿ ಸ್ವಾಮಿ ನೇತೃತ್ವದ ತಂಡ ಭೇಟಿ ನೀಡಿ ಗ್ರಾಮದ ಜನರಿಗೆ ಕೋವಿಡ್‌ ಬಗ್ಗೆ ಆತಂಕ ಬೇಡ ಮುನ್ನೆಚ್ಚರಿಕೆ ವಹಿಸಬೇಕು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕೊರೋನಾ ವೈರಸ್‌ ಬೇಗ ತಲುಗಲಿದ್ದು, ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ. ಹಾಗಾಗಿ 60ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮನವಿ ಮಾಡಿಕೊಂಡರು. ಶಬರಿಮಲೆ ಯಾತ್ರಾರ್ಥಿ ಗಳು ಮತ್ತು ಕೆಲಸಕ್ಕೆ ಕೇರಳಕ್ಕೆ ತೆರಳಿರುವ ಕೂಲಿ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಹಿಂದಿರುಗುವ ಸಮಯದಲ್ಲಿ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ನಡೆಸಬೇಕು. ವರದಿ ಬರುವವರೆಗೆ ಸೋಂಕಿತರ ಜೊತೆ ಯಾವುದೇ ರೀತಿಯ ಸಂಪರ್ಕ ಇಟ್ಟುಕೊಳ್ಳದೆ ಅಂತರ ಕಾಯ್ದು ಕೊಳ್ಳುವಂತೆ ಸಲಹೆ ನೀಡಿದರು.ಗ್ರಾಮದಲ್ಲಿ ಒಬ್ಬರಿಗೆ ಕೋವಿಡ್‌ ಧೃಡಪಟ್ಟರೆ ಇಡೀ ಗ್ರಾಮವನ್ನು ಸೀಲ್‌ ಡೌನ್‌ ಮಾಡುವ ಪರಿಸ್ಥಿತಿ ಬರಬಹುದು. ಹಾಗಾಗಿ ಜ್ವರ, ಶೀತ ಮತ್ತು ನೆಗಡಿ ಕಂಡು ಬಂದರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿದರು.

ಮೂಲೆ ಹೊಳೆ ಚೆಕ್‌ ಪೋಸ್ಟ್‌ ನಲ್ಲಿ ಆರೋಗ್ಯ ಇಲಾಖೆ ಕಮ್ಯೂನಿಟಿ ಅಧಿಕಾರಿಗಳಿಂದ ಬುಧವಾರ ಬೆಳಗ್ಗೆ ಯಿಂದ ತಪಾಸಣೆ ಆರಂಭಿಸಲಾಗಿದ್ದು, ಜ್ವರ, ನೆಗಡಿ, ಕೆಮ್ಮು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆ ಇರುವವರ ಮೇಲೆ ನಿಗಾ ವಹಿಸಲಾಗಿದೆ. ಇಲ್ಲಿಯ ವರೆಗೆ ಕೊರೊನಾ ರೂಪಾಂತರಿ ವೈರಸ್‌ ಜೆ.ಎನ್‌-1 ಸಂಬಂಧಿತ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ.– ಡಾ.ಅಲೀಂ ಪಾಷಾ, ತಾ. ಆರೋಗ್ಯಾಧಿಕಾರಿ, ಗುಂಡ್ಲುಪೇಟೆ 

-ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next