Advertisement

ಮನೆಯೂಟಕ್ಕೆ ಕೊಕ್‌; ಹಣ್ಣು ಹಂಪಲು ಸಾಕ್‌

11:45 AM Jul 25, 2017 | Team Udayavani |

ಕೈದಿಗಳ ಪಾರ್ಟಿ ಫೋಟೊ ವೈರಲ್‌ ಪರಿಣಾಮ 
ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಇತ್ತೀಚೆಗೆ ಪಾರ್ಟಿ ನಡೆಸಿದ ಬಗೆಗಿನ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆದ ಬಳಿಕ ಕೆಲವೊಂದು ಹೊಸ ಬೆಳವಣಿಗೆಗಳಾಗಿದ್ದು, ಇದೀಗ ಸಂಬಂಧಿಕರಿಂದ ಮತ್ತು ಹಿತೈಷಿಗಳಿಂದ ಕೈದಿಗಳಿಗೆ ಆಹಾರ ಪೂರೈಕೆ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಂಡು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಈ ಫೋಟೊ ಇದೇ ಜೈಲಿನಲ್ಲಿ ಸುಮಾರು ಮೂರು ತಿಂಗಳ ಹಿಂದೆ ನಡೆದ ಪಾರ್ಟಿಯ ಫೋಟೊ ಹೌದು ಎಂಬುದನ್ನು ಬಂದೀಖಾನೆ ಇಲಾಖೆಯ ಹಿರಿಯ ಅಧಿಕಾರಿಗಳು ದೃಢೀಕರಿಸಿದ್ದಾರೆ.

Advertisement

ವೈರಲ್‌ ಆದ ಫೋಟೋದಲ್ಲಿ ಕಾಣುವ ಕೈದಿಗಳ ಪೈಕಿ ಇಬ್ಬರು ಈಗಾಗಲೇ ಕಳೆದ ಮೇ 11ರಂದು ಬಿಡುಗಡೆಯಾಗಿ ಹೋಗಿದ್ದಾರೆ. ಈ ಇಬ್ಬರು ಬಿಡುಗಡೆಯಾಗಿ ಹೋಗುವ ಸಂದರ್ಭದಲ್ಲಿ ಈ ಪಾರ್ಟಿಯನ್ನು ಏರ್ಪಡಿಸಲಾಗಿತ್ತೇ ಅಥವಾ ಅದಕ್ಕಿಂತ ಮೊದಲು ನಡೆದ ಪಾರ್ಟಿಯೇ ಎನ್ನುವುದು ಖಚಿತವಾಗಿಲ್ಲ  ಎಂದು ಜೈಲಿನ ಮೂಲಗಳು ತಿಳಿಸಿವೆ. ಇದೀಗ ಕೈದಿಗಳಿಗೆ ಅನ್ನ, ಸಾರು, ಪಲ್ಯವನ್ನು ಸರಬರಾಜು ಮಾಡುವುದನ್ನು ನಿರ್ಬಂಧಿಸಲಾಗಿದೆ. ಹಣ್ಣು ಹಂಪಲು ಮತ್ತು ಡ್ರೈಫ್ರುಟ್‌ಗಳನ್ನು ಮಾತ್ರ ಕೈದಿಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮೂಲಗಳು ವಿವರಿಸಿವೆ. 

ಜೈಲುಗಳಲ್ಲಿ ಕೈದಿಗಳಿಗೆ ನೀಡಲಾಗುತ್ತಿರುವ ಆಹಾರಗಳಲ್ಲಿ ಈಗ ಬಹಳಷ್ಟು ಸುಧಾರಣೆಯಾಗಿದೆ. ಮಂಗಳವಾರ ಮೊಟ್ಟೆ  ಮತ್ತು ಶುಕ್ರವಾರ ಚಿಕನ್‌/ ಮಟನ್‌ ನೀಡಲಾಗುತ್ತದೆ. ಬೆಳಗ್ಗಿನ ಉಪಾಹಾರ ಈ ಹಿಂದೆ ಗಂಜಿ ಊಟ ಇದ್ದರೆ ಈಗ ದಿನಕ್ಕೊಂದು ವೆರೈಟಿಯ ತಿಂಡಿ (7 ದಿನಗಳಲ್ಲಿ 7 ಬಗೆಯ ತಿಂಡಿ) ನೀಡಲಾಗುತ್ತದೆ. 

ಕೈದಿಗಳು ನಾಲ್ಕು ಗೋಡೆಗಳ ಮಧ್ಯೆ ಬಂಧಿಗಳಾಗಿದ್ದರೂ ಆವರಿಗೆ ಹೊಟ್ಟೆ ತುಂಬಾ ಆಹಾರ ನೀಡಲಾಗುತ್ತದೆ. ಅದರಲ್ಲೂ ದಿನಕ್ಕೊಂದು ವೆರೈಟಿಯ ಆಹಾರ ಲಭಿಸುತ್ತಿರುವುದರಿಂದ ಅವರಿಗೆ ಹೊರಗಿನಿಂದ ಆಹಾರ ಒದಗಿಸುವ ಆವಶ್ಯಕತೆ ಇರುವುದಿಲ್ಲ. ಅಪರೂಪಕ್ಕೆ ಹಬ್ಬದ ದಿನಗಳಲ್ಲಿ ಬೇಕಿದ್ದರೆ ಹೊರಗಿನಿಂದ ಆಹಾರ ಪೂರೈಕೆಗೆ ಅವಕಾಶ ಕಲ್ಪಿಸಬಹುದು. ಉಳಿದ ದಿನಗಳಲ್ಲಿ ಆಹಾರ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಜೈಲಿನ ಪರಿಸ್ಥಿತಿ ಸುಧಾರಿಸಬಹುದು ಎಂದು ಹೆಸರು ಹೇಳಲಿಚ್ಛಿಸದ ಜೈಲು ಸಿಬಂದಿಯೊಬ್ಬರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next