Advertisement
ರಾಜ್ಯದ ಎಲ್ಲೆಡೆ ಕನಿಷ್ಠ ಐದು ಗುಂಟೆ ಹಾಗೂ ಕೊಡಗು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕನಿಷ್ಠ ಮೂರು ಗುಂಟೆ (7.5 ಸೆಂಟ್ಸ್) ಭೂಮಿಗಿಂತ ಕಡಿಮೆ ಅಳತೆಯ ಕೃಷಿ ಭೂಮಿ ಮಾರಾಟ- ಖರೀದಿ ಸಂಬಂಧ 11ಇ ನಕ್ಷೆ, ಪೋಡಿ, ಆರ್‌ಟಿಸಿ ನೀಡುವುದನ್ನು ನಿಷೇಧಿಸಲು ಕಂದಾಯ ಇಲಾಖೆ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಸರಕಾರ ಈ ಕನಿಷ್ಠ ಮಿತಿಯನ್ನು ಕ್ರಮವಾಗಿ 10 ಮತ್ತು ಆರು ಗುಂಟೆಗೆ ನಿಗದಿಪಡಿಸಲು ಚಿಂತಿಸಿದ್ದು, ಸದ್ಯದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.
ನಗರೀಕರಣ ಹೆಚ್ಚಾಗುತ್ತಿದ್ದಂತೆ ಕೃಷಿ ಭೂಮಿ ಯನ್ನು ಅಕ್ರಮವಾಗಿ ಕೃಷಿಯೇತರ ಚಟುವಟಿಕೆಗೆ ಬಳಸಲಾಗುತ್ತಿದೆ. ಒಂದೆರಡು ಗುಂಟೆ ಕೃಷಿ ಭೂಮಿ ಖರೀದಿಸಿ ಮನೆಗಳನ್ನು ನಿರ್ಮಿಸಿಕೊಳ್ಳಲಾಗುತ್ತಿದೆ.ಇದು ರಿಯಲ್ ಎಸ್ಟೇಟ್ ದಂಧೆಗೂ ಕಾರಣವಾಗಿದೆ. ಜತೆಗೆ ಎಲ್ಲೆಂದರಲ್ಲಿ ಮನೆಗಳು, ಗುಂಪು ಮನೆಗಳು ನಿರ್ಮಾಣವಾಗುತ್ತಿರುವುದರಿಂದ ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಸಮಸ್ಯೆ ತಲೆದೋರುತ್ತಿದ್ದು, ನೈರ್ಮಲ್ಯ ಕೆಡುವ ಆತಂಕ ಎದುರಾಗಿದೆ.
Related Articles
Advertisement
ನೋಂದಣಿಗೆ ಕನಿಷ್ಠ ಮಿತಿಕೃಷಿ ಭೂಮಿ ಮಾರಾಟ, ಖರೀದಿ ನೋಂದಣಿಗೆ ಕನಿಷ್ಠ ಮಿತಿ ನಿಗದಿಪಡಿಸುವ ಬಗ್ಗೆ ಕಂದಾಯ ಇಲಾಖೆ ಹಿಂದಿನಿಂದಲೂ ಚಿಂತನೆ ನಡೆಸಿತ್ತು. ಅದರಂತೆ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 3 ಗುಂಟೆ (7.5 ಸೆಂಟ್ಸ್) ಹಾಗೂ ಕರಾವಳಿಯೇತರ ಜಿಲ್ಲೆಗಳಲ್ಲಿ 5 ಗುಂಟೆ ಮಿತಿ ನಿಗದಿಪಡಿಸಲು ಕಂದಾಯ ಇಲಾಖೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಕೃಷಿ ಚಟುವಟಿಕೆ ಅಸಾಧ್ಯ
ಅರ್ಧ ಗುಂಟೆ, ಒಂದೆರಡು ಗುಂಟೆಯಷ್ಟು ಚಿಕ್ಕ ಜಾಗದಲ್ಲಿ ಕೃಷಿ ಚಟುವಟಿಕೆ ನಡೆಸುವುದು ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಿದ್ದರೂ ಕಾನೂನಿನಲ್ಲಿ ಅವಕಾಶವಿರುವ ಕಾರಣ ನೋಂದಣಿ ನಡೆಯುತ್ತಿದೆ. ಹಾಗಾಗಿ ಕೃಷಿ ಭೂಮಿ ಪ್ರಮಾಣ ಕಡಿಮೆಯಾಗುತ್ತಿದ್ದು, ನಗರೀಕರಣಕ್ಕೆ ಇನ್ನಷ್ಟು ಉತ್ತೇಜನ ನೀಡಿದಂತಾಗಿದೆ. ಸರಕಾರ ಕನಿಷ್ಠ ಮಿತಿ ನಿಗದಿಪಡಿಸಿ ಕಟ್ಟು ನಿಟ್ಟಾಗಿ ಜಾರಿಗೆ ತಂದರೆ ಇದಕ್ಕೆ ನಿಯಂತ್ರಣ ಹಾಕಲು ನೆರವಾಗಲಿದೆ ಎನ್ನುತ್ತವೆ ಮೂಲಗಳು. ಮಿತಿ ಹೆಚ್ಚಳಕ್ಕೆ ಚಿಂತನೆ
ಕರಾವಳಿ ಜಿಲ್ಲೆಗಳು ಮತ್ತು ಕರಾವಳಿಯೇತರ ಜಿಲ್ಲೆಗಳಲ್ಲಿ ಕನಿಷ್ಠ ಮಿತಿ ನಿಗದಿಪಡಿಸಿ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಸರಕಾರ ಪ್ರಸ್ತಾವಿತ ಕನಿಷ್ಠ ಮಿತಿಯನ್ನು ಮಾರ್ಪಡಿಸಲು ಚಿಂತನೆ ನಡೆಸಿದೆ. ಕೊಡಗು ಸೇರಿದಂತೆ ಕರಾವಳಿಯಲ್ಲಿ 3ರ ಬದಲಿಗೆ 6 ಗುಂಟೆ (15 ಸೆಂಟ್ಸ್) ಮತ್ತು ಇತರ ಜಿಲ್ಲೆಗಳಲ್ಲಿ 5 ಗುಂಟೆಗೆ ಬದಲಾಗಿ 10 ಗುಂಟೆ ಮಿತಿ ನಿಗದಿಪಡಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ. ಬೇಕಾಬಿಟ್ಟಿ ನಗರೀಕರಣಕ್ಕೆ ತಡೆ
ಕಡಿಮೆ ಅಳತೆಯ ಕೃಷಿ ಭೂಮಿ ಪಡೆದು ಅದನ್ನು ಕೃಷಿಯೇತರ ಚಟುವಟಿಕೆಗೆ ಬಳಸುವುದು ಹೆಚ್ಚಾಗಿದೆ. ಇದರಿಂದ ಅವ್ಯವಸ್ಥಿತ ನಗರೀಕರಣಕ್ಕೆ ಅವಕಾಶ ಕೊಟ್ಟಂತಾಗುತ್ತದೆ. ಆ ಹಿನ್ನೆಲೆಯಲ್ಲಿ ಕನಿಷ್ಠ ಭೂಮಿ ಮಿತಿ ನಿಗದಿಪಡಿಸುವ ಸಂಬಂಧ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರಕಾರದ ನಿರ್ಧಾರ ಆಧರಿಸಿ ಕ್ರಮ ಕೈಗೊಳ್ಳಲಾಗುವುದು.
– ಎನ್. ಮಂಜುನಾಥ ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ