ವಿಜಯಪುರ: ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚಲು ಅದರಲ್ಲೂ ಪರವಾನಿಗೆ ಪಡೆದಿರುವ ಪ್ರದೇಶ ಹಾಗೂ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದ ಕುರಿತು ಪರಿಶೀಲನೆ ನಡೆಸಲು ಜಿಲ್ಲಾಡಳಿತ ಡಿಜಿಪಿಎಸ್ ತಂತ್ರಜ್ಞಾನ ಬಳಸಲು ಮುಂದಾಗಿದೆ.
ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸಲು 89 ಗಣಿಗಳಿಗೆ ಪರವಾನಿಗೆ ನೀಡಿದ್ದರೆ, ಕಲ್ಲು ಕತ್ತರಿಸುವ ಕ್ರಸಿಂಗ್ ನಡೆಸಲು 83 ಲೈಸೆನ್ಸ್ ನೀಡಿದ್ದು, ಈಚೆಗೆ ಮತ್ತೆ 4 ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ. ಆದರೆ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಕೇಂದ್ರಗಳಲ್ಲಿ ಸೊ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ ನಡೆಸಲು ಪರವಾನಿಗೆ ಪಡೆದಿರುವ ಕುರಿತು ಜಿಲ್ಲಾಡಳಿತ ಪರಿಶೀಲನೆ ನಡೆಸಲು ಮುಂದಾಗಿದೆ.
ಕಲ್ಲು ಗಣಿಗಾರಿಕೆ ನಡೆಸಲು ಜಿಲ್ಲೆಯಲ್ಲಿ ಅನುಮತಿ ನೀಡಿದ ಪ್ರದೇಶಗಳಲ್ಲಿ ನಿಯಮ ಮೀರಿ, ಸಾಮರ್ಥ್ಯ ಮೀರಿ ಕಲ್ಲು ಗಣಿಗಾರಿಕೆ ನಡೆಸಿದ ಕುರಿತು ಜಿಲ್ಲಾಡಳಿತ ಪರಿಶೀಲನೆಗೆ ಮುಂದಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಪರವಾನಿಗೆ ಪಡೆದ ಪ್ರದೇಶದಲ್ಲೂ ಪರಿಮಿತಿ ಸಾಮರ್ಥ್ಯ ಮೀರಿ ಗಣಿಗಾರಿಕೆ ನಡೆಸಿದ್ದನ್ನು ಪತ್ತೆ ಹಚ್ಚಲು ಡಿಜಿಪಿಎಸ್ ತಂತ್ರಜ್ಞಾನ ಬಳಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸುನೀಲಕುಮಾರ ಮಾಹಿತಿ ನೀಡಿದ್ದಾರೆ.
“ಉದಯವಾಣಿ’ ಜತೆ ಮಾತನಾಡಿದ ಜಿಲ್ಲಾಧಿಕಾರಿ ಸುನೀಲಕುಮಾರ, 2018ರಲ್ಲಿ ಸರ್ಕಾರ ಪರವಾನಿಗೆ ಸಹಿತ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಪ್ರದೇಶದಲ್ಲಿ ಮತ್ತೆ 20 ವರ್ಷ ನವೀಕರಿಸಿದೆ. ಹೀಗಾಗಿ ನವೀಕೃತ ಕಲ್ಲು ಗಣಿಗಾರಿಕೆ, ಅಕ್ರಮ ಗಣಿಗಾರಿಕೆ, ಸ್ಫೋಟಕ ಬಳಕೆ ಕುರಿತು ಅಮೂಲಾಗ್ರ ಸಮೀಕ್ಷೆ ನಡೆಸುತ್ತೇನೆ. ಇದಕ್ಕಾಗಿ ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳ ಹಾಗೂ ಲೈಸೆನ್ಸ್ ಹೊಂದಿರುವ ಗಣಿಗಾರಿಕೆ ಮಾಲೀಕರು, ಕಲ್ಲು ಕಡಿ ಮಾಡುವ ಘಟಕಗಳ ಮಾಲೀಕರ ಸಭೆ ಕರೆದು ಪರಿಶೀಲನೆ ನಡೆಸುವುದಾಗಿ ಹೇಳಿದರು.
ಪರವಾನಿಗೆ ಪಡೆದಿರುವ ಪ್ರದೇಶದಲ್ಲಿ ಅಕ್ರಮವಾಗಿ ಅಧಿ ಕ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಸಿದ್ದಲ್ಲಿ ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಿದೆ. ಇದರಿಂದ ಸಕ್ರಮದ ಹೆಸರಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ರಾಯಲ್ಟಿ ಕಟ್ಟುವುದನ್ನು ವಂಚಿಸಿರುವ ಪ್ರಕರಣಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಿದೆ. ಹೀಗಾಗಿ ಜಿಲ್ಲೆಯಲ್ಲಿ ಡಿಜಿಪಿಎಸ್ ತಂತ್ರಜ್ಞಾನದ ಮೂಲಕ ಗಣಿಗಾರಿಕೆ ಪರಿಶೀಲನೆ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಂಡು, ಸರ್ಕಾರಕ್ಕೆ ರಾಯಲ್ಟಿ ಕಟ್ಟುವಿಕೆಯಲ್ಲಿ ವಂಚನೆ ಆಗಿದ್ದರೆ ದಂಡ ವಿಧಿಸಿ, ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ವಿವರಿಸಿದರು.
ಕಲ್ಲು ಗಣಿಗಾರಿಕೆಯಲ್ಲಿ ಕಾನೂನು ಬದ್ಧವಾಗಿ ಸ್ಫೋಟಕ ಬಳಸಲು ಚೆನ್ನೈನಲ್ಲಿರುವ ಸ್ಫೋಟಕ ಬಳಕೆ ಅನುಮತಿ ಪ್ರಾ ಧಿಕಾರದಿಂದ ಪರವಾನಿಗೆ ಪಡೆದಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೇ ಸಕ್ರಮವಾಗಿಸ್ಫೋಟಕ ಬಳಸುವಲ್ಲಿ ನಿಯಮ ಪಾಲನೆ ಆಗುತ್ತಿದೆಯೇ, ಒಂದೊಮ್ಮೆ ಅಕ್ರಮವಾಗಿ ಕಾನೂನು ಬಾಹೀರವಾಗಿ ಸ್ಫೋಟಕ ಬಳಸುತ್ತಿರುವ ದೂರು ಇದ್ದಲ್ಲಿ, ಅಕ್ರಮ ಪ್ರಕರಣ ಕಂಡು ಬಂದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.