ಜಗಳೂರು: ಅತಿ ಹಿಂದುಳಿದಿರುವ ಜಗಳೂರು ತಾಲೂಕಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ (ಡಬ್ಲ್ಯುಪಿಎಂಕೆಎಸ್‌ವೈ 2.0) ಯೋಜನೆ ಯಶಸ್ವಿಗೊಳಿಸಲು ಕೃಷಿ ಇಲಾಖೆ ಸರ್ವಸನ್ನದ್ಧವಾಗಿದೆ. ಒಂದು ವೇಳೆ ಯಾರಾದರೂ ಈ ಯೋಜನೆಯಲ್ಲಿ ಕಳಪೆ ಕಾಮಗಾರಿಗಳನ್ನು ಮಾಡಿದರೆ ಮುಲಾಜಿಲ್ಲದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ಶ್ರೀನಿವಾಸಲು ಎಚ್ಚರಿಕೆ ನೀಡಿದರು.
ಕೃಷಿ ಇಲಾಖೆವತಿಯಿಂದ ಪಟ್ಟಣದ ಪಶು ಸಂಗೋಪನಾ ಇಲಾಖೆಯ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಜಲಾನಯನ ಅಭಿವೃದ್ಧಿ ಘಟಕ-2.0 ಹಮ್ಮಿಕೊಂಡಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಶಾಸಕ ಎಸ್.ವಿ.ರಾಮಚಂದ್ರ ಅವರ ಕಾಳಜಿಯಿಂದ ತಾಲೂಕಿನ ಯೋಜನಾ ವ್ಯಾಪ್ತಿಯ 5340 ಹೆಕ್ಟೇರ್ ವ್ಯಾಪ್ತಿಯಲ್ಲಿ 11.74 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೊಂಡಿದೆ. 20 ಹಳ್ಳಿಗಳ ಆರು ಕಾರ್ಯಕಾರಿ ಸಮಿತಿ ಒಳಗೊಂಡಿರುತ್ತದೆ ಎಂದರು.
ಈ ಕಾರ್ಯಕ್ರಮದ ಅಡಿಯಲ್ಲಿ ಬೀದಿ ನಾಟ ಮೂಹ ಮಾಧ್ಯಮಗಳ ಸಹಾಯದಿಂದ ಡಬ್ಲ್ಯುಪಿಎಂಕೆಎಸ್‌ವೈ 2.0 ಯೋಜನೆ ಬಗ್ಗೆ ಪ್ರಚಾರ ನೀಡಲಾಗಿದೆ. 2022-23ನೇ ಸಾಲಿನ ಯೋಜನೆಗೆ ಸಂಬಂಧ ಪಟ್ಟಂತೆ ಕಾರ್ಯಕಾರಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯಲ್ಲಿ ಅನೇಕ ನಿರ್ಣಯಗಳನ್ನು ನೀವೆಲ್ಲರೂ ಸೇರಿ ತೆಗೆದುಕೊಳ್ಳಬೇಕು. ಚೆಕ್ ಡ್ಯಾಂ, ಬದು ನಿರ್ಮಾಣಗಳು ಕೃಷಿ ಸಿಂಚಾಯಿ ಯೋಜನೆಯ ವ್ಯಾಪ್ತಿಗೆ ಬರುವುದರಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ರೈತ ಉತ್ಪಾದಕರ ಕಂಪನಿಗಳು ಸಹ ರೈತರಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿವೆ ಎಂದರು.
ಕೃಷಿ, ಅರಣ್ಯ, ತೋಟಗಾರಿಕೆ ಇಲಾಖೆಗಳಿಂದ ಈ ಯೋಜನೆ ಅಡಿ ಸಾಕಷ್ಟು ಅವಕಾಶಗಳಿದ್ದು ಸದುಪಯೋಗ ಮಾಡಿಕೊಳ್ಳಿ. ಆದರೆ ಯೋಜನೆಯ ಕಾಮಗಾರಿ ಗುಣಮಟ್ಟದಿಂದ ಕೂಡಿರದಿದ್ದರೆ ಜಿಪಿಎಸ್ ಸರಿಯಾಗಿ ಮಾಡಿಸದೇ ಕಳಪೆ ಕಾಮಗಾರಿ ಮಾಡಿದರೆ ಕಾಮಗಾರಿಗೆ ಹಣ ಬಿಡುಗಡೆಯ ಮಾತೇ ಇಲ್ಲ. ಕಾಮಗಾರಿ ಅನುಷ್ಠಾನ ಮಾಡಿದ ನಂತರ ಅಧ್ಯಕ್ಷರು, ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಶಿಫಾರಸ್ಸು ಮಾಡಿದರೆ ಮಾತ್ರ ಹಣ ಬಿಡುಗಡೆಯಾಗುತ್ತದೆ ಎಂದರು.
ಯೋಜನೆಗೆ ಒಳಪಡುವ ಹನುಮಂತಾಪುರ, ಹಿರೇಮಲ್ಲನಹೊಳೆ, ದೊಣ್ಣೆಹಳ್ಳಿ, ತೋರಣಗಟ್ಟೆ, ಕಲ್ಲೇದೇವರಪುರ ಮತ್ತು ಮುಸ್ಟೂರು ಗ್ರಾಮಗಳಾಗಿದ್ದು ಜನರು ಯೋಜನೆ ಬಗ್ಗೆ ಅರಿಯಿರಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹನುಮಂತಾಪುರ ಮಾರುತಿ, ದೊಣೆಹಳ್ಳಿ ಕುಮಾರ್, ಕಲ್ಲೇದೇವರಪುರ ತಿಪ್ಪೇಸ್ವಾಮಿ ವಸಂತಕುಮಾರಿ, ತೋರಣಗಟ್ಟೆ ಜೌಡಮ್ಮ ಬಸಪ್ಪ, ಎಚ್.ಎಂ ಹೊಳೆಯ ಶಿವರುದ್ರಮ್ಮ, ಮುಸ್ಟೂರು ಗ್ರಾಪಂ ನಿಂದ ಶೈಲಾ ಪ್ರಕಾಶ್ ಹಾಗೂ 30ಕ್ಕೂ ಹೆಚ್ಚು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಿದ್ದರು.