Advertisement

ಬಾಲ ಕಾರ್ಮಿಕರಿದ್ದರೆ ನಿರ್ದಾಕ್ಷಿಣ್ಯ ಕ್ರಮ

03:04 PM May 06, 2022 | Team Udayavani |

ಬಳ್ಳಾರಿ: ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಮತ್ತು ಬಾಲಕಾರ್ಮಿಕರ ಪೋಷಕರಿಗೆ ಮನವೋಲಿಸಿ ಅವರ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ಜಿಲ್ಲಾಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಗ್ಯಾರೇಜ್‌, ಅಂಗಡಿ, ಹೋಟೆಲ್‌, ವೈನ್‌ಶಾಪ್‌, ರೆಸ್ಟೋರೆಂಟ್‌ ಇತ್ಯಾದಿ ಕಡೆಗಳಲ್ಲಿ ಕೆಲಸ ಮಾಡುವಂತಹ ಬಾಲ ಕಾರ್ಮಿಕರನ್ನು ಗುರುತಿಸಿ ಮತ್ತು ದುಡಿಸಿಕೊಳ್ಳುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಆ ಮಕ್ಕಳಿಗೆ ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುವಂತೆ ಸೂಚಿಸಿದರು.

ಕಿಶೋರಾವಸ್ಥೆಯ ಮಕ್ಕಳನ್ನು ಕೆಲಸದಲ್ಲಿ ನೇಮಿಸಿಕೊಂಡು ದುಡಿಸಿಕೊಳ್ಳುವುದು ಅಪರಾಧವಾಗಿದ್ದು, ಅಂತವರ ವಿರುದ್ಧ ಕಾನೂನು ರೀತಿ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿನ್ನಲೆಯಲ್ಲಿ ತಿಂಗಳಿಗೊಮ್ಮೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಪರಿಶೀಲನೆ ನಡೆಸಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

2015ರಿಂದ ಪ್ರಸ್ತಕ ಸಾಲಿನವರೆಗೆ ನಡೆಸಿದ ದಾಳಿಗಳ ಬಗ್ಗೆ ಸಮರ್ಪಕ ಮಾಹಿತಿ ಒದಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಡಿಸಿ ಪವನ್‌ಕುಮಾರ್‌ ಅವರು, ಬಾಲಕಾರ್ಮಿಕ ಯೋಜನೆಗಳಲ್ಲಿ ಮಾರ್ಗಸೂಚಿಗಳನ್ನು ಅಳವಡಿಸುವುದರ ಮೂಲಕ ಕಿಶೋರ ಕಾರ್ಮಿಕರ ಅಭಿವೃದ್ಧಿಪಡಿಸಬೇಕು ಎಂದರು.

Advertisement

ರಾಷ್ಟ್ರೀಯ ಬಾಲಕಾರ್ಮಿಕರ ಯೋಜನೆಯ ನಿರ್ದೇಶಕ ಮೌನೇಶ ಮಾತನಾಡಿ, ಬಾಲಕಾರ್ಮಿಕ ಶಾಲೆಗಳಲ್ಲಿ ಅಭ್ಯಾಸ ಮಾಡಿ ಉನ್ನತ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಜಿಲ್ಲಾ ಖನಿಜ ನಿಧಿಯಿಂದ ಶುಲ್ಕ ಮರುಪಾವತಿ ಹಾಗೂ ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ಸಮೀಕ್ಷೆಯಲ್ಲಿ ಕಂಡು ಬಂದ ಕಿಶೋರ ಕಾರ್ಮಿಕರಿಗೆ ಕೌಶಲ್ಯ ತರಬೇತಿ ಕೇಂದ್ರ ಪ್ರಾರಂಭಿಸುವ ಕುರಿತು ಪ್ರಸ್ತಾಪಿಸಿದರು.

ಜಿಲ್ಲೆಯಲ್ಲಿ ಗುರುತಿಸಲಾದ ಬಾಲಕಾರ್ಮಿಕರ ಪೋಷಕರಿಗೆ ವಿವಿಧ ನಿಗಮಗಳಿಂದ ಆದ್ಯತೆ ಮೇರೆಗೆ ಆರ್ಥಿಕ ಸಹಾಯ ನೀಡುವುದರ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next