Advertisement
ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಪುಲ್ವಾಮಾ ಜಿಲ್ಲೆಯ ಬೈಗ್‌ಪುರಾ ಎಂಬಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಮೋಸ್ಟ್ ವಾಂಟೆಡ್ ಉಗ್ರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.
Related Articles
Advertisement
ಕಳೆದ ವರ್ಷ ಜಮ್ಮು- ಕಾಶ್ಮೀರದಿಂದ ಆರ್ಟಿಕಲ್ 370 ಹಿಂಪಡೆದು, ಅದನ್ನು ಕೇಂದ್ರಾಡಳಿತ ಪ್ರದೇಶವಾಗಿಸಿದ ಅನಂತರದಿಂದ, ಪಾಕಿಸ್ಥಾನಕ್ಕೆ ಹುಚ್ಚುಹಿಡಿದಂತಾಗಿದೆ. ಈ ಕಾರಣದಿಂದಲೇ, ನಿರಂತರವಾಗಿ ಅದು ಜಮ್ಮು-ಕಾಶ್ಮೀರಕ್ಕೆ ಉಗ್ರರನ್ನು ನುಗ್ಗಿಸುವ ಪ್ರಯತ್ನ ನಡೆಸಿದೆ. ಜಮ್ಮು-ಕಾಶ್ಮೀರದಲ್ಲಿ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆಯೇ ಉಗ್ರರ ಹಾವಳಿ ಅಧಿಕವಾಗಲಾರಂಭಿಸಿದೆ. ಉಗ್ರರು ಹಳ್ಳಿ-ಹಳ್ಳಿಯಲ್ಲೂ ತಮ್ಮ ನೆಟ್‌ವರ್ಕ್ ಮಾಡಿಕೊಂಡಿದ್ದು, ಗ್ರಾಮಸ್ಥರನ್ನು ಹೆದರಿಸಿ-ಬೆದರಿಸಿ ಅಥವಾ ಅವರನ್ನು ಬಂಧಿಯಾಗಿಸಿ ಅವರಿಂದ ಅಗತ್ಯ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಸೇನೆಯ ಪ್ರಕಾರ, ಉಗ್ರವಾದ ಘಟನೆಗಳ ವೃದ್ಧಿಯ ಹಿಂದೆ ಬೇಸಗೆಯೂ ಕಾರಣವಿರಬಹುದು. ಬಿಸಿಲು ಹೆಚ್ಚುತ್ತಿದ್ದಂತೆಯೇ, ನಿಯಂತ್ರಣ ರೇಖೆಯ ಬಳಿಯ ಹಿಮ ಕರಗಲಾರಂಭಿಸುತ್ತದೆ. ಆಗ ಉಗ್ರರಿಗೆ ಒಳನುಸುಳಲು ಸುಲಭವಾಗುತ್ತದೆ. ಚಳಿಗಾಲದ ಸಮಯದಲ್ಲಿ ಬಹುತೇಕ ಮಾರ್ಗಗಳು ಹಿಮಾವೃತವಾಗಿರುತ್ತವೆ.
ಇದೇನೇ ಇದ್ದರೂ ಹಿಜ್ಬುಲ್ ಕಮಾಂಡರ್‌ನನ್ನು ಹೊಡೆದುರುಳಿಸುವ ಮೂಲಕ ಭಾರತೀಯ ಸೇನೆ, ಉಗ್ರರಿಗೆ ಮತ್ತು ಪಾಕಿಸ್ಥಾನಕ್ಕೆ ಬಲವಾದ ಸಂದೇಶವನ್ನು ಕಳುಹಿಸಿದೆ. ಗುಪ್ತಚರ ಇಲಾಖೆಯ ಪ್ರಕಾರ, ಗಡಿ ನಿಯಂತ್ರಣ ರೇಖೆಯಾಚೆ, ಅಂದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 300ಕ್ಕೂ ಅಧಿಕ ಉಗ್ರವಾದಿಗಳು ಭಾರತದಲ್ಲಿ ನುಸುಳಲು ಸಿದ್ಧರಾಗಿದ್ದಾರೆ. ಈ ಕಾರಣಕ್ಕಾಗಿಯೇ, ಸೇನೆಯ ಗಮನವನ್ನು ಬೇರೆಡೆ ಸೆಳೆಯಲು ಪಾಕ್ ಸೇನೆ ನಿರಂತರವಾಗಿ ಗಡಿಯಾಚೆಗಿಂದ ಗುಂಡಿನ ದಾಳಿ ನಡೆಸುತ್ತಲೇ ಇದೆ.
ಇದು ನಮ್ಮ ಸೇನೆಗೆ ಅತ್ಯಂತ ಸವಾಲಿನ ಸಮಯವೂ ಹೌದು. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಹಾವಳಿಯನ್ನು ತಡೆಯುವ ಜತೆಗೆ, ಉಗ್ರರನ್ನೂ ಹತ್ತಿಕ್ಕುವ ಸವಾಲು ಅವರೆದುರಿಗಿದೆ. ಕೊರೊನಾ ಸೋಂಕಿನಿಂದ ಖುದ್ದು ಬಚಾವಾಗಿ, ದೇಶವನ್ನೂ ರಕ್ಷಿಸಲು ಹೋರಾಡುತ್ತಿರುವ ನಮ್ಮ ಸೇನೆಯ ಮನೋಬಲ ಹೆಚ್ಚಿಸಬೇಕಿದೆ. ಇದೇ ವೇಳೆಯಲ್ಲೇ, ಪಾಕಿಸ್ಥಾನವನ್ನು ರಾಜತಾಂತ್ರಿಕವಾಗಿ ಕಟ್ಟಿಹಾಕುವ ಕೆಲಸವನ್ನೂ ಭಾರತ ಸರ್ಕಾರ ಮಾಡಬೇಕಿದೆ.