Advertisement

ಅಪಪ್ರಚಾರದ ವಿರುದ್ಧ ಕಠಿನ ಕ್ರಮ: ಎಸ್ಪಿ

01:14 AM Feb 05, 2020 | Team Udayavani |

ಕಾಸರಗೋಡು: ಭಾರತ ಸಹಿತ ಜಗತ್ತಿನ ವಿವಿಧ ದೇಶಗಳಲ್ಲಿ ಭೀತಿ ಸೃಷ್ಟಿಸಿರುವ ಕೊರೊನಾ ವೈರಸ್‌ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಸಿ ಸಂದೇಶಗಳನ್ನು ರವಾನಿಸಿ ಜನತೆಯನ್ನು ಮತ್ತಷ್ಟು ಭೀತರನ್ನಾಗಿಸುತ್ತಿರುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮುನ್ನಚ್ಚರಿಕೆ ನೀಡಿದ್ದಾರೆ.

Advertisement

ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರ ಮತ್ತು ರೋಗಿಗಳಲ್ಲದೇ ಇರುವವರ ಭಾವಚಿತ್ರ ಬಳಸಿ ಅವರಿಗೆ ಕೊರೊನಾ ತಗುಲಿದೆ ಎಂದು ತಪ್ಪು ಮಾಹಿತಿ ಸೃಷ್ಟಿಸುವ ಮತ್ತು ಅದನ್ನು ಪ್ರಸಾರ ಮಾಡುತ್ತಿರುವುದು ಪೊಲೀಸ್‌ ಇಲಾಖೆಯ ಗಮನಕ್ಕೆ ಬಂದಿದೆ. ಈ ರೀತಿಯ ಅಕ್ರಮ ನಡೆಸುವವರ ವಿರುದ್ಧ ಐಟಿ ಕಾಯಿದೆ, ಭಾರತೀಯ ದಂಡ ಸಂಹಿತೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಅಂಥವರ ದೂರ ವಾಣಿಯನ್ನೂ ವಶಪಡಿಸಿಕೊಳ್ಳಲಾಗುವುದು ಎಂದು ಎಸ್‌ಪಿ ತಿಳಿಸಿದರು.

2,155 ಮಂದಿ ಮೇಲೆ ನಿಗಾ
ಚೀನದಿಂದ ಈ ವರೆಗೆ 2,239 ಮಂದಿ ಕೇರಳಕ್ಕೆ ವಾಪಸಾಗಿದ್ದಾರೆ. ಈ ಪೈಕಿ 2,155 ಮಂದಿಯನ್ನು ಮನೆಯಲ್ಲೇ ಇರಿಸಿ ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ. 84 ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. 140 ಮಂದಿಯ ರಕ್ತ ಮಾದರಿಯನ್ನು ಲ್ಯಾಬ್‌ಗ ಕಳುಹಿಸಿಕೊಡಲಾಗಿದೆ. ಅದರಲ್ಲಿ 49 ಮಂದಿಗೆ ರೋಗ ಲಕ್ಷಣವಿಲ್ಲವೆಂದು ಖಾತರಿಪಡಿಸಲಾಗಿದೆ. ಮೂರು ಮಂದಿಯಲ್ಲಿ ರೋಗ ಲಕ್ಷಣ ಖಾತರಿಪಡಿಸಲಾಗಿದೆ. ಕಾಂಞಂಗಾಡ್‌ನ‌ಲ್ಲಿರುವ ಕಾಸರ ಗೋಡು ಜಿಲ್ಲಾ ಸರಕಾರಿ ಆಸ್ಪತ್ರೆಯ ಐಸೋಲೇಶನ್‌ ವಾರ್ಡ್‌ನಲ್ಲಿರುವ ಕಾಂಞಂಗಾಡ್‌ನ‌ ವೈದ್ಯಕೀಯ ವಿದ್ಯಾರ್ಥಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ವಿಪತ್ತು ಘೋಷಣೆ
ಕೇರಳದಲ್ಲಿ ಮೂವರಿಗೆ ಕೊರೊನಾ ಪತ್ತೆಯಾಗಿರುವುದರಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೇರಳ ರಾಜ್ಯ ವಿಪತ್ತು ಘೋಷಿಸಿದ್ದಾರೆ.

ಜಿಲ್ಲೆಯಲ್ಲಿ ಹೈ ಅಲರ್ಟ್‌: ಜಿಲ್ಲೆಯಾದ್ಯಂತ ಆರೋಗ್ಯ ವಲಯದಲ್ಲಿ ಗರಿಷ್ಠ ಕಟ್ಟೆಚ್ಚರ ವಹಿಸಲಾಗಿದೆ ಕೊರೊನಾ ಸೋಂಕು ಪತ್ತೆಯಾದ ಕಾಂಞಂಗಾಡು ಹಾಗೂ ಪರಿಸರದಲ್ಲಿ ಅತೀವ ಜಾಗ್ರತಾ ನಿರ್ದೇಶನ ನೀಡಲಾಗಿದೆ. ಚೀನದಿಂದ ಕಾಸರಗೋಡಿಗೆ ಆಗಮಿಸುವ ಪ್ರತೀ ವ್ಯಕ್ತಿಯ ಮೇಲೆಯೂ ಗರಿಷ್ಠ ನಿಗಾ ಇರಿಸಲಾಗಿದೆ. ಆದರೂ ಕೊರೊನಾ ವೈರಸ್‌ ಬಗ್ಗೆ ಜನರು ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next