ಮೂಡಿಗೆರೆ: ‘ಕೋಮುವಾದಿ ಸಂಘಟನೆಗಳನ್ನು ನಿಷೇಧಿಸುವ ಅಧಿಕಾರ ನಮಗಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ‘ರಾಜ್ಯದಲ್ಲಿರುವ ಕೋಮುವಾದಿ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ.ಬಜರಂಗದಳವಾಗಲಿ, ಪಿಎಫ್ಐ ಆಗಲಿ, ಶ್ರೀರಾಮ ಸೇನೆ ಆಗಲಿ ಯಾವುದೇ ಧರ್ಮದ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅವುಗಳನ್ನು ಬ್ಯಾನ್ ಮಾಡುವ ಅಧಿಕಾರ ನಮ್ಮ ಬಳಿಯಲ್ಲಿ ಇಲ್ಲ’ ಎಂದರು.
‘ಕರಾವಳಿ ಭಾಗದಲ್ಲಿ ಕೋಮು ದಳ್ಳುರಿ ಹಬ್ಬಿಸುವ ಸಂಚು ಹೂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದರು.
ಸುರತ್ಕಲ್‌ನ ಕಾಟಿಪಳ್ಳದಲ್ಲಿ ಹತ್ಯೆಗೀಡಾದ ದೀಪಕ್ ರಾವ್ ಅವರ ಪ್ರಕರಣದ ಕುರಿತಾಗಿ ಆರೋಪಿಗಳಿಗೆ ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂಬ ಬಿಜೆಪಿ ಆರೋಪವನ್ನು ಸಿಎಂ ಸಿದ್ದರಾಮಯ್ಯ ಅಲ್ಲಗಳೆದರು.
ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಮನೋಹರ್ ಪರ್ರಿಕರ್ ಅವರು ಸುತ್ತಿ ಬಳಸಿ ನಾಟಕ ಆಡುತ್ತಿದ್ದಾರೆ ಎಂದು ಕಿಡಿ ಕಾರಿದ ಸಿದ್ದರಾಮಯ್ಯ ಅವರು ರಾಜ್ಯದ ಹಿತ ಕಾಪಾಡಲು ನಾವು ಬದ್ಧರಿದ್ದೇವೆ ಎಂದು ತಿರುಗೇಟು ನೀಡಿದರು.