Advertisement

ಲೈಂಗಿಕ ದೌರ್ಜನ್ಯ ಪ್ರಕರಣ ವಾಪಸ್‌ ಪಡೆಯಲು ಒತ್ತಡ

11:26 AM Nov 02, 2018 | Team Udayavani |

ಬೆಂಗಳೂರು: ತಮ್ಮ ಮಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ವಾಪಸ್‌ ಪಡೆಯುವಂತೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಒತ್ತಡ ಹೇರಿದ್ದರು ಎಂದು ಮಹಿಳೆಯೊಬ್ಬಳು ಉಗ್ರಪ್ಪ ವಿರುದ್ಧ ಆರೋಪ ಮಾಡಿದ್ದಾರೆ.

Advertisement

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಹಾರ ಮೂಲದ ನನ್ನ ಪತಿಯ ಅಕ್ಕನ ಮಗ ಕುಂದನ್‌ ಕುಮಾರ್‌ ಎಂಬ ಯುವಕ ನನ್ನ ಆರು ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಬಗ್ಗೆ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ವಿರೋಧಿ ಸಮಿತಿ ಅಧ್ಯಕ್ಷರಾಗಿದ್ದ ವಿ.ಎಸ್‌.ಉಗ್ರಪ್ಪ ಅವರ ಬಳಿ ತೆರಳಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದೆ.

ಅದರಂತೆ ಆರಂಭದಲ್ಲಿ ಪೊಲೀಸ್‌ ಅಧಿಕಾರಿಗಳಿಗೆ ಕರೆ ಮಾಡಿ, ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಸಹಾಯ ಮಾಡಿದ್ದರು. ಸರ್ಕಾರಿ ನ್ಯಾಯವಾದಿಗಳು ಪ್ರತಿ ವಿಚಾರಣೆಗೂ ಹಣ ಕೇಳುತ್ತಿದ್ದರು. ಅದನ್ನು ತೆಗೆದುಕೊಳ್ಳದಂತೆ ಹೇಳಿದರು.

ಬಳಿಕ, ಪ್ರಕರಣವನ್ನು ವಾಪಸ್‌ ಪಡೆಯುವಂತೆ ನನ್ನ ಮೇಲೆ ಒತ್ತಡ ಹೇರಿದ್ದಾರೆ. ಕುಂದನ್‌ ಸಿಂಗ್‌ ಕುಟುಂಬ ಕಾಂಗ್ರೆಸ್‌ ಮೂಲದ ಪ್ರಭಾವವನ್ನು ಬಳಸಿಕೊಂಡು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕಚೇರಿ ಮೂಲಕ ಆರೋಪಿಯನ್ನು ರಕ್ಷಿಸುವಂತೆ ತಮ್ಮ ಮೇಲೆ ಒತ್ತಡ ಇದೆ ಎಂದು ಉಗ್ರಪ್ಪ ಹೇಳಿದ್ದರು.

ಆದರೆ, ನಾನು ಅವರ ಹೇಳಿಕೆಯನ್ನು ಒಪ್ಪಿಕೊಳ್ಳದೇ ಕಾನೂನು ಮೂಲಕ ಹೋರಾಟ ಮಾಡುವುದಾಗಿ ಹೇಳಿ, ಕೋರ್ಟ್‌ನಲ್ಲಿ ಹೋರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದರು. ನಾನು ಕಿಡ್ನಿ ಕಳೆದುಕೊಂಡಿರುವ ನೋವು ಅನುಭವಿಸುತ್ತಿದ್ದೇನೆ. ಅಲ್ಲದೆ, ಮಗಳ ಪರವಾಗಿ ಹೋರಾಟ ನಡೆಸಲು ನಿರಂತರ ಕೋರ್ಟ್‌ಗೆ ಅಲೆಯುತ್ತಿದ್ದೇನೆ.

Advertisement

ಆದರೆ, ಸಮಿತಿ ಅಧ್ಯಕ್ಷರಾಗಿದ್ದ ಉಗ್ರಪ್ಪ ಅವರು ನೊಂದವರ ಪರವಾಗಿ ನಿಲ್ಲದೇ ದೌರ್ಜನ್ಯ ನಡೆಸಿದವರ ಪರವಾಗಿ ನಿಂತು ಪ್ರಕರಣ ವಾಪಸ್‌ ಪಡೆಯುವಂತೆ ಮೇಲಿಂದ ಮೇಲೆ ಒತ್ತಡ ಹೇರಿದ್ದರು. ಅಂತವರು ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಒಬ್ಬ ಮಹಿಳೆಗೆ ರಕ್ಷಣೆಗೆ ನೀಡಲಾಗದವರು ಬಳ್ಳಾರಿ ಜನತೆಗೆ ಹೇಗೆ ರಕ್ಷಣೆ ನೀಡುತ್ತಾರೆ. ಬಳ್ಳಾರಿ ಜನತೆ ಇಂತವರನ್ನು ಆಯ್ಕೆ ಮಾಡುವಾಗ ಯೋಚಿಸಬೇಕು ಎಂದು ತಿಳಿಸಿದರು.

ರಾಜಕೀಯ ಪ್ರೇರಿತ: ಉಗ್ರಪ್ಪ ಅವರ ವಿರುದ್ಧ ಮಹಿಳೆಯೊಬ್ಬಳು ಮಾಡಿರುವ ಆರೋಪ ರಾಜಕೀಯಪ್ರೇರಿತವಾಗಿದೆ. ಅನ್ಯಾಯಕ್ಕೊಳಗಾದ ಮಹಿಳೆ ಪರವಾಗಿ ನಾವಿದ್ದೇವೆ. ಆದರೆ, ಉಗ್ರಪ್ಪ ಅವರು ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸಿರುವ ಸಂದರ್ಭದಲ್ಲಿ ಅವರ ವಿರುದ್ಧ ಈ ರೀತಿ ಆರೋಪ ಮಾಡಿರುವುದು ರಾಜಕೀಯ ಪ್ರೇರಿತವೆನಿಸಿದೆ ಎಂದು ಸಮಿತಿಯ ಸದಸ್ಯರಾಗಿದ್ದ ಮೋಟಮ್ಮ, ರಾಣಿ ಸತೀಶ್‌ ವಸುಂಧರಾ ಭೂಪತಿ ಸೇರಿದಂತೆ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next