Advertisement

ಹೃದಯವನ್ನು ಹಿಂಡುವ ಒತ್ತಡ

08:25 PM Dec 13, 2020 | Suhan S |

“ಹೃದಯಾಘಾತ’ ಎಂದು ವೈದ್ಯರು ಹೇಳಿದ ಕೂಡಲೇ ಸಿಂಹಸದೃಶ ಧೈರ್ಯವನ್ನು ಹೊಂದಿರುವ ವ್ಯಕ್ತಿಯ ಹೃದಯಬಡಿತವೂ ಕ್ಷಣಕಾಲ ತಾಳ ತಪ್ಪುತ್ತದೆ, ಹಣೆಯ ಮೇಲೆ ಬೆವರು ಕಾಣಿಸಿಕೊಳ್ಳುತ್ತದೆ ಮತ್ತು ಕೈಗಳು ನಡುಗಲು ಆರಂಭಿಸುತ್ತವೆ. ಬದುಕುವ ಇಚ್ಛೆ, ಆಸ್ಪತ್ರೆಯಿಂದ ಬಿಡುಗಡೆಗೊಂಡ ಮೇಲೆ ಜೀವನ ಹೇಗಿರುತ್ತದೆಯೋ ಎಂಬ ಅಂಜಿಕೆ, ತತ್‌ಕ್ಷಣದ ಮತ್ತು ದೀರ್ಘ‌ಕಾಲೀನ ವೈದ್ಯರು, ಔಷಧಗಳು ಮತ್ತು ಚಿಕಿತ್ಸೆಯ ವೆಚ್ಚದ ಬಗೆಗೆ ಚಿಂತೆ ಇದಕ್ಕೆ ಪ್ರಮುಖ ಕಾರಣಗಳು.

Advertisement

ದಶಕಗಳ ಹಿಂದೆ ಹೃದಯಾಘಾತ ಅಥವಾ ಹೃದಯ ಸಂಬಂಧಿ ಅನಾರೋಗ್ಯಕ್ಕೆ ತುತ್ತಾದ ರೋಗಿಯು, “ನಿರ್ಧಾರ ತೆಗೆದುಕೊಳ್ಳುವುದಕ್ಕೆ ನಾನು ಮಕ್ಕಳ ಜತೆಗೆ ಮಾತನಾಡಬೇಕು’ ಎನ್ನುತ್ತಿದ್ದರು. ಆದರೆ ಈಗ, “ಸಾರ್‌, ಇಬ್ಬರು ಪುಟ್ಟ ಮಕ್ಕಳಿದ್ದಾರೆ, ಏನಾದರೂ ಮಾಡಿ, ಹಣಕ್ಕೇನೂ ತೊಂದರೆಯಿಲ್ಲ’ ಎನ್ನುತ್ತಿದ್ದಾರೆ. ಸಿರಿವಂತಿಕೆ ಹೆಚ್ಚಿದಂತೆ ಈಗ ಸಣ್ಣ ವಯಸ್ಸಿನವರೂ ಹೃದಯ ಸಂಬಂಧಿ ತೊಂದರೆಗಳಿಗೆ ತುತ್ತಾಗುವುದು ಹೆಚ್ಚುತ್ತಿದೆ. ಇವತ್ತಿನ “ನಾಗಾಲೋಟದ ಜೀವನಶೈಲಿ’ಯಲ್ಲಿ ಹೃದಯಾಘಾತದ ಸಾಂಪ್ರದಾಯಿಕ ಅಪಾಯಾಂಶಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನ ಮತ್ತು ಅಧಿಕ ಕೊಲೆಸ್ಟರಾಲ್‌ ಹೆಚ್ಚಿವೆ.

ಸಣ್ಣ ವಯಸ್ಸಿನವರಲ್ಲಿ ಮೇಲ್ಕಂಡ ಅಪಾಯಾಂಶಗಳ ಜತೆಗೆ “ಒತ್ತಡ’ವು ಹೃದಯಾಘಾತಗಳು ಭಾರೀ ಸಂಖ್ಯೆಯಲ್ಲಿ ಹೆಚ್ಚುವುದಕ್ಕೆ ಕೊಡುಗೆ ನೀಡುತ್ತಿವೆ. ಒತ್ತಡವು ಹೃದಯದ ಅನಾರೋಗ್ಯಗಳಿಗೆ ಕಾರಣವಾಗುತ್ತಿರುವುದರ ಬಗ್ಗೆ ವೈದ್ಯಕೀಯ ಪರಿಣಿತರು ಮತ್ತು ಜನಸಾಮಾನ್ಯರು ಆತ್ಮಾವಲೋಕ ಮಾಡಿಕೊಳ್ಳಬೇಕಾದ ಕಾಲ ಇದು.

ಒತ್ತಡ :

ಒತ್ತಡವು ಪ್ರತಿಯೊಬ್ಬರ ಅದರಲ್ಲೂ ವೈದ್ಯರ ಬದುಕಿನ ಅವಿಭಾಜ್ಯ ಅಂಗವಾಗಿದೆ. ತುರ್ತು ನಿಗಾ ವಿಭಾಗದಲ್ಲಿರುವ ಒಬ್ಬ ಅಥವಾ ಇಬ್ಬರು ರೋಗಿಗಳು ವೈದ್ಯರೊಬ್ಬರಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ಉಂಟು ಮಾಡಬಲ್ಲರು. ಹೊರರೋಗಿ ವಿಭಾಗದಲ್ಲಿ ಮತ್ತು ಆಪರೇಶನ್‌ ಥಿಯೇಟರ್‌ನಲ್ಲಿ ಹತ್ತು ಹಲವು ಸಮಸ್ಯೆಗಳ ಸುಳಿ, ರೋಗಿಗಳಿಗೆ ಎಷ್ಟು ಸಾಧ್ಯವೋ ಅಷ್ಟು ಉತ್ತಮ ಚಿಕಿತ್ಸೆಯನ್ನು ನೀಡಬೇಕಾಗಿರುವ ಸವಾಲು ವೈದ್ಯರ ಮೇಲಿರುವ ಜವಾಬ್ದಾರಿ ಮತ್ತು ಒತ್ತಡವನ್ನು ಹೆಚ್ಚಿಸುತ್ತವೆ. ರೋಗಿ ಮತ್ತು ವೈದ್ಯರ ನಡುವಣ ಸಂಬಂಧ ಹದಗೆಡುತ್ತಿರುವುದು, ಆಪಾದನೆಗಳನ್ನು ಹೊರಿಸುವ ಸಮಾಜ ಮತ್ತು ವೈದ್ಯಕೀಯ ವೃತ್ತಿಯಲ್ಲಿರುವ “ಹುಚ್ಚು ನಾಗಾಲೋಟ’ಗಳು ಒತ್ತಡದ ಪ್ರಮಾಣ ಮತ್ತು ಮಟ್ಟವನ್ನು ಹೆಚ್ಚಿಸಿವೆ.

Advertisement

ಇದು ಬಹುತೇಕ ಎಲ್ಲ ವೃತ್ತಿಗಳ ಮಟ್ಟಿಗೂ ನಿಜವಾಗಿರುತ್ತದೆ. ಡೆಡ್‌ಲೈನ್‌ ಪೂರೈಸುವ, ಜಾಗತಿಕ ಮಾರುಕಟ್ಟೆಗೆ ಅನುಗುಣವಾದ ಉತ್ಪನ್ನಗಳನ್ನು ಒದಗಿಸಬೇಕಾದ ಜೈವಿಕ ಗಡಿಯಾರದ ದಿಕ್ಕುತಪ್ಪಿಸುವ ಅಸಹಜ ಪಾಳಿಗಳನ್ನು ಹೊಂದಿರುವ ಮಾಹಿತಿ ತಂತ್ರಜ್ಞಾನ ಸಂಬಂಧಿ ಸೇವಾಕ್ಷೇತ್ರದಲ್ಲಿ ಒತ್ತಡ ಇನ್ನಷ್ಟು ಹೆಚ್ಚಿರುತ್ತದೆ.

ಘಟನಾ ಸರಣಿಗೆ ಪ್ರತಿಕ್ರಿಯೆಯಾಗಿ ವ್ಯಕ್ತಿಯ ಮಾನಸಿಕ ಮತ್ತು ಭಾವನಾತ್ಮಕ ಪ್ರತಿಕ್ರಿಯೆಯೇ ಒತ್ತಡ. ಇದರಿಂದಾಗಿ ವ್ಯಕ್ತಿಯು ಸಿಟ್ಟು, ನಡುಕ, ಹತಾಶೆ ಮತ್ತು ಅಸಹಾಯಕತೆಯ ಭಾವನೆಗಳಿಗೆ ಒಳಗಾಗುತ್ತಾನೆ. ಇದು ಸವಾಲಿಗೆ ದೇಹದ ಪ್ರತಿಸ್ಪಂದನೆ. ಕಚೇರಿಯಲ್ಲಿ ಬಾಸ್‌ನ ಕಿರಿಕಿರಿ, ಬೆಳಗ್ಗೆ ಉಂಟಾದ ಟ್ರಾಫಿಕ್‌ ಜಾಮ್‌, ಗೆಳೆಯ ಅಥವಾ ಕುಟುಂಬ ಸದಸ್ಯನ ಜತೆಗೆ ನಡೆದ ಜಗಳ, ಹಳಸಿದ ಸಂಬಂಧ ಇತ್ಯಾದಿಗಳೆಲ್ಲ ಒತ್ತಡಕ್ಕೆ ಕಾರಣವಾಗುತ್ತವೆ. ಕಾರಣ ಯಾವುದೇ ಇರಬಹುದು, ಆದರೆ ಪ್ರತಿಯೊಬ್ಬರೂ ದೈನಿಕ ಜೀವನದಲ್ಲಿ ಇದನ್ನು ಅನುಭವಿಸುತ್ತಾನೆ.

ಸಣ್ಣ ಸಣ್ಣ ಒತ್ತಡಗಳು ಉದ್ದೇಶಿತ ಕೆಲಸಗಳನ್ನು ಸರಿಯಾದ ಸಮಯದಲ್ಲಿ ಮುಗಿಸುವುದು, ಡೆಡ್‌ಲೈನ್‌ ಪೂರೈಸುವಂತಹ ಧನಾತ್ಮಕ ಫ‌ಲಿತಾಂಶಗಳನ್ನು ನೀಡಬಹುದು. ಇದು ಉತ್ತಮವೇ, ಇದರಿಂದ ವ್ಯಕ್ತಿಯು ಏನನ್ನಾದರೂ ಸಾಧನೆ ಮಾಡುವತ್ತ ಪ್ರಚೋದಿತನಾಗಬಹುದು. ಆದರೆ ದೀರ್ಘ‌ಕಾಲಿಕ ಭಾರೀ ಒತ್ತಡವು ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಲ್ಲುದು. ದೀರ್ಘ‌ಕಾಲಿಕ ಒತ್ತಡದ ಗುಣಲಕ್ಷಣಗಳನ್ನು ಗುರುತಿಸುವುದನ್ನು ಅರಿತುಕೊಂಡರೆ ವ್ಯಕ್ತಿಯು ಅದರಿಂದ ದೂರ ಉಳಿಯಬಹುದು ಮತ್ತು ಅದರಿಂದ ಆರೋಗ್ಯದ ಮೇಲೆ ಹಾನಿ ಉಂಟಾಗುವುದನ್ನು ತಪ್ಪಿಸಿಕೊಳ್ಳಬಹುದು.

ಒತ್ತಡವು ಹೇಗೆ ಹೃದಯಾಘಾತವನ್ನು  ಉಂಟು ಮಾಡುತ್ತದೆ? :

ವ್ಯಕ್ತಿಯು ಅತಿಯಾದ ಒತ್ತಡದಲ್ಲಿದ್ದಾಗ ದೇಹದಲ್ಲಿ ತೀವ್ರ ಹಾರ್ಮೋನ್‌ ಸ್ರಾವ ಉಂಟಾಗುತ್ತದೆ ಮತ್ತು ಇದರಿಂದ “ಹೋರಾಟ ಅಥವಾ ಪ್ರತಿಕ್ರಿಯೆಗಳ ಹೋರಾಟ’ ಸನ್ನಿವೇಶ ಉಂಟಾಗುತ್ತದೆ. ದೀರ್ಘ‌ಕಾಲಿಕ ಒತ್ತಡವನ್ನು ಅನುಭವಿಸುವುದರಿಂದ ಈ ಹಾರ್ಮೋನ್‌ಗಳ ಮಟ್ಟವು ಏರಿ ಹೃದಯದ ಮೇಲೆ ನೇರವಾದ ಅಪಾಯಕಾರಿ ಪರಿಣಾಮವನ್ನು ಉಂಟು ಮಾಡಲಾರಂಭಿಸುತ್ತದೆ. ಈ ಹಾರ್ಮೋನ್‌ಗಳು ರಕ್ತದ ಒತ್ತಡ ಮತ್ತು ರಕ್ತದಲ್ಲಿ ಸಕ್ಕರೆಯ ಅಂಶದ ಹೆಚ್ಚಳಕ್ಕೂ ಕಾರಣವಾಗುತ್ತವೆ. ಇವುಗಳು ಹೃದಯಾಘಾತದ ಸಾಂಪ್ರದಾಯಿಕ ಅಪಾಯಾಂಶಗಳಾಗಿವೆ. ದುರದೃಷ್ಟವಶಾತ್‌ ಅಧಿಕ ರಕ್ತದೊತ್ತಡ ಮತ್ತು ರಕ್ತದಲ್ಲಿಯ ಸಕ್ಕರೆಯ ಪ್ರಮಾಣದಂತೆ ಒತ್ತಡವನ್ನು ಅಳೆಯಲಾಗದು. ಆದ್ದರಿಂದ ಹೃದಯಕ್ಕೆ ಎಷ್ಟು ಪ್ರಮಾಣದ ಒತ್ತಡವು ಅಪಾಯಕಾರಿ ಅಥವಾ ಎಷ್ಟು ಮಟ್ಟದ ಒತ್ತಡವನ್ನು ಮಾತ್ರ ಅನುಭವಿಸಲು ಸಾಧ್ಯ ಎಂಬುದನ್ನು ಮೌಲ್ಯಾತ್ಮಕವಾಗಿ ಹೇಳಲಾಗದು.

 ಒತ್ತಡವನ್ನು ನಿವಾರಿಸಿ ಹೃದಯವನ್ನು ಕಾಪಾಡಿಕೊಳ್ಳುವುದು ಹೇಗೆ? :

ಹೃದಯದ ಮೇಲೆ ಒತ್ತಡದ ಪರಿಣಾಮವು ವ್ಯಕ್ತಿನಿರ್ದಿಷ್ಟವಾದದ್ದು, ಏಕೆಂದರೆ ಒತ್ತಡವನ್ನು ತಾಳಿಕೊಳ್ಳುವ ಮತ್ತು ನಿಭಾಯಿಸುವ ಸಾಮರ್ಥ್ಯ ಪ್ರತಿಯೊಬ್ಬರಲ್ಲಿಯೂ ವಿಭಿನ್ನವಾಗಿರುತ್ತದೆ. ಕೆಲವರು ಎಷ್ಟೇ ಒತ್ತಡ ಎದುರಾದರೂ ನಿಭಾಯಿಸಬಲ್ಲವರಾಗಿರುತ್ತಾರೆ, ಆದರೆ ಇನ್ನು ಕೆಲವರು ಸಣ್ಣ ಸಣ್ಣ ವಿಚಾರಗಳಿಂದಲೂ ಒತ್ತಡಕ್ಕೆ ಒಳಗಾಗುವಂಥವರಾಗಿರುತ್ತಾರೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಸಾಂಪ್ರದಾಯಿಕ ಅಪಾಯಾಂಶಗಳನ್ನು ಪತ್ತೆ ಹಚ್ಚುವುದು ಮತ್ತು ಅವುಗಳ ಸ್ಥಿತಿಗತಿ ಹೇಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಜತೆಗೆ, ಈ ಅಪಾಯಾಂಶಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ಈ ನಾಗಾಲೋಟದ ಬದುಕಿನಲ್ಲಿ ಎಲ್ಲದಕ್ಕೂ ತಲೆಕೆಡಿಸಿಕೊಳ್ಳುವುದಕ್ಕೆ ಹೋಗಬಾರದು. ಆರೋಗ್ಯಯುತ ಜೀವನ ನಿಮ್ಮದಾಗಲಿ.

ಒತ್ತಡವನ್ನು ನಿಭಾಯಿಸುವುದಕ್ಕಾಗಿ “5 ಎಸ್‌’ ಎಂಬೊಂದು ಕಾರ್ಯತಂತ್ರ ಸೂಕ್ತವಾಗಬಲ್ಲುದಾಗಿದೆ. :

 

  • “ಸ್ಪೀಕ್‌’ (ಮಾತನಾಡಿ): ನಿಮ್ಮ ಸಂಗಾತಿ, ಗೆಳೆಯ ಗೆಳತಿಯರು ಮತ್ತು ಸಂಬಂಧಿಗಳ ಜತೆಗೆ ಒತ್ತಡವನ್ನು ಹಂಚಿಕೊಳ್ಳಿ. ಅವರು ಪರಿಹಾರದ ಒಂದಲ್ಲ ಒಂದು ವಿಧಾನವನ್ನು ಸೂಚಿಸಬಲ್ಲರು. ಏನೂ ಮಾತನಾಡದೆ, ಯಾರೊಂದಿಗೂ ಹಂಚಿಕೊಳ್ಳದೆ ಇರುವುದು ಎಲ್ಲ ಸನ್ನಿವೇಶಗಳಲ್ಲಿಯೂ ಒಳ್ಳೆಯದಲ್ಲ.
  • “ಸೊಲ್ಯೂಶನ್‌’ (ಪರಿಹಾರ): ಸಮಸ್ಯೆಗೆ ಅತ್ಯಂತ ಸೂಕ್ತವಾಗಬಲ್ಲ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಈ ಪರಿಹಾರ ಸದಾ ಅತ್ಯಂತ ಸಮರ್ಪಕ ಆಗಿರಬೇಕಾಗಿಲ್ಲ. ನಿಮ್ಮಿಂದ ಸಾಧ್ಯವಾದುದನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ, ಯಾವುದು ಸಾಧ್ಯವಿಲ್ಲವೋ ಅದನ್ನು ಇರುವಂತೆಯೇ ಒಪ್ಪಿಕೊಳ್ಳಿ.
  • “ಸೋಶಿಯಲೈಸ್‌’ (ಸಮಾಜದೊಂದಿಗೆ ಬೆರೆಯಿರಿ): ಸಾಕಷ್ಟು ಮಂದಿ ಗೆಳೆಯ- ಗೆಳತಿಯರನ್ನು ಹೊಂದಿರಿ ಮತ್ತು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲುಗೊಳ್ಳಿ. ಇದರಿಂದಾಗಿ ನಿಮ್ಮ ಉದ್ಯೋಗ ಸ್ಥಳದ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ಸಮಸ್ಯೆಗೆ ಒಂದು “ಪರಿಹಾರ’ ಸಿಗಲೂ ಬಹುದು.
  • “ನ್ಪೋರ್ಟ್ಸ್’ (ಕ್ರೀಡೆ): ನಿಮ್ಮ ದೇಹ ಮತ್ತು ವಯಸ್ಸಿಗೆ ಅನುಗುಣವಾದ ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ. ಇದು ವಿಶ್ರಮಿಸಿಕೊಳ್ಳಲು ಮತ್ತು ಸಂತೋಷದ ಹಾರ್ಮೋನ್‌ ಎಂದು ಹೆಸರಾಗಿರುವ ಎಂಡೋರ್ಫಿನ್‌ ಮಟ್ಟ ಹೆಚ್ಚಲು ಕಾರಣವಾಗುತ್ತದೆ.
  • “ಸ್ಪಿರಿಚ್ಯುವಾಲಿಟಿ’ (ಅಧ್ಯಾತ್ಮಿಕತೆ): ಧ್ಯಾನ, ಆತ್ಮ ಶೋಧನೆಯಂತಹ ಆಧ್ಯಾತ್ಮಿಕ ಹೆಜ್ಜೆಗಳಿಂದ ಒತ್ತಡ ಉಂಟು ಮಾಡುವಂತಹ ಸನ್ನಿವೇಶಗಳನ್ನು ನಿಭಾಯಿಸುವ ಸಾಮರ್ಥ್ಯ ಒದಗುತ್ತದೆ. ಮನಸ್ಸು ಶಾಂತವಾಗಿದ್ದರೆ ನಿಮ್ಮನ್ನು ಒತ್ತಡಕ್ಕೀಡು ಮಾಡುವ ಸನ್ನಿವೇಶದಿಂದ ಪಾರಾಗುವ ಅಥವಾ ಅದನ್ನು ಎದುರಿಸುವ ಸರಳ ಹಾದಿಯನ್ನು ಹುಡುಕಲು ಸಾಧ್ಯವಾಗುತ್ತದೆ.

ಇತರ ಎರಡು “2 ಎಸ್‌’ಗಳಾದ “ಸ್ಮೋಕಿಂಗ್‌’ ಮತ್ತು “ಸ್ಪಿರಿಟ್‌’ (ಧೂಮಪಾನ ಮತ್ತು ಮದ್ಯಪಾನ)ಗಳಿಂದ ಕಡ್ಡಾಯವಾಗಿ ದೂರವಿರಬೇಕು. ಏಕೆಂದರೆ, ಇವೆರಡೂ ಹೃದಯ ಮತ್ತು ದೇಹದ ಇತರ ಅಂಗಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತವೆ. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟರಾಲ್‌ನಂತಹ ಸಾಂಪ್ರದಾಯಿಕ ಅಪಾಯಾಂಶಗಳು ಕೂಡ ಈ ಎರಡು ದುಶ್ಚಟಗಳಿಂದ ಹೆಚ್ಚುತ್ತವೆ. ಆದ್ದರಿಂದ ಈ ಎರಡು ವ್ಯಸನಗಳು ಒತ್ತಡವನ್ನು ದೂರಮಾಡುವುದರ ಬದಲಾಗಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ.

 

ಡಾ| ರಾಜೇಶ್‌ ಭಟ್‌ ಯು.

ಇಂಟರ್‌ವೆನ್ಶನಲ್‌ ಕಾರ್ಡಿಯಾಲಜಿಸ್ಟ್‌

ಕೆಎಂಸಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next