Advertisement
ಕೋವಿಡ್ ಕಾರಣದಿಂದಾಗಿ 2019 ದೀಪಾವಳಿಯಿಂದ ಸ್ಥಗಿತಗೊಂಡಿದ್ದ ಚಾರ್‌ಧಾಮ್ ಪ್ರವಾಸಕ್ಕೆ ನ್ಯಾಯಾಲಯವು 2021ಅ.18 ರಂದು ಷರತ್ತು ಬದ್ಧ ಅನುಮತಿ ನೀಡಿತ್ತು. ಈ ಬೆನ್ನಲ್ಲೆ ಕೋಲಾರ ಮತ್ತು ಬೆಂಗಳೂರಿನ ಕಾಡುಗೋಡಿಯಲ್ಲಿ ಶಾಖೆ ಹೊಂದಿರುವ ಸಮೃದ್ಧಿ ಟೂರ್ ಆ್ಯಂಡ್ ಟ್ರಾವೆಲ್ಸ್ ಸಂಸ್ಥೆಯು ಕರ್ನಾಟದಿಂದ ಮೊದಲ 32 ಜನರ ಪ್ರವಾಸಿಗರ ತಂಡವನ್ನು ಚಾರ್‌ಧಾಮ್ ಪ್ರವಾಸಕ್ಕೆ ಕರೆದೊಯ್ದಿದೆ.
Related Articles
Advertisement
ಸೀಮಿತ ಪ್ರವಾಸಿಗರು: ಈ ಸೀಮಿತ ಪ್ರವಾಸಿಗರಲ್ಲಿ ಸ್ಥಳೀಯರು ಸೇರಿಕೊಂಡರೆ ದೂರದ ರಾಜ್ಯಗಳಿಂದ ಬಂದಿರುವ ಪ್ರವಾಸಿಗರ ಸಂಖ್ಯೆಯನ್ನು ಉತ್ತರಾಖಂಡ ಸರ್ಕಾರ ಕಡಿತಗೊಳಿಸುತ್ತಿದೆ. ಇದೇ ಕಾರಣಕ್ಕೆ ಆನ್ ಲೈನ್ ಬುಕ್ಕಿಂಗ್ ಇದ್ದರೂ ಸೆ.24 ರಂದು ಯಮನೋತ್ರಿ ಪ್ರವಾಸ ಭಾಗ್ಯವನ್ನು ಕರ್ನಾಟಕದಿಂದ ತೆರಳಿರುವ ಮೊದಲ ತಂಡ ತಪ್ಪಿಸಿಕೊಂಡಿದೆ.
ಗೇಟ್ ಕಾಯಬೇಕಾದ ಅನಿವಾರ್ಯ: ಇದರಿಂದ ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ ಆನ್‌ಲೈನ್ ಬುಕ್ಕಿಂಗ್ ಹೊಂದಿರುವ ಸಾವಿರಾರು ಮಂದಿ ಪ್ರವಾಸಿಗರು ಯಮನೋತ್ರಿ ಗಡಿಯಲ್ಲಿ ಅಲ್ಲಿನ ಸರ್ಕಾರದ ತಪಾಸಣಾ ಕೇಂದ್ರಗಳ ಬಳಿಯೇ ಕಾಲ ಕಳೆಯಬೇಕಾಗಿದೆ. ಆನ್‌ಲೈನ್ ಬುಕ್ಕಿಂಗ್ ಹೊಂದಿರುವ ಎಲ್ಲಾ ಪ್ರವಾಸಿಗರಿಗೂ ಪ್ರವಾಸ ಮಾಡಲು ಅನುಮತಿಸಬೇಕೆಂಬ ಕೂಗು ಪ್ರವಾಸಿಗರ ಗುಂಪಿನಲ್ಲಿ ಎದ್ದಿದೆ.
ಉತ್ತರಾಖಂಡ ಸರಕಾರದ ಈ ಧೋರಣೆಯಿಂದಾಗಿ ಚಾರ್‌ಧಾಮ ಪ್ರವಾಸ ಮಾಡಲು ಹೋಗಿರುವವರು ಎರಡು ಮೂರು ಧಾಮ್‌ಗಳನ್ನಷ್ಟೇ ದರ್ಶನ ಮಾಡಿ ವಾಪಸ್ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಹವಾಮಾನ ವೈಪರೀತ್ಯದಿಂದ ಬೆಟ್ಟ ಕುಸಿತದಿಂದ ಪ್ರವಾಸ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯೂ ಇದ್ದೇ ಇದೆ. ಹಿಂತಿರುಗುವ ವಿಮಾನ ಪ್ರಯಾಣ ದಿನಾಂಕವೂ ನಿಗದಿಯಾಗಿರುವುದರಿಂದ ಪ್ರವಾಸಿಗರು ಅಪೂರ್ಣ ಯಾತ್ರೆಯ ಮೂಲಕ ವಾಪಸ್ಸಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.
ಬುಕ್ಕಿಂಗ್ ತೆರೆದಿಲ್ಲ: ಈ ಬಾರಿಯ ಚಾರ್‌ಧಾಮ್ ಯಾತ್ರೆಗೆ ಕೇವಲ 33 ದಿನಗಳ ಕಾಲಾವಕಾಶ ಮಾತ್ರ ನೀಡಲಾಗಿದೆ. ಇದರಿಂದ ದೇಶಾದ್ಯಂತ ಪ್ರವಾಸಿಗರು ಚಾರ್‌ಧಾಮ್ ಯಾತ್ರೆಗೆ ಆನ್‌ಲೈನ್ ಬುಕ್ಕಿಂಗ್‌ಗೆ ಕಾಯುತ್ತಿದ್ದಾರೆ. ಈಗಾಗಲೇ ಅ.15 ರವರೆಗಿನ ಬುಕ್ಕಿಂಗ್ ಪೂರ್ಣಗೊಂಡಿದೆ. ಅ.15ರ ನಂತರದ ಬುಕ್ಕಿಂಗ್ ಅನ್ನು ವೆಬ್‌ಸೈಟ್ ತೆರೆದಿಲ್ಲ. ಬುಕ್ಕಿಂಗ್‌ಗಾಗಿ ದೇಶಾದ್ಯಂತ ಲಕ್ಷಾಂತರ ಮಂದಿ ಕಾಯುತ್ತಿದ್ದಾರೆ. ಆನ್‌ಲೈನ್ ಬುಕ್ಕಿಂಗ್ ಆರಂಭವಾದ ಕಾರಣಕ್ಕೆ ಚಾರ್‌ಧಾಮ್ ಯಾತ್ರೆ ಆರಂಭವಾದರೂ, ಪ್ರವಾಸಿಗರು ಉತ್ತರಾಖಂಡ ಸರಕಾರದ ಬಿಗಿ ನಿಲುವಿನಿಂದಾಗಿ ಯಾತ್ರೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲದಂತಾಗಿದೆ. ಆನ್‌ಲೈನ್ ಬುಕ್ಕಿಂಗ್ ಇಲ್ಲದೆ ನೇರವಾಗಿ ಚಾರ್‌ಧಾಮ್ ಯಾತ್ರೆ ಮಾಡಲು ತೆರಳಿರುವವರು ಮತ್ತಷ್ಟು ಸಂಕಷ್ಟಗಳಿಗೆ ಸಿಲುಕಿಕೊಂಡು ನಿರಾಸೆ ಅನುಭವಿಸುತ್ತಿದ್ದಾರೆ. ಇದರಿಂದ ಕರ್ನಾಟಕದಿಂದ ಪ್ರವಾಸಿಗರು ಆನ್ ಲೈನ್ ಬುಕ್ಕಿಂಗ್ ಸಿಕ್ಕಿತೆಂದು ಪ್ರವಾಸ ಹೊರಡಲು ಸಿದ್ಧರಾಗುವ ಮುನ್ನ ಪ್ರವಾಸಕ್ಕೆ ಎದುರಾಗುತ್ತಿರುವ ಅಡೆತಡೆಗಳ ಬಗ್ಗೆಯೂ ಅರಿತುಕೊಳ್ಳಬೇಕಾಗಿದೆ.
ಎರಡು ವರ್ಷಗಳ ನಂತರ ಅನುಮತಿ ಸಿಕ್ಕಿತೆಂದು ಕರ್ನಾಟಕದಿಂದ ಮೊದಲ ತಂಡವನ್ನು ಚಾರ್‌ಧಾಮ್ ಪ್ರವಾಸಕ್ಕೆ ಕರೆತಂದಿದ್ದು, ಉತ್ತರಾಖಂಡ ಸರ್ಕಾರದ ಬಿಗಿ ಕ್ರಮಗಳ ಜೊತೆಗೆ ಸ್ಥಳೀಯ ಪ್ರವಾಸಿಗರಿಗೆ ಹೆಚ್ಚಿನ ಅವಕಾಶ ಸಿಗುತ್ತಿರುವುರಿಂದ ದೂರದ ರಾಜ್ಯಗಳಿಂದ ಬಂದರಿವವರು ಯಮನೋತ್ರಿ ಗಡಿಯಲ್ಲೇ ಪರದಾಡುವಂತಾಗಿದೆ.-ಎಸ್.ಸುಧಾಕರ್, ಪ್ರವಾಸಿ ಮಾರ್ಗದರ್ಶಿ.
ಕೋಲಾರ. ಆನ್‌ಲೈನ್‌ಬುಕ್ಕಿಂಗ್ ಸೇರಿ ಎಲ್ಲಾ ದಾಖಲಾತಿ, ಅನುಮತಿಗಳಿದ್ದರೂ ಪ್ರವಾಸ ವಿಳಂಬವಾಗುತ್ತಿದೆ. ಸೀಮಿತ ಸಂಖ್ಯೆಯ ಪ್ರವಾಸಿಗರಿಗೆ ಇದ್ದ ಅವಕಾಶವನ್ನು ಸ್ಥಳೀಯರು ಬಳಸಿಕೊಳ್ಳುತ್ತಿರುವುದರಿಂದ ಕರ್ನಾಟಕ ಸೇರಿ ಹೊರರಾಜ್ಯಗಳ ತಂಡಗಳ ಪ್ರವಾಸ ವೇಳಾಪಟ್ಟಿಯಲ್ಲಿ ಏರುಪೇರುಂಟಾಗಿ ನಿರಾಸೆ ಅನುಭವಿಸುವಂತಾಗಿದೆ.
-ಕದಂಬ ಸೋಮಣ್ಣ, ಕರ್ನಾಟಕದಿಂದ
ತೆರಳಿರುವ ಪ್ರವಾಸಿಗ – ಕೆ.ಎಸ್.ಗಣೇಶ್