ಮೂಡಿಗೆರೆ: ರೈತರಿಗೆ ಸಬ್ಸಿಡಿ ಅಥವಾ ಬೆಂಬಲ ಬೆಲೆ ಬೇಕಾಗಿಲ್ಲ. ವೈಜ್ಞಾನಿಕ ಬೆಲೆ ಬೇಕಾಗಿದೆ. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು ಗಮನ ಹರಿಸಬೇಕು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು. ತೋಟಗಾರಿಕೆ ಮಹಾವಿದ್ಯಾಲಯದ ರಜತ ಮಹೋತ್ಸವ ಮತ್ತು ಪೂರ್ವ ವಿದ್ಯಾರ್ಥಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನವ ಜನಾಂಗಕ್ಕೆ ಬೇಕಾಗಿರುವ ಕೃಷಿಯ ಬಗ್ಗೆ ಯೋಚನೆ ಮಾಡಬೇಕು, ನದಿ ಮೂಲಗಳನ್ನು ಉಳಿಸುವ ಕೆಲಸವಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇಸ್ರೇಲ್ ಮಾದರಿಯ ಕೃಷಿ ಮಾಡಬೇಕಾದ ಸನ್ನಿವೇಶ ಬರುತ್ತದೆ. ಹಿಂದೆಲ್ಲಾ ಹುಳಗಳು ಕ್ರಿಮಿ ಕೀಟಗಳಿಂದಾಗಿ ಸಾವಯವ ಕೃಷಿ ನಡೆಯುತ್ತಿತ್ತು. ಆದರೆ ಇಂದು ಕೀಟನಾಶಕಗಳು ಮತ್ತು ರಾಸಾಯನಿಕಗಳ ಬಳಸಲು ಹೋಗಿ ಸಮಸ್ಯೆಗೆ ಸಿಲುಕಿದಂತಾಗಿದೆ. ನಶಿಸಿ ಹೋಗಿತ್ತಿರುವ ಜೀವ ಸಂಕುಲಗಳ ರಕ್ಷಿಸುವ ಜವಾಬ್ದಾರಿ ತೋಟಗಾರಿಕಾ ವಿದ್ಯಾರ್ಥಿಗಳ ಸಂಶೋಧನೆಯಿಂದ ಮಾತ್ರ ಸಾದ್ಯ ಎಂದರು.
ಆರ್ಕಿಡ್ ಕಾರ್ಯಾಗಾರವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಮಾತನಾಡಿ, ತೋಟಗಾರಿಕಾ ವಿಶ್ವವಿದ್ಯಾಲಯ ಕೃಷಿ ವಿಜ್ಞಾನಿಗಳನ್ನು ತಯಾರು ಮಾಡುವ ವಿದ್ಯಾಲಯ. ಕೇವಲ ದುಡಿಮೆಗಾಗಿ ವಿದ್ಯಾಭ್ಯಾಸ ಮಾಡಬಾರದು. ದೇಶಕ್ಕಾಗಿ ಕೊಡುಗೆ ನೀಡುವ ದೃಷ್ಟಿಯಿಂದ ವಿದ್ಯಾಭ್ಯಾಸ ಮಾಡಬೇಕು ಎಂದು ಹೇಳಿದರು.
ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರಾದೇವಿ ಸಿದ್ಧಾರ್ಥ ಮಾತನಾಡಿ, ತೋಟಗಾರಿಕಾ ಬೆಳೆಗಳಿಗೆ ಪ್ರೋತ್ಸಾಹ ನೀಡಲು ಸಂಶೋಧನೆ ಅವಶ್ಯಕ. ಸಾಲ ಮನ್ನಾ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಲ್ಲ. ಇಂದು ಸಾಲ ಮನ್ನವಾದರೆ ಮತ್ತೆ ಮುಂದೆ ಸಾಲಗಾರನಾಗುತ್ತಾನೆ ಹಾಗಾಗಿ ರೈತರು ಆಧುನಿಕ ತಂತ್ರಜ್ಞಾನ ಬಳಸಲು ಮುಂದಾಗಬೇಕು ಎಂದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಊರಿನ ಹಿರಿಯರ ಶ್ರಮದಿಂದ ತೋಟಗಾರಿಕೆ ಕಾಲೇಜು ಸ್ಥಾಪಿಸಲು ಸಾಧ್ಯವಾಯಿತು ಎಂದರು. ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಹಳೇ ವಿದ್ಯಾರ್ಥಿ ಸಂಘದ ಲಾಂಛನ ಬಿಡುಗಡೆ ಮಾಡಿದರು. ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಡೀನ್‌ಗಳಾದ ಡಾ|ವಿಜಯ್ ಕುಮಾರ್, ಡಾ|ವೆಂಕಟೇಶ್ ರೆಡ್ಡಿ, ಡಾ|ಜೆ.ವೆಂಕಟೇಶ್, ಡಾ| ಕೆಜೆ.ಪರಮೇಶ್ವರಪ್ಪ, ಡಾ| ಡಿ.ಮಾದಯ್ಯ ಮತ್ತು ಡಾ| ಎಂ.ಹನುಮಂತಪ್ಪ ಅವರನ್ನು ಸನ್ಮಾನಿಸಲಾಯಿತು.
ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ| ಎಂ.ಕೆ ನಾಯಕ್, ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಡಾ| ಎಂ.ಹನುಮಂತಪ್ಪ , ಲೇಖಕರಾದ ರಾಜೇಶ್ವರಿ ತೇಜಸ್ವಿ, ಜಿಪಂ ಸದಸ್ಯೆ ಸುಧಾ ಯೋಗೇಶ್, ತಾಪಂ ಸದಸ್ಯೆ ಭಾರತಿ ರವೀಂದ್ರ, ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ ಕುಮಾರ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಜಯರಾಂ, ಡಿ.ಆರ್.ಉಮಾಪತಿ, ಡಾ| ವಿ.ವೀರಭದ್ರಯ್ಯ, ನೀತು ಯೋಗಿರಾಜ್ ಪಾಟೀಲ್, ಡಾ| ಎಂ.ಎಚ್.ಕೃಷ್ಣಮೂರ್ತಿ, ಡಾ| ಬಿಆರ್.ಗುರುಮೂರ್ತಿ ಮುಂತಾದವರು ಉಪಸ್ಥಿತರಿದ್ದರು.