ಹೊಸದಿಲ್ಲಿ: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅನಿರೀಕ್ಷಿತ ಸೋಲಿನಿಂದ ಬೇಸರಗೊಂಡಿರುವ ಚೆನ್ನೈ ನಾಯಕ ಧೋನಿ ಅವರು ನಾಕೌಟ್ ಹಂತದಲ್ಲಿ ತಂಡ ಎಚ್ಚರಿಕೆಯಿಂದ ಆಡಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ಗೆಲ್ಲಲು 163 ರನ್ ಗಳಿಸುವ ಗುರಿ ಪಡೆದಿದ್ದ ಚೆನ್ನೈ ತಂಡವು ರನ್ನಿಗಾಗಿ ಒದ್ದಾಟ ನಡೆಸಿ ಒತ್ತಡಕ್ಕೆ ಸಿಲುಕಿ 6 ವಿಕೆಟಿಗೆ 128 ರನ್ ಗಳಿಸಲಷ್ಟೇ ಶಕ್ತವಾಗಿ 34 ರನ್ನಿನಿಂದ ಸೋತಿತ್ತು.
ನಿಮ್ಮ ಸಾಮರ್ಥ್ಯವನ್ನು ಅರಿತು ಬಲಪಡಿಸಿಕೊಳ್ಳಿ, ಇದರ ಜತೆ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಿ. ಪಂದ್ಯದ ಕೆಲವೊಂದು ವಿಷಯದಲ್ಲಿ ನಮ್ಮ ನಿರ್ವಹಣೆಯನ್ನು ಉತ್ತಮಪಡಿಸಿ ಕೊಳ್ಳಬೇಕಾಗಿದೆ ಎಂದು ಪಂದ್ಯದ ಬಳಿಕ ಧೋನಿ ನುಡಿದರು.
ದೈಹಿಕವಾಗಿರುವುದಕ್ಕಿಂತ ಮಾನಸಿಕ ವಾಗಿಯೂ ನಾವು ಯಾವುದೇ ಹೋರಾಟಕ್ಕೂ ಸಿದ್ಧರಿರಬೇಕು. ನಮ್ಮ ಡೆತ್ ಬೌಲಿಂಗ್ ಸಮಸ್ಯೆ ಪರಿಹರಿಸಿ ಕೊಂಡರೆ ಯಾವುದೇ ತೊಂದರೆ ಎದುರಾಗುವ ಸಾಧ್ಯತೆಯಿಲ್ಲ. ಲೀಗ್ ನಲ್ಲಿ ನಮಗಿನ್ನು ಒಂದು ಪಂದ್ಯ ಬಾಕಿ ಉಳಿದಿದೆ. ಆ ಬಳಿಕ ಪ್ಲೇ ಆಫ್ ನಲ್ಲಿ ಆಡ ಬೇಕಾಗಿದೆ. ಹಾಗಾಗಿ ಕಾದು ನೋಡುವ ಎಂದು ಧೋನಿ ತಿಳಿಸಿದರು.
ಈ ಪಂದ್ಯದಲ್ಲಿ ಸೋತರೂ ಚೆನ್ನೈ ಒಟ್ಟು 16 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದು ಪ್ಲೇ ಆಫ್ಗೆ ತೇರ್ಗಡೆಯಾಗಿದೆ.