Advertisement
ನಾಡು, ನುಡಿ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಯ ಚರ್ಚೆ ಬಂದಾಗ, ಕನ್ನಡ ಶಾಲೆಗಳ ಉಳಿವಿನ ಹಾಗೂ ಅಭಿವೃದ್ಧಿಯ ಉಪಕ್ರಮಗಳೇ ಪ್ರಮುಖ ನೆಲೆಯಾಗಿ ಅಭಿಪ್ರಾಯಗಳು, ಶಿಫಾರಸುಗಳು ವ್ಯಕ್ತವಾಗಿವೆ. ಜತೆಯಲ್ಲಿ ಭಾಷೆಯನ್ನು ಕಲಿಸುವ ವ್ಯವಸ್ಥೆ ಮತ್ತು ಕಲಿಸುವ ವಿಧಾನದದ ಬಗ್ಗೆಯೂ ಆದ್ಯತೆ ಪಡೆದುಕೊಳ್ಳಬೇಕೆಂಬುದು ಬಲವಾದ ಪ್ರತಿಪಾದನೆಯಾಗಿದೆ. ಮತ್ತೆ; ಪರೀಕ್ಷೆ, ಮೌಲ್ಯಮಾಪನ ಮತ್ತು ಫಲಿತಾಂಶ ಸುಧಾರಣೆಯ ವಿಷಯ ಬೇರೆಯೇ ಇದೆ.
Related Articles
Advertisement
ಖಾಸಗಿ ಕನ್ನಡ ಮಾಧ್ಯಮದ ಶಾಲೆಗಳು ಎಂದೂ ಲಾಭ-ನಷ್ಟದ ವ್ಯವಹಾರದಲ್ಲಿ ನಡೆಸಲ್ಪಟ್ಟವುಗಳಲ್ಲ. ಎಂತೆಂತಹ ಹಳ್ಳಿಗಳಲ್ಲಿ, ಊರುಗಳಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸಿ ಅಂದಿನ ಮಹಾನುಭಾವರು ಊರಿನ, ನಾಡಿನ ಶ್ರೇಷ್ಠತೆಗೆ ನೀಡಿದ ಕೊಡುಗೆ ಅಸಾಮಾನ್ಯವಾದುದು. ನಾಡು, ನುಡಿ, ಸಂಸ್ಕೃತಿಯ ಸಂರಕ್ಷಣೆ, ಪೋಷಣೆಯಲ್ಲಿ ಅಂಥವರ ಪಾತ್ರ ಮತ್ತು ಕೊಡುಗೆಯು ಸಾರ್ವಕಾಲಿಕವಾಗಿ ಮರೆಯಬಾರದ ಸ್ಮರಣೀಯ ತ್ಯಾಗವಾಗಿದೆ. ಈ ರೀತಿಯಾಗಿ ಶುರುವಾದ, ಸಾಗಿಕೊಂಡು ಬಂದ ಖಾಸಗಿ ಕನ್ನಡ ಮಾಧ್ಯಮದ ಶಾಲೆಗಳಿಂದು ಸರಕಾರದ ಶೈಕ್ಷಣಿಕ ನೀತಿಗಳಿಂದ ನಲುಗಿಹೋಗಿವೆ. ಕನ್ನಡದ ನೆಲದಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸಿರುವುದು, ನಡೆಸುವುದು ಪಾಪಕೃತ್ಯವೋ ಎಂಬಂತೆ ಪರಿತಪಿಸುವಂತಾಗಿರುವುದು ನಾಡಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದುರಂತವಿದು.
ಸಮಾನ ಶೈಕ್ಷಣಿಕ ನೀತಿ ಬೇಕು: ಪ್ರಸ್ತುತ ಖಾಸಗಿ ಕನ್ನಡ ಮಾಧ್ಯಮದ ಶಾಲೆಗಳೆಂದರೆ ಇಂಗ್ಲಿಷರ ಶಾಲೆಗಳ್ಳೋ ಎಂಬಂತೆ ಪರಕೀಯತೆಯನ್ನು ಅನುಭವಿಸುವಂತಾಗಿದೆ. ಶಿಕ್ಷಣದ ಸಾರ್ವತ್ರೀಕರಣದಲ್ಲಿ ಮತ್ತು ಸಮಾನವಾಗಿ ಜಾರಿಗೊಳಿಸುವಲ್ಲಿ ಖಾಸಗಿ ಕನ್ನಡ ಶಾಲೆಗಳು ನೀಡಿದ ಕೊಡುಗೆ, ಅದರ ಆಡಳಿತವನ್ನು ನಡೆಸುತ್ತಿರುವ ಮಹನೀಯರ ತ್ಯಾಗ, ಸೇವೆಗಳೆಲ್ಲ ನಿಕೃಷ್ಟವಾಯಿತೇ? ನಾಡು, ನುಡಿಯ ರಕ್ಷಣೆ, ಪೋಷಣೆಯನ್ನು ಮಾಡಿದ್ದಕ್ಕೆ ಮತ್ತು ಮಾಡುತ್ತಿರುವುದಕ್ಕೆ ಸರಕಾರ ನೀಡುತ್ತಿರುವ ಗೌರವ, ಬೆಲೆ ಇದೇ ಏನು? ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ನಿರ್ಲಕ್ಷಿಸಿ ಸರಕಾರೀ ಶಾಲೆಗಳನ್ನು ಬಲವರ್ಧಿಸುವುದು ನಾಡ ಭಾಷೆ ಮತ್ತು ಸಂಸ್ಕೃತಿಗೆ ಮಾಡುವ ವಂಚನೆಯಾಗಿದೆ. ಇವತ್ತು ಸರಕಾರಿ ಶಾಲೆಗಳಿಗೆ ಸರಕಾರವು ಶೈಕ್ಷಣಿಕವಾಗಿ ನೀಡುವ ಹತ್ತು ಹಲವು ಸೌಲಭ್ಯಗಳಿಂದ ಖಾಸಗಿ ಕನ್ನಡ ಶಾಲೆಗಳು ವಂಚಿತವಾಗಿವೆ. ಮಕ್ಕಳ ಸೇರ್ಪಡೆಯಿಂದ ತೊಡಗಿ ಅಂತಿಮ ಪರೀಕ್ಷೆಗೆ ಕುಳಿತುಕೊಳ್ಳುವ ತನಕ. ಪಾಠ ಮಾಡುವ ವಿಷಯದಲ್ಲೂ ಮಕ್ಕಳಿಗೆ ನೀಡುವ ಸೌಲಭ್ಯಗಳಲ್ಲೂ ಭೇದ ನೀತಿ. ಸರಕಾರದ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಧೋರಣೆಗಳು ಖಾಸಗಿ ಕನ್ನಡ ಶಾಲೆಗಳಿಗೆ ವಿರುದ್ಧವಾಗಿಯೇ ಇದೆ. ಸಮಾನತೆಯೆಂಬ ಶೈಕ್ಷಣಿಕ ತಟ್ಟೆಯಲ್ಲಿ ಅಸಮಾನತೆಯ ಊಟ ಎನ್ನೋಣವೇ?
ಕನ್ನಡ ಉಳಿಸುವುದೆಂದರೆ…: ಕನ್ನಡ ಉಳಿಸಿ ಬೆಳೆಸುವುದೆಂದರೆ…? ಕನ್ನಡ ಶಾಲೆಗಳನ್ನು ಗಟ್ಟಿಗೊಳಿಸುವುದು ಎಂದರ್ಥ. ಇದರಲ್ಲಿ ಖಾಸಗಿ, ಸರಕಾರಿ ಎಂಬ ತಾರತಮ್ಯ ಇಲ್ಲದ, ನಾಡು, ನುಡಿ, ಸಂಸ್ಕೃತಿ ಸಂರಕ್ಷಣೆಯ ಮತ್ತು ಪೋಷಣೆಯ ಘೋಷಣೆಯಾಗಬೇಕು. ಕನ್ನಡ ಉಳಿಸಿ, ಬೆಳೆಸಿ ಎನ್ನುತ್ತೇವೆ. ಇನ್ನೊಂದೆಡೆ ಕನ್ನಡ ಉಳಿಸಿ, ಬೆಳೆಸುವ ಕಾಯಕದಲ್ಲಿ ಶತಮಾನಗಳಿಂದ ತೊಡಗಿರುವ ಖಾಸಗಿ ಕನ್ನಡ ಶಾಲೆಗಳನ್ನು ಮರೆಯುತ್ತೇವೆ. ಉದ್ದೇಶ ಪೂರ್ವಕವಾಗಿಯೋ ಎಂಬಂತೆ ಖಾಸಗಿ ಕನ್ನಡ ಶಾಲೆಗಳು ಅವಗಣಿÓಲ್ಪಡುತ್ತಿವೆ. ಇದು ಕನ್ನಡದ ಶಾಲೆಗಳನ್ನು ಕಟ್ಟಿ, ಬೆಳೆಸಿ ನಾಡುನುಡಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹನೀಯರಿಗೆ ಸಲ್ಲಿಸುವ ಗೌರವವೇನು? ಈಗೀಗ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಮಾತಲ್ಲೂ ಕನ್ನಡ ಶಾಲೆಗಳ ಅಭಿವೃದ್ಧಿ ಎಂಬ ಮಾತೂ ವಿರಳವಾಗಿದೆ. ನಾಡ ಭಾಷೆಯ ಮೂಲಕ ನಾಡ ಅಭಿವೃದ್ಧಿ ಸಾಧಿಸುವ ಯೋಜನೆ ರೂಪಿತವಾಗಬೇಕು. ಸರಕಾರಿ ಶಾಲೆಗಳ ಅಭಿವೃದ್ಧಿ ಎಂಬ ಘೋಷಣೆಯ ಬದಲು ಕನ್ನಡ ಶಾಲೆಗಳ ಅಭಿವೃದ್ಧಿಯೆಂಬ ಘೋಷಣೆ ಕೇಳಿಬರಬೇಕು. ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯು ಮರು ನಿರೂಪಿತವಾದಾಗಲೆ ಕನ್ನಡದ ನೈಜ ಸಶಕ್ತೀಕರಣ ಸಾಧ್ಯ.
-ರಾಮಕೃಷ್ಣ ಭಟ್ ಚೊಕ್ಕಾಡಿ, ಬೆಳಾಲು