Advertisement

ಕಾಂಗ್ರೆಸ್‌ ಸಂಘಟನೆಗೆ ಎಲ್ಲ ರೂ ಶ್ರಮಿಸಿ: ಪ್ಯಾರಿಜಾನ್‌

06:48 PM Sep 01, 2020 | Suhan S |

ದಾವಣಗೆರೆ: ತಳಮಟ್ಟದಿಂದ ಕಾಂಗ್ರೆಸ್‌ ಸಂಘಟನೆಗೆ ಎಲ್ಲರೂ ಶ್ರಮಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸೇವಾದಳ ರಾಜ್ಯ ಘಟಕದ ಅಧ್ಯಕ್ಷೆ ಎಸ್‌.ಪ್ಯಾರಿಜಾನ್‌ ಮನವಿ ಮಾಡಿದರು.

Advertisement

ಸೋಮವಾರ ರಿಂಗ್‌ ರಸ್ತೆಯ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಏರ್ಪಡಿಸಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸೇವಾದಳ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಈಗ ದೇಶಕ್ಕೆ ಅನಿವಾರ್ಯ ಎಂತಹ ವಾತಾವರಣ ನಿರ್ಮಾಣವಾಗಿದೆ. ಕಿಸಾನ್‌ ಸೆಲ್‌, ಸೇವಾದಳ, ಯುವ ಕಾಂಗ್ರೆಸ್‌ ಸೇರಿ ಮೂಲ ಕಾಂಗ್ರೆಸ್‌ನ್ನು ಬಲಪಡಿಸಬೇಕು. ಆಗ ಮಾತ್ರ ಪಕ್ಷ ಸದೃಢವಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು.

ದೇಶ ಮತ್ತು ರಾಜ್ಯಕ್ಕೆ ಕಾಂಗ್ರೆಸ್‌ ಅನಿವಾರ್ಯವಾಗಿದೆ. ಸಭೆ, ಸಮಾರಂಭ ಮಾಡುವುದೇ ಮುಖ್ಯ ಅಲ್ಲ. ಪಕ್ಷದ ಪ್ರತಿಯೊಂದು ಘಟಕ ಜವಾಬ್ದಾರಿ ಅರಿತು ಸಂಘಟನೆಯ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಕಾಂಗ್ರೆಸ್‌ ಒಂದು ಸಮೂಹ, ಚಳವಳಿ. ಬ್ರಿಟಿಷರನ್ನು ಓಡಿಸುವಲ್ಲಿ ಮುಖ್ಯಪಾತ್ರ ವಹಿಸಿದೆ. ಬಿಜೆಪಿ ಬ್ರಿಟಿಷರಂತೆ ಒಡೆದು ಆಳುವ ಕೆಲಸ ಮಾಡುತ್ತಿದೆ ಎಂಬುದನ್ನ ಕಾಂಗ್ರೆಸ್‌ನ ಕಾರ್ಯಕರ್ತರು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಬ್ರಿಟಿಷರನ್ನು ಓಡಿಸಲು ಹಿಂದೂ, ಮುಸ್ಲಿಂ, ಕ್ರೈಸ್ತರು, ದಲಿತರು, ಅಲ್ಪಸಂಖ್ಯಾತರು ಸೇರಿ ಎಲ್ಲಾ ಧರ್ಮಗಳ ಜನರು ರಕ್ತ ಸುರಿಸಿದರು. ಕಾಂಗ್ರೆಸ್‌ ಯಾವುದೇ ಜಾತಿ ಧರ್ಮ ಕೇಳದೆ ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುತ್ತಿದೆ. 23 ಘಟಕಗಳ ಸದಸ್ಯರು ಹಿರಿಯರ ಸಹಕಾರದೊಂದಿಗೆ ಕಿರಿಯರು ಪಕ್ಷ ಸಂಘಟನೆಯಲ್ಲಿ ಮಾಡಬೇಕು ಎಂದು ಕೋರಿದರು.

ಹರಿಹರ ಶಾಸಕ ಎಸ್‌. ರಾಮಪ್ಪ ಮಾತನಾಡಿ, ನರೇಂದ್ರ ಮೋದಿ ಅವರು ವಷಕ್ಕೆ 2 ಕೋಟಿ ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಆದರೆ, ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಪ್ರಧಾನಿಯವರು ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಈಗ ಬಿಜೆಪಿಗೆ ವರ್ಚಸ್ಸೇ ಇಲ್ಲ. ಯುವಕರನ್ನು ಕಾಂಗ್ರೆಸ್‌ಗೆ ಸೆಳೆಯುವ ಕೆಲಸ ಮಾಡಬೇಕು ಎಂದರು.

Advertisement

ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್‌ ಮಾತನಾಡಿ, ಸೇವಾದಳ ಕಾಂಗ್ರೆಸ್‌ನ ಬೆನ್ನೆಲುಬು, ಸೇವಾದಳ ಬಲಿಷ್ಠವಾದರೆ ಪಕ್ಷ ಬಲಿಷ್ಠವಾದಂತೆ, ಸೇವಾದಳದಲ್ಲಿ ಕಾರ್ಯನಿರ್ವಹಿಸಿದವರು ಮುಖ್ಯಮಂತ್ರಿ, ಕೇಂದ್ರ ಮಂತ್ರಿಗಳಾಗಿದ್ದಾರೆ. ಸೇವಾದಳ ಸಂಘಟನೆಯಾದರೆ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ.ಶೆಟ್ಟಿ ಮಾತನಾಡಿ, ಕಾನೂನು ಎಲ್ಲರಿಗೂ ಒಂದೇ. ನಮ್ಮಗಳ ಧರ್ಮ ಕೇವಲ ಮನೆಗಳಿಗೆ ಮಾತ್ರ. ಮನೆಯಿಂದ ಹೊರಗೆ ಬಂದರೆ ನಾವೆಲ್ಲರೂ ಒಂದೇ. ಎಲ್ಲಾ ಧರ್ಮಗಳಲ್ಲಿಯೂ ಕೆಟ್ಟವರು ಹಾಗೂ ಒಳ್ಳೆಯವರು ಇದ್ದೇ ಇರುತ್ತಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದರು. ಮಹಿಳಾ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್‌ ಮಾತನಾಡಿ, ಕಾಂಗ್ರೆಸ್‌ ಸರ್ವ ಜನಾಂಗದ ಶಾಂತಿಯ ತೋಟ ಇದ್ದಂತೆ. ಎಲ್ಲರೂ ಸಹ ಒಂದಾಗಿ ಪಕ್ಷ ಕಟ್ಟೋಣ, ನಾವೆಲ್ಲರೂ ಸಮಾನರು ಎಂಬುದನ್ನು ಸಾರೋಣ ಎಂದು ತಿಳಿಸಿದರು.

ಜಿಪಂ ಸದಸ್ಯ ಕೆ.ಎಚ್‌. ಓಬಳೇಶಪ್ಪ, ತಾಪಂ ಸದಸ್ಯೆ ಆಶಾ ಮುರುಳಿ, ಸೇವಾದಳದ ಜಿಲ್ಲಾ ಅಧ್ಯಕ್ಷ ಡೋಲಿ ಚಂದ್ರು, ಉಮಾದೇವಿ, ರಮೇಶ್‌, ಅಬ್ದುಲ್‌ ಜಬ್ಬರ್‌, ಕಲ್ಪನಾರಾಜು, ಮಂಜುನಾಥ್‌, ನಂಜನಾಯ್ಕ, ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್‌. ಹರೀಶ್‌ ಬಸಾಪುರ, ಸುಷ್ಮಾ ಪಾಟೀಲ್‌, ಶುಭಮಂಗಳ, ದಾಕ್ಷಾಯಣಮ್ಮ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next