Advertisement

ಬೀದಿ ವ್ಯಾಪಾರಸ್ಥರಿಗೆ ಬೇಕಿದೆ ನೆಲೆ !ಕುಂಭಾಶಿಯಲ್ಲಿ ಮಂಗಳವಾರದ ಸಂತೆಗ ಹೆಚ್ಚಿದ ಬೇಡಿಕೆ

04:04 PM Mar 07, 2023 | Team Udayavani |

ತೆಕ್ಕಟ್ಟೆ: ಇಲ್ಲಿನ ಕುಂಭಾಶಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ರಾ.ಹೆ.66ರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಮಹಾದ್ವಾರದ ಬಳಿ ಪ್ರತಿ ಮಂಗಳವಾರದಂದು ತಾಜಾ ಹಣ್ಣು, ಸೊಪ್ಪು ಹಾಗೂ ಇನ್ನಿತರ ತರಕಾರಿ ವ್ಯಾಪಾರಕ್ಕಾಗಿ ವರ್ತಕರರು ಆಗಮಿಸಿರುವುದರಿಂದ ಆನೆಗುಡ್ಡೆ ದೇಗುಲಕ್ಕೆ ಆಗಮಿಸುವ ಭಕ್ತರು ಸೇರಿದಂತೆ ಸ್ಥಳೀಯ ನೂರಾರು ಗ್ರಾಹಕರು ತಾಜಾ ತರಕಾರಿ ಖರೀದಿಗಾಗಿ ಮುಂದೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಸರಕಾರಿ ಜಾಗದಲ್ಲಿ ಮಂಗಳವಾರದಂದು ಸಂತೆ ಮಾರುಕಟ್ಟೆ ಅವಕಾಶ ಕಲ್ಪಿಸುವಂತೆ ಸಾರ್ವಜನಿಕ ವಲಯದಿಂದ ಬೇಡಿಕೆಗಳು ಕೇಳಿ ಬರುತ್ತಿದೆ.

Advertisement

ಬೀದಿ ವ್ಯಾಪಾರಸ್ಥರಿಗಿಲ್ಲ ಸುರಕ್ಷತೆ ಈಗಾಗಲೇ ಕುಂಭಾಶಿ ರಾ.ಹೆ.66 ಇಕ್ಕೆಲದಲ್ಲಿರುವ ಹಳೆದಾದ ಪಂಚಾಯತ್‌ ಕಟ್ಟಡದ ಎದುರಿನಲ್ಲಿ ಈ ಬೀದಿ ಬದಿ ವ್ಯಾಪಾರಸ್ಥರು ತಮ್ಮ ಸುರಕ್ಷೆಯನ್ನು ಲೆಕ್ಕಿಸದೆ ಬಿಸಿಲಿನಲ್ಲಿಯೇ ಬೆಳಗ್ಗೆಯಿಂದ ಸಂಜೆಯ ವರೆಗೆ ಕುಳಿತು ತರಕಾರಿ ವ್ಯಾಪಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಆದರೆ ಈ ಪ್ರಮುಖ ಭಾಗದಲ್ಲಿ ರಾ.ಹೆ.66ರಲ್ಲಿ ವಾಹನ ಸಂಚಾರ ಅಧಿಕವಾಗಿರುವ ಪರಿಣಾಮ ಸಂಭವನೀಯ ಅವಘಡಗಳಿಗೂ ಕಾರಣವಾಗುವ ಸಾಧ್ಯತೆ ಹೆಚ್ಚಾಗಿದೆ. ವ್ಯಾಪಾರಕ್ಕೆ ಬರುವ ವರ್ತಕರು ಹಾಗೂ ಖರೀದಿಗೆ ಬರುವ ಗ್ರಾಹಕರ ಹಿತದೃಷ್ಟಿಯಿಂದ ಸಾರ್ವಜನಿಕರಿಗೆ ಅನುಕೂಲಕರವಾಗುವ ರೀತಿಯಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ಸಂಬಂಧಪಟ್ಟ ಸ್ಥಳೀಯಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಮುಂದಿನ ಕ್ರಮಕ್ಕಾಗಿ ಚಿಂತನೆ
ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಇಂತಹ ಸಂತೆಗಳು ಗ್ರಾಮದಲ್ಲಿ ನಡೆಯುವುದು ಒಳ್ಳೆಯದೆ. ಆದರೆ ಈಗಿರುವ ವ್ಯಾಪಾರ ಸ್ಥಳಗಳು ಅಷ್ಟೊಂದು ಸುರಕ್ಷಿತವಲ್ಲ. ಈ ಬಗ್ಗೆ ಗ್ರಾ.ಪಂ. ಸರ್ವ ಸದಸ್ಯರ ಅಭಿಪ್ರಾಯ ಹಾಗೂ ಸಾರ್ವಜನಿಕ ಬೇಡಿಕೆಯ ಆಧಾರದ ಮೇಲೆ ಮುಂದಿನ ಕ್ರಮಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು.ರಸ್ತೆಯ ಇಕ್ಕೆಲದಲ್ಲಿ ಸೊಪ್ಪು ತರಕಾರಿಗಳನ್ನು ಮಾರಾಟ ಮಾಡುವುದರಿಂದ ವಾಹನದಲ್ಲಿ ಬರುವ ಗ್ರಾಹಕರು ರಸ್ತೆಯ ಮೇಲೆ ವಾಹನವನ್ನು ನಿಲ್ಲಿಸಿ ತೆರಳುವ ಪರಿಣಾಮ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಗ್ರಾ.ಪಂ.ನ ಗಮನಕ್ಕೆ ಬಂದಿದೆ.
– ಶ್ವೇತಾ ಎಸ್‌.ಆರ್‌.ಅಧ್ಯಕ್ಷರು,
ಗ್ರಾಮ ಪಂಚಾಯತ್‌ ಕುಂಭಾಶಿ

ಸ್ಥಳಾವಕಾಶ ಕಲ್ಪಿಸಿ
ಚಿಕ್ಕಮಗಳೂರು ಹಾಗೂ ಬೆಂಗಳೂರಿನಿಂದ ರಖಂ ತಾಜಾ ತರಕಾರಿಗಳನ್ನು ಖರೀದಿಸಿ, ಮೂರು ಮಂದಿ ತರಕಾರಿ ವ್ಯಾಪಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದೇವೆ. ಸ್ಥಳೀಯ ಗ್ರಾಹಕರಿಂದ ಉತ್ತಮ ಸ್ಪಂದನೆಗಳು ದೊರೆತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾ.ಪಂ. ನಮ್ಮಂತಹ ಬೀದಿ ವ್ಯಾಪಾರಸ್ಥರಿಗೆ ಸೂಕ್ತವಾದ ಸ್ಥಳಾವಕಾಶ ನೀಡಿದರೆ ಸ್ಥಳೀಯ ಗ್ರಾಹಕರಿಗೆ ಅನುಕೂಲವಾಗುವಂತೆ ಮಂಗಳವಾರದಂದು ಕುಂಭಾಶಿಯಲ್ಲಿ ಸಂತೆ ನಡೆಸಬಹುದು. ಇದರಿಂದಾಗಿ ಅದೆಷ್ಟೋ ಸ್ಥಳೀಯ ರೈತಾಪಿ ವರ್ಗದವರು ಸೇರಿದಂತೆ ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲಕರವಾಗಲಿದೆ.
– ಪ್ರಭು ಗೌಡ, ತರಕಾರಿ ವ್ಯಾಪಾರಸ್ಥರು

Advertisement
Advertisement

Udayavani is now on Telegram. Click here to join our channel and stay updated with the latest news.

Next