ಬೆಂಗಳೂರು: ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಶೀಘ್ರದಲ್ಲೇ ಬಿಬಿಎಂಪಿಯಿಂದ ವ್ಯಾಪಾರ ನಡೆಸುವ ಸಂಬಂಧ ಗುರುತಿನ ಚೀಟಿ ವಿತರಣೆಯಾಗಲಿದೆ.
ಈ ಸಂಬಂಧ ನಗರದಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲು ಪಾಲಿಕೆ ನಿರ್ಧರಿಸಿದೆ. ವಾರ್ಡ್ ಮಟ್ಟದಿಂದ ಆಯುಕ್ತರವರೆಗೆ ಮೂರು ಹಂತಗಳಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ವರದಿ ಪರಿಶೀಲಿಸಿ ಎಲ್ಲ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ತೀರ್ಮಾನಿಸಲಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್, “ಗುರುತಿನ ಚೀಟಿ ವಿತರಣೆ ಸಂಬಂಧ ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಸಾಮಾನ್ಯವಾಗಿ ವ್ಯಾಪಾರಿಗಳಿಗೆ ಪರವಾನಗಿ ಇರುತ್ತದೆ. ಆದರೆ, ಬೀದಿ ವ್ಯಾಪಾರಿಗಳಿಗೆ ಈ ಪರವಾನಗಿಗಳು ಇರುವುದಿಲ್ಲ. ಹೀಗಾಗಿ, ವ್ಯಾಪಾರ ನಡೆಸಲು ಕಷ್ಟ ಜತೆಗೆ ಹಲವು ರೀತಿಯ ಕಿರುಕುಳ ಅನುಭವಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ನಿರ್ದಿಷ್ಟವಾದ ಜಾಗಗಳಲ್ಲಿ ನಿಯಮಿತವಾಗಿ ವ್ಯಾಪಾರ ಮಾಡಿಕೊಂಡು ಬರುತ್ತಿರುವವರಿಗೆ ಗುರುತಿನ ಚೀಟಿ ವಿತರಿಸಲಾಗುವುದು,” ಎಂದು ತಿಳಿಸಿದರು.
ಲಕ್ಷ ವ್ಯಾಪಾರಿಗಳಿರುವ ಅಂದಾಜು: ಮೇಯರ್ ಜಿ. ಪದ್ಮಾವತಿ ಮಾತನಾಡಿ, “ನಗರದಲ್ಲಿ ಅಂದಾಜು ಒಂದು ಲಕ್ಷ ಬೀದಿ ಬದಿ ವ್ಯಾಪಾರಿಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಈ ಬಗ್ಗೆ ಸಮೀಕ್ಷೆ ನಡೆಸಲು ವಾರ್ಡ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳಲ್ಲಿ ಸ್ಥಳೀಯ ಠಾಣೆ ಪೊಲೀಸರು, ಕಂದಾಯ ವಿಭಾಗದ ಅಧಿಕಾರಿಗಳು ಕೂಡ ಇರುತ್ತಾರೆ. ಅವರು ನೀಡುವ ವರದಿಯನ್ನು ಮರುಪರಿಶೀಲಿಸಿ, ನಂತರ ಗುರುತಿನ ಚೀಟಿ ನೀಡಲಾಗುವುದು. ಒಂದು ಕುಟುಂಬಕ್ಕೆ ಒಂದೇ ಗುರುತಿನ ಚೀಟಿ ವಿತರಿಸಲಾಗುವುದು. ಇದರಲ್ಲಿ ಕುಟುಂಬದ ಸದಸ್ಯರೆಲ್ಲರ ಭಾವಚಿತ್ರಗಳೂ ಇರುತ್ತವೆ. ಹೀಗಾಗಿ, ವಂಚಿಸಲಿಕ್ಕೂ ಅವಕಾಶ ಇಲ್ಲ,” ಎಂದು ಹೇಳಿದರು.
ಗುರುತಿನ ಚೀಟಿ ಪಡೆದು ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಕುಡಿಯುವ ನೀರು, ಶೌಚಾಲಯ ಮತ್ತಿತರ ವ್ಯವಸ್ಥೆ ಕೂಡ ಮಾಡಲಾಗುವುದು. ಆದರೆ, ಬೀದಿ ವ್ಯಾಪಾರಿಗಳು ಉತ್ಪಾದಿಸುವ ಘನತ್ಯಾಜ್ಯದ ವ್ಯವಸ್ಥಿತ ವಿಲೇವಾರಿ ಆಯಾ ವ್ಯಾಪಾರಿಗಳ ಹೊಣೆ. ಎಲ್ಲೆಂದರಲ್ಲಿ ಕಸ ಎಸೆಯುವಂತಿಲ್ಲ. ಬೆಳಿಗ್ಗೆ ವ್ಯಾಪಾರಕ್ಕೂ ಮುನ್ನ ಅಥವಾ ಸಂಜೆ ವ್ಯಾಪಾರ ಮುಗಿದ ನಂತರ ತ್ಯಾಜ್ಯವನ್ನು ಹತ್ತಿರದ ಕಸ ಸಂಗ್ರಹ ತೊಟ್ಟಿಗೆ ವಿಂಗಡಣೆ ಮಾಡಿ, ವಿಲೇವಾರಿ ಮಾಡಲು ಸೂಚಿಸಲಾಗುವುದು ಎಂದು ವಿವರಿಸಿದರು.
ಬಿಬಿಎಂಪಿ ಪೌರಕಾರ್ಮಿಕರಿಗೆ ನೀಡಬೇಕಾದ ಐದು ತಿಂಗಳ ಹಿಂಬಾಕಿ ಪೈಕಿ ಮೊದಲ ಹಂತದಲ್ಲಿ ಮೂರು ತಿಂಗಳ ಹಿಂಬಾಕಿ 70 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆಗಸ್-ಡಿಸೆಂಬರ್‌ವರೆಗಿನ ಹಿಂಬಾಕಿ ಪೈಕಿ ಮೂರು ತಿಂಗಳ ಬಾಕಿ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಉಳಿದ ಹಣ ಬಿಡುಗಡೆ ಮಾಡಲಾಗುವುದು. ಪೌರಕಾರ್ಮಿಕರ ವೇತನ 10 ಸಾವಿರದಿಂದ ಏಕಾಏಕಿ 17 ಸಾವಿರ ರೂ. ಆಗಿದ್ದರಿಂದ ಪಾಲಿಕೆಗೆ ನೂರು ಕೋಟಿ ರೂ. ಹೊರೆಯಾಗಿದೆ.
-ಮಂಜುನಾಥ್ ಪ್ರಸಾದ್, ಆಯುಕ್ತ