Advertisement

ಬೀದಿಬದಿ ವ್ಯಾಪಾರಿಗಳದ್ದೇ ಕಾರುಬಾರು

12:05 PM Aug 23, 2018 | |

ಬೆಂಗಳೂರು: ಕೆ.ಆರ್‌ ಮಾರುಕಟ್ಟೆ ಹೊರಭಾಗ ಪಾದಾಚಾರಿ ಮಾರ್ಗ ಹಾಗೂ ರಸ್ತೆಗಳಲ್ಲಿ ವ್ಯಾಪಾರಿಗಳ ಹಾವಳಿ ಹೆಚ್ಚಾಗಿದ್ದು, ಇದರ ಪರಿಣಾಮ ಟ್ರಾಫಿಕ್‌ ಸಮಸ್ಯೆ ಜತೆಗೆ ನಿಯಮ ಬದ್ದವಾಗಿ ಮಳಿಗೆಗಳನ್ನು ಪಡೆದು ಸುಂಕ ಕಟ್ಟಿ ವಹಿವಾಟು ನಡೆಸುವ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.

Advertisement

ದಿನವಿಡೀ ವ್ಯಾಪಾರ ವಹಿವಾಟು ನಡೆಯುವ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಕೆ.ಆರ್‌ ಮಾರುಕಟ್ಟೆಯೂ ಒಂದಾಗಿದ್ದು, ಸುಸಜ್ಜಿತ ಕಟ್ಟಡ ಹಾಗೂ ಮಳಿಗೆಗಳನ್ನು ಬಿಬಿಎಂಪಿ ನಿರ್ಮಿಸಿಕೊಟ್ಟಿದ್ದು, ನೂರಾರು ವ್ಯಾಪಾರಿಗಳು ವಹಿವಾಟಿ ನಲ್ಲಿ ತೊಡಗಿದ್ದಾರೆ. ಆದರೆ, ಈ ಮಾರುಕಟ್ಟೆಯ ಒಳಭಾಗದಲ್ಲಿ ನಡೆಯುವ ವ್ಯಾಪಾರ ವಹಿವಾಟಿಗೆ ಪೈಪೋಟಿ ನೀಡುವ ಮಟ್ಟಿಗೆ ಮಾರುಕಟ್ಟೆಯ ಸುತ್ತಮುತ್ತಲ ರಸ್ತೆ ಹಾಗೂ ಪಾದಾಚಾರಿ ಮಾರ್ಗಗಳಲ್ಲಿ ಬೀದಿವ್ಯಾಪಾರ ನಡೆಯುತ್ತಿದೆ. ಇದರಿಂದಾಗಿ ಮಾರುಕಟ್ಟೆ ಒಳಾಂಗಣದಲ್ಲಿ ಪಾಲಿಕೆಯಿಂದ ಪರವಾನಗಿ ಪಡೆದು ಅಧಿಕೃತವಾಗಿ ವ್ಯಾಪಾರ ಮಾಡುತ್ತಿರುವರಿಗೆ ಸಾಕಷ್ಟು ಸಮಸ್ಯೆ ಉಂಟುಮಾಡುತ್ತಿದೆ.

ಪರವಾನಗಿ ಇಲ್ಲದೇ ವ್ಯಾಪಾರ: ಬೀದಿಬದಿ ವ್ಯಾಪಾರ ಹೆಚ್ಚಾಗಿ ಕೆ.ಆರ್‌.ಮಾರುಕಟ್ಟೆಯನ್ನು ಒಳ ಮತ್ತು ಹೊರಭಾಗಗಳಾಗಿ ವಿಂಗಡಿಸುವ ವಾತಾವರಣ ಸೃಷ್ಟಿಯಾಗಿದೆ. ಮಾರುಕಟ್ಟೆ ಒಳಾಂಗಣದಲ್ಲಿ ಪರವಾನಗಿ ಪಡೆದು ಪ್ರತಿ ತಿಂಗಳು ಸುಂಕಕಟ್ಟಿ ಅಧಿಕೃತವಾಗಿ ನೂರಾರು ವ್ಯಾಪಾರಿಗಳು ವಹಿವಾಟು ನಡೆಸುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ಮಾರುಕಟ್ಟೆ ಹೊರಭಾಗದ ರಸ್ತೆ, ಜಂಕ್ಷನ್‌, ಮೇಲ್ಸೇತುವೆ ಕೆಳಭಾಗ, ಅಂಚೆ ಕಚೇರಿ ಮುಂಭಾಗ, ವಾಹನ ನಿಲುಗಡೆ ಸ್ಥಳದ ಸುತ್ತಮುತ್ತ, ಪಾದಾಚಾರಿ ಮಾರ್ಗದಲ್ಲಿ
ಬೀದಿವ್ಯಾಪಾರ ನಡೆಯುತ್ತದೆ. ಇಲ್ಲಿನ ಬೀದಿ ವ್ಯಾಪಾರಿಗಳು ಯಾವುದೇ ರೀತಿಯ ಪರವಾನಗಿ ಆಗಲಿ, ಗುರುತಿನ ಚೀಟಿಯಾಗಲಿ ಹೊಂದಿಲ್ಲ. ಆದರೂ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದಾರೆ.

ಇದರಿಂದಾಗಿ ಜನಜಂಗುಳಿ, ವಾಹನ ನಿಲುಗಡೆ ಸಮಸ್ಯೆ ಎಂದು ಈಗಾಗಲೇ ಮಾರುಕಟ್ಟೆ ಒಳಹೋಗಲು ಮೂಗು ಮುರಿಯುತ್ತಿರುವ ಸಾರ್ವಜನಿಕರು ಇಲ್ಲಿಯೇ ಖರೀದಿ ಮಾಡುತ್ತಿದ್ದಾರೆ. ಅತ್ತ ಒಳಭಾಗದ ವ್ಯಾಪಾರಿಗಳು ವ್ಯಾಪಾರವಿಲ್ಲದೆ ನೊಣ ಹೊಡೆಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಹನ ಸಂಚಾರಕ್ಕೂ ಅಡಚಣೆ: ಮಾರುಕಟ್ಟೆ ಸುತ್ತಲಿನ ಬೀದಿಬದಿ ವ್ಯಾಪಾರಿಗಳು ಪಾದಚಾರಿ ರಸ್ತೆಗಳ ಜತೆಗೆ ವಾಹನಗಳು ಸಂಚರಿಸುವ ಮುಖ್ಯ ರಸ್ತೆಗಳನ್ನೇ ಅತಿಕ್ರಮಿಸಿಕೊಂಡಿದ್ದಾರೆ. ವಾಹನಗಳು ಮಾರುಕಟ್ಟೆ ಪ್ರವೇಶಕ್ಕೆ ಹಾಗೂ ನಿಲುಗಡೆ ತಾಣಕ್ಕೆ ತೆರಳಲೂ ಜಾಗವಿಲ್ಲದಂತಾಗಿದೆ. ಕೆ.ಆರ್‌. ಜಂಕ್ಷನ್‌ ಅಕ್ಕಪಕ್ಕವೂ ವ್ಯಾಪಾರಿಗಳು ಇದ್ದು, ವಾಹನ ಸಂಚರಿಸಲು ಹರಸಾಹಸ ಪಡಬೇಕು. ಇದರಿಂದಾಗಿ ಹೆಚ್ಚು ವಾಹನ ದಟ್ಟನೆಯಿಂದ ಕೂಡಿರುವ ಕೆ.ಆರ್‌. ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿರುತ್ತವೆ.

Advertisement

ಕೆಲವು ಬಾರಿ ವಿಕ್ಟೋರಿಯಾ ಅಸ್ಪತ್ರೆಗೆ ಹೋಗುವ ಆ್ಯಂಬುಲೆನ್ಸ್‌ಗೂ ಕೂಡ ಜಾಗವಿರುವುದಿಲ್ಲ. ಮುಖ್ಯವಾಗಿ ಮೇಲ್ಸೇತುವೆ ಏರುವ ಹಾಗೂ ಇಳಿಯುವ ರಸ್ತೆಗಳಲ್ಲೂ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದೊಡ್ಡ ಅವಘಡಕ್ಕೆ ಕಾರಣವಾಗುತ್ತದೆ.

ಮಾಮೂಲಿ ಕೊಟ್ಟರೆ ಪ್ರಶ್ನಿಸುವುದಿಲ್ಲ: ಈ ರಸ್ತೆ ಅಕ್ಕಪಕ್ಕ ನಡೆಯುವ ಅನಧಿಕೃತ ವ್ಯಾಪಾರವನ್ನು ಪಾಲಿಕೆಯ ಯಾವ ಅಧಿಕಾರಿಗಳು ಪ್ರಶ್ನಿಸುವುದಿಲ್ಲ. ಬದಲಿಗೆ ಪಾಲಿಕೆ ಸಿಬ್ಬಂದಿ ಈ ಬೀದಿಬದಿ ವ್ಯಾಪಾರಿಗಳಿಂದ ಮಾಮೂಲಿ ವಸೂಲಿ ಮಾಡಿ ಜೇಬು ತುಂಬಿಸಿಕೊಂಡು ಅಕ್ರಮವನ್ನು ಕಂಡು ಕಾಣದಂತೆ ಸುಮ್ಮನಾಗುತ್ತಿದ್ದಾರೆ ಎನ್ನುತ್ತಾರೆ ಮಾರುಕಟ್ಟೆ ಅಧಿಕೃತ ವ್ಯಾಪಾರಿ ಸತ್ಯಣ ಗ್ರಾಹಕರು ಮಾರುಕಟ್ಟೆ ಒಳ ಪ್ರವೇಶಿಸುತ್ತಿಲ್ಲ ಕೆ.ಆರ್‌ ಮಾರುಕಟ್ಟೆ ನಗರದ ಅತೀ ಹೆಚ್ಚು ವ್ಯಾಪಾರ ವಹಿವಾಟು ನಡೆಯುವ ಹಾಗೂ ಪಾಲಿಕೆಗೆ ಹೆಚ್ಚಿನ ಆದಾಯ ತಂದುಕೊಡುವ ಮಾರುಕಟ್ಟೆಯಾಗಿದೆ. ಇನ್ನು ಇಲ್ಲಿ ನಡೆಯುವ ಅಕ್ರಮ ಬೀದಿ ವ್ಯಾಪಾರದಿಂದ ನಮಗೆ ಸಾಕಷ್ಟು ನಷ್ಟವಾಗುತ್ತಿದೆ. ಸಾರ್ವಜನಿಕರು ಬೀದಿಬದಿಯೇ ಎಲ್ಲಾ ಖರೀದಿಸಿ ಮಾರುಕಟ್ಟೆ ಒಳ ಪ್ರವೇಶಿಸುತ್ತಿಲ್ಲ. ಈ ಕುರಿತು ಸಾಕಷ್ಟು ಬಾರಿ ಪಾಲಿಕೆ ಅಧಿಕಾರಿಗಳ ಹಾಗೂ ಮೇಯರ್‌ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಮಳಿಗೆ ಪಡೆದು ಸರಿಯಾಗಿ ತೆರಿಗೆ ಕಟ್ಟುತ್ತಿದ್ದರೂ, ಅಧಿಕೃತ ಅಂಗಡಿಗಳ ಮಾಲೀಕರ ಅಳಲನ್ನು ಕೇಳುವವರು ಇಲ್ಲದಂತಾಗಿದೆ. ಈಗಲಾದರೂ ಪಾಲಿಕೆಯು ಸೂಕ್ತ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು ಎನ್ನುತ್ತಾರೆ ನೂರಕ್ಕೂ ಹೆಚ್ಚು ಕೆ.ಆರ್‌.ಮಾರುಕಟ್ಟೆ ಅಧಿಕೃತ ವ್ಯಾಪಾರಿಗಳು. 

ಬೀದಿಬದಿ ವ್ಯಾಪಾರಿಗಳ ಹಾವಳಿ ಕುರಿತು ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ಶೀಘ್ರದಲ್ಲಿಯೇ ನಗರದ ವಿವಿಧ ಮಾರುಕಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪರವಾನಗಿ ಪಡೆಯದ ಅನಧಿಕೃತ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
 ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ 

ಮಾರುಕಟ್ಟೆ ಹೊರಭಾಗದಲ್ಲಿ ಬೀದಿಬದಿ ವ್ಯಾಪಾರ ಹೆಚ್ಚಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಗ್ರಾಹಕರು ಮಾರುಕಟ್ಟೆ ಒಳಪ್ರವೇಶಿ ಸುತ್ತಲೇ ಇಲ್ಲ. ಇದರಿಂದಾಗಿ ಅಧಿಕೃತವಾಗಿ ಮಳಿಗೆ ಪಡೆದು ವ್ಯಾಪಾರ ಮಾಡುವ ನಮಗೆ ನಷ್ಟವಾಗುತ್ತಿದೆ. ಮೊದಲು ಅನಧಿಕೃತ ಬೀದಿಬದಿ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು.
 ರಾಜಣ್ಣ, ಕೆ.ಆರ್‌.ಮಾರುಕಟ್ಟೆ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next