Advertisement

ಬೀದಿ ದೀಪಗಳ ಅವ್ಯವಸ್ಥೆ: ಕತ್ತಲಲ್ಲಿದೆ ರಾಷ್ಟ್ರೀಯ ಹೆದ್ದಾರಿ 

09:59 AM Oct 28, 2018 | Team Udayavani |

ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ 66ರ ಮುಕ್ಕದಿಂದ ಬಪ್ಪನಾಡಿನ ಸೇತುವೆವರೆಗೆ ಇರುವ ಬಹುತೇಕ ಬೀದಿ ದೀಪಗಳು ಉರಿಯದೇ ಇರುವುದರಿಂದ ಹೆದ್ದಾರಿಯೇ ಕತ್ತಲಲ್ಲಿ ಎಂಬಂತಾಗಿದೆ. ಮುಕ್ಕದ ಮುಖ್ಯ ಜಂಕ್ಷನ್‌ನಿಂದ ಪಾವಂಜೆ ಸೇತುವೆ, ಹಳೆಯಂಗಡಿ ಜಂಕ್ಷನ್‌, ಕೋಲ್ನಾಡು, ಕಾರ್ನಾಡು ಬೈಪಾಸ್‌, ಮೂಲ್ಕಿ ಮುಖ್ಯ ಪೇಟೆ, ಬಪ್ಪನಾಡು ಜಂಕ್ಷನ್‌, ಬಪ್ಪನಾಡು ಸೇತುವೆಯಲ್ಲಿನ ಹೆದ್ದಾರಿಯಲ್ಲಿ ದಾರೀ ದೀಪಗಳನ್ನು ಅಳವಡಿಸಲಾಗಿದೆ ಈ ಪ್ರದೇಶದಲ್ಲಿ ಒಟ್ಟು 110 ಬೀದಿ ದೀಪಗಳಿದ್ದು, ಅದರಲ್ಲಿ 32 ದೀಪಗಳು ಉರಿಯುತ್ತಿಲ್ಲ.

Advertisement

ಹಗಲಲ್ಲಿ ಬೆಳಕು, ರಾತ್ರಿ ಕತ್ತಲೆ
ಕಾರ್ನಾಡು ಬೈಪಾಸ್‌ನಲ್ಲಿರುವ ಬೀದಿ ದೀಪಗಳು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಬೆಳಗುತ್ತದೆ. ರಾತ್ರಿ ವೇಳೆ ಉರಿಯುವುದಿಲ್ಲ. ಇಲ್ಲಿನ ಬೀದಿ ದೀಪದ ಟೈಮರ್‌ ಕೆಟ್ಟಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕ್ರಿಯೆ ಕಳೆದ ಒಂದು ತಿಂಗಳಿನಿಂದ ಇದ್ದರೂ ನಿರ್ವಹಣೆ ನಡೆಸುವ ಸಂಸ್ಥೆಯವರು ಮಾತ್ರ ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ.

ಸಂಚಾರದಲ್ಲಿ ಎಚ್ಚರ ತಪ್ಪದಿರಿ ಮೂಲ್ಕಿ ಜಿಲ್ಲೆಯ ಪ್ರವೇ ಶಕ್ಕೆ ಹೆಬ್ಟಾಗಿಲು. ಅದರಲ್ಲೂ ಮೂಲ್ಕಿ ಸೇತುವೆಯಿಂದ ಮುಕ್ಕವರೆಗೆ ಇರುವ ರಸ್ತೆಯಲ್ಲಿ ಮುಂಬಯಿ, ಬೆಂಗಳೂರಿಗೆ ತೆರಳುವ ಅನೇಕ ಬಸ್‌ಗಳು, ಸರಕು ತುಂಬಿದ ಲಾರಿ, ಕಂಟೈನರ್‌ಗಳು ಹೆಚ್ಚಾಗಿ ರಾತ್ರಿ ವೇಳೆ ಸಂಚರಿಸುವುದರಿಂದ ದ್ವಿಚಕ್ರ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಖಂಡಿತ. ವೇಗದಲ್ಲಿ ಸಂಚರಿಸುವ ಘನವಾಹನಗಳ ಪ್ರಕಾಶಮಾನವಾದ ಹೆಡ್‌ಲೈಟ್‌ಗಳು ದ್ವಿಚಕ್ರ ವಾಹನಗಳ ಹೆಡ್‌ಲೈಟ್‌ಗಳಿಗೆ ಸವಾಲು ಒಡ್ಡುತ್ತಿದೆ. ಬೀದಿ ದೀಪಗಳಿದ್ದಲ್ಲಿ ಅಲ್ಲಿ ಒಂದಿಷ್ಟು ಬೆಳಕಿನ ಸಹಕಾರ ಪ್ರಖರ ಲೈಟ್‌ ಗೆ ತಡೆಯೊಡ್ಡುತ್ತದೆ. ಬೀದಿ ದೀಪಗಳ ನಿರ್ವಹಣೆಯ ಜವಾಬ್ದಾರಿಯನ್ನು ನವಯುಗ್‌ ಸಂಸ್ಥೆ ಹೊತ್ತು ಕೊಂಡಿದ್ದರೂ, ಈ ಪ್ರದೇಶದಲ್ಲಿ ಹಳೆಯಂಗಡಿ, ಪಡುಪಣಂಬೂರು ಗ್ರಾಮ ಪಂಚಾಯತ್‌ ಹಾಗೂ ಮೂಲ್ಕಿ ನಗರ ಪಂಚಾಯತ್‌ಗಳ ಸುಪರ್ದಿಯಲ್ಲಿರುವ ಹೆದ್ದಾರಿಯ ಬೀದಿ ದೀಪಗಳು ಕೆಟ್ಟಲ್ಲಿ ಒಂದೆರಡು ದಿನಗಳಲ್ಲಿ ದುರಸ್ತಿಯಾಗುತ್ತಿವೆ. ಆದರೆ ಹೆದ್ದಾರಿ ನಿರ್ವಹಣೆಯನ್ನು ಹೊತ್ತಿರುವ ಸಂಸ್ಥೆ ಮಾತ್ರ ತಿಂಗಳು ಎರಡು ಕಳೆದರೂ ದುರಸ್ತಿಗೆ ಮುಂದಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಚತುಷ್ಪಥ ಕಾಮಗಾರಿ ಮುಗಿದಿಲ್ಲ
ಹೆದ್ದಾರಿ ನಿರ್ವಹಣೆ ಮಾಡುವ ನವಯುಗ್‌ ಸಂಸ್ಥೆಯು ಚತುಷ್ಪಥ ಕಾಮಗಾರಿಯಲ್ಲಿ ಪ್ರಮುಖ ಪ್ರದೇಶಗಳನ್ನು ಸಂಪೂರ್ಣಗೊಳಿಸದೇ ಈಗಲೂ ಅಲ್ಲಲ್ಲಿ ಕಾಮಗಾರಿ ನಡೆಸುತ್ತಲೇ ಇರುವುದು ಸಮಸ್ಯೆಗೂ ಕಾರಣವಾಗಿದೆ. ಹಳೆಯಂಗಡಿ ಜಂಕ್ಷನ್‌ನಲ್ಲಿ ಸರ್ವಿಸ್‌ ರಸ್ತೆ ಇನ್ನೂ ನಿರ್ಮಿಸಿಲ್ಲ. ಮೂಲ್ಕಿ ಮುಖ್ಯ ಪ್ರದೇಶದಲ್ಲಿನ ಸರ್ವಿಸ್‌ ರಸ್ತೆಯ ಕಾಮಗಾರಿಯೂ ಸಹ ಆಮೆ ಗತಿಯಲ್ಲಿ ನಡೆಯುತ್ತಲೇ ಇದೆ. 

ಪರಿಶೀಲನೆ ನಡೆಸಲಾಗುವುದು
ಮೂಲ್ಕಿಯಿಂದ ಮುಕ್ಕವರೆಗೆ ಇರುವ ಬೀದಿ ದೀಪಗಳು ಸರಿಯಿಲ್ಲ ಎಂಬ ಮಾಹಿತಿ ಈಗಾಗಲೇ ಗಮನಕ್ಕೆ ಬಂದಿದೆ. ಕೂಡಲೇ ದುರಸ್ತಿಪಡಿಸಲಾಗುವುದು. ಕೆಲವೊಂದು ಕಡೆಗಳಲ್ಲಿ ಟೈಮರ್‌ನ ಹೊಂದಾಣಿಕೆ ಸರಿ ಮಾಡಲಾಗುತ್ತಿದೆ. ಈಗ ರಾತ್ರಿ ಬೇಗ ಕತ್ತಲೆ ಆವರಿಸುವುದರಿಂದ ಟೈಮರ್‌ ಸಮಯವನ್ನು ಪರಿವರ್ತಿಸಲಾಗುತ್ತಿದೆ.
– ಶಂಕರ್‌,
ಪ್ರೋಜೆಕ್ಟ್ ಮ್ಯಾನೇಜರ್‌,ನವಯುಗ್‌ ಸಂಸ್ಥೆ

Advertisement

ಮನವಿ ನೀಡಿದ್ದರೂ ಸಹ ನಿರ್ಲಕ್ಷ್ಯ 
ಮೂಲ್ಕಿ ನಾಗರಿಕ ಸಮಿತಿಯ ಮೂಲಕ ಬೀದಿ ದೀಪ ಹಾಗೂ ರಸ್ತೆ ಕಾಮಗಾರಿ ಬಗ್ಗೆ ಅನೇಕ ಬಾರಿ ಲಿಖಿತವಾಗಿ ಮನವಿ ನೀಡಿದ್ದರೂ ನವಯುಗ್‌ ಸಂಸ್ಥೆಯು ನಿರ್ಲಕ್ಷ ವಹಿಸಿದೆ. ರಾತ್ರಿ ವೇಳೆ ನಡೆ ಯುವ ಅಪಘಾತದ ಬಗ್ಗೆಯೂ ಗಮನಕ್ಕೂ ತಂದಿದ್ದೇವೆ. ಆದರೂ ಕ್ರಮಕೈಗೊಂಡಿಲ್ಲ.
-ಮನ್ಸೂರ್‌ ಎಚ್‌.
ನಾಗರಿಕ ಸಮಿತಿ, ಮೂಲ್ಕಿ

‡ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next