Advertisement

ಅಂತೂ ಇಂತೂ ಜೋಡಿ ರಸ್ತೆಗೆ ಬೀದಿ ದೀಪ ಬಂತು!

03:19 PM Oct 19, 2020 | Suhan S |

ಚಾಮರಾಜನಗರ: ಅಂತೂ ಇಂತೂ ದಸರಾ ನೆಪದಲ್ಲಿ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಬೀದಿ ದೀಪಗಳು ಬೆಳಗಿದವು. ನಗರಸಭೆ ವತಿಯಿಂದ ಅಳವಡಿಸಿರುವ ವಿದ್ಯುತ್‌ ದೀಪಗಳ‌ ವ್ಯವಸ್ಥೆಗೆ ಶನಿವಾರ ರಾತ್ರಿ ಚಾಲನೆ ನೀಡಲಾಯಿತು.

Advertisement

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನಗರದ ಡಿವೈಎಸ್ಪಿ ಕಚೇರಿ ಬಳಿ ನಡೆದ ಸರಳ ‌ ಕಾರ್ಯಕ್ರಮದಲ್ಲಿ ಸ್ವಿಚ್‌ ಒತ್ತುವ ಮೂಲಕ ವಿದ್ಯುತ್‌ ದೀಪ ಬೆಳಕಿನ ವ್ಯವಸ್ಥೆಯನ್ನು ಉದ್ಘಾಟಿಸಿದರು.

ಶಾಸಕರಾದ ಎನ್‌. ಮಹೇಶ್‌, ಸಿ.ಎಸ್‌. ನಿರಂಜನಕುಮಾರ್‌, ನಗರಾಭಿವೃದ್ಧಿ ಪ್ರಾಧಿಕಾರದ ‌ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ  ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆರೆಹಳ್ಳಿ ನವೀನ್‌, ನಗರ ‌ ಸಭೆ ಆಯುಕ್ತ ರಾಜಣ್ಣ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕರಾದ ಕೆ.ಸುರೇಶ್‌ ಇತರರು ಹಾಜರಿದ್ದರು.

ಬಿ. ರಾಚಯ್ಯ ಜೋಡಿ ರಸ್ತೆ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 35 ಕೋಟಿ ರೂ. ವೆಚ್ಚದಲ್ಲಿ ಎರಡು ವರ್ಷಗಳ ಹಿಂದೆಯೇ ಪೂರ್ಣಗೊಳಿಸಿದೆ. ಆದರೆ ಸುಮಾರು 3 ಕಿ.ಮೀ. ದೂರದ ಈ ರಸ್ತೆಯಲ್ಲಿ ವಿದ್ಯುತ್‌ ಕಂಬಗಳನ್ನು ಮಾತ್ರ ಅಳವಡಿಸಿದ್ದು ವಿದ್ಯುತ್‌ ದೀಪ ಅಳವಡಿಸಿರಲಿಲ್ಲ. ಹೀಗಾಗಿ ರಾತ್ರಿ ವೇಳೆ ಕತ್ತಲೆಯಲ್ಲೇ ಜನರು ಈ ರಸ್ತೆಯಲ್ಲಿ ಸಂಚರಿಸಬೇಕಾಗಿತ್ತು. ಈ ಬಗ್ಗೆ ಅನೇಕ ದೂರುಗಳು ಬಂದರೂ ಸರ್ಕಾರ ಗಮನ‌ ಹರಿಸಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ‌ ಸುರೇಶ್‌ಕುಮಾರ್‌ ಅವರ ಭೇಟಿ ಸಂದರ್ಭದಲ್ಲಿ ಈ ಬಗ್ಗೆ ನಾಗರಿಕರು ಗಮನ ಸೆಳೆದಿದ್ದರು. ಅವರು ಕ್ರಮ ಕೈಗೊಂಡ ಬಳಿಕ ದೀಪ ಅಳವಡಿಸುವ ‌ ಕಾಮಗಾರಿ ನಡೆಯಿತು.

ನಗರಸಭೆಯಿಂದ 10 ಲಕ್ಷ ರೂ. ವೆಚ್ಚದಲ್ಲಿ ಕೇಬಲ್‌ ಹಾಕಿ ವಿದ್ಯುತ್‌ ದೀಪ ಅಳವಡಿಸಲಾಯಿತು. ದಸರಾ ಸಂದರ್ಭದಲ್ಲಿ ಜೋಡಿ ರಸ್ತೆಗೆ ಬೆಳಕಿನ ಭಾಗ್ಯ ದೊರೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next