Advertisement
ರಸ್ತೆಯಲ್ಲಿ ನಿಂತು ಜಗಳವಾಡ್ತಿರೋ ನಾಲ್ಕು ಜನ. ಇಬ್ಬರೊಂದು ಕಡೆ ಮತ್ತಿಬ್ಬರಿನ್ನೊಂದು ಕಡೆ. ಸುತ್ತಲೂ ನಿಂತು ನೋಡುವ ಅಂದರೆ, ಅಕ್ಕ ಪಕ್ಕದ ಮನೆ ಬಾಗಿಲಿನಲ್ಲಿ ಹೆಂಗಸರು, ಟೀ ಅಂಗಡಿಯಲ್ಲಿ ಸಿಗರೇಟು ಸೇದುವ ಹುಡುಗರು, ಜಗಳ ಇನ್ನೂ ಜೋರಾದ ಮೇಲೆ ಬಿಡಿಸಿದರಾಯ್ತು ಅಂತ ಕಾಯ್ತಿರೋ ಕೆಲ ಹಿರಿಯರು, ಸರಿಯಾಗಿ ಕಾಣಿ¤ಲ್ಲವೆಂದು ಮನೆಯ ತಾರಸಿ ಹತ್ತಿ ನೋಡುವ ಕೆಲವರು… ಹೀಗೆ ಬೀದಿ ಜಗಳದ ವೀಕ್ಷಕರಲ್ಲೂ ವೈವಿಧ್ಯತೆ ಉಂಟು.
Related Articles
Advertisement
ಬರೀ ಮಾತಿನ ಜಗಳದ ಜೊತೆಗೆ ಸಣ್ಣ ಮಟ್ಟಿನ ಬಡಿದಾಟಗಳಿದ್ದರೆ ನೋಡುಗರಿಗೆ ಹಬ್ಬವೋ ಹಬ್ಬ. ಹೊಸ ಸಿನಿಮಾವನ್ನು ನೋಡುತ್ತಿರುವಂತೆ ಮಗ್ನರಾಗಿ ಹೋಗಿರ್ತಾರೆ, ನಿಂತಲ್ಲಿಯೇ ಹೊಡಿ- ಬಡಿ ಎಂದು ಹೇಳಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಜಗಳಗಳು ಸಣ್ಣದಾಗಿಯೇ ಮುಗಿದು ಹೋದರೆ, ಸುತ್ತಲೂ ನಿಂತಿರುವ ವೀಕ್ಷಕರಿಗೆ ಸಚಿನ್ ತೆಂಡೂಲ್ಕರ್ 99 ರನ್‌ಗೆ ಔಟಾದಾಗ ಆಗುವಷ್ಟೇ ನಿರಾಸೆಯಾಗುತ್ತದೆ.
ಥೂ ಒಂದು ಹೊಡೆದಾಟವಿಲ್ಲದ ಈ ಜಗಳವೂ ಒಂದು ಜಗಳಾನ ಅಂತ ಅಂದುಕೊಳ್ಳುವವರೂ ಇದ್ದಾರೆ. ಬೀದಿ ಜಗಳಗಳಿಂದ ಕೊನೆಗೆ ಯಾರಿಗೂ ಏನೂ ಸಿಗುವುದಿಲ್ಲ, ಮತ್ತದೇ ಸಮಸ್ಯೆ ಕಾಣಿಸಿಕೊಂಡಾಗ ಮತ್ತೆ ಜಗಳ ಹುಟ್ಟಿಕೊಳ್ಳುತ್ತದಷ್ಟೇ. ಬೀದಿ ಜಗಳಗಳ ಪರಿಣಾಮ ಎಷ್ಟೆಂದರೆ, ಜಗಳ ನೋಡಿ ತಿರುಗಿ ಹೋಗುವಾಗ ವಿಷಯವೇ ತಿಳಿಯದವರೂ ಅದರ ಬಗ್ಗೆ ಮಾತಾಡ್ತಾರೆ, ತಮಗೆ ತಿಳಿದವರಿಗೆ ಬೆಂಬಲಿಸ್ತಾರೆ. “ಛೇ, ಇವನು ಎರಡೇಟು ಹೊಡೆದಿದ್ರೆ, ಎಲ್ಲಾ ಸರಿ ಇರೋದು’ ಅಂತ ಒಬ್ಬ ಅಂದ್ರೆ ಪಕ್ಕದವನು,
“ಇಲ್ಲ ತಪ್ಪೆಲ್ಲ ಅವನದ್ದೇ. ಅವನಿಗೇ ನಾಲ್ಕೇಟು ಬೀಳಬೇಕಿತ್ತು’ ಅಂತಾನೆ. ಅವರಲ್ಲಿಯೂ ವಾದ ಶುರುವಾಗಿ ವಿಷಯವೇ ತಿಳಿಯದೆ, ವ್ಯಕ್ತಿಗಳೂ ತಿಳಿದರದೇ ಯಾರದೋ ವಿಷಯವಾಗಿ ಇವರಲ್ಲಿ ಜಗಳ ಶುರುವಾಗಿರುತ್ತೆ, ಅದೊಂದು ರೀತಿ ಬೆಂಕಿ ಕಿಡಿಯಂತೆ. ಜಗಳಗಳ ವೀಕ್ಷಣೆಯಿಂದ ಲಾಭವಿಲ್ಲವಾದರೂ ನಷ್ಟವೂ ಏನಿಲ್ಲ ನಿಮ್ಮ ಅಮೂಲ್ಯ ಸಮಯದ ಹೊರತು. ಕೆಲವು ಸಲ ಇಂಥ ಜಗಳಗಳೂ ನಮಗೆ ಜೀವನ ಪಾಠ ಕಲಿಸುತ್ತವೆ. ಆದರೆ, ಹೆಚ್ಚಿನ ಬಾರಿ ಬೀದಿ ಜಗಳಗಳು ನಮಗೆ ಕೇವಲ ಮನರಂಜನೆಯಷ್ಟೇ.
ಗಾಂಧೀಜಿಯ ಕೋತಿಗಳಂತೆ ಸುಮ್ಮನಿರಿ, ಇಲ್ಲಾಂದ್ರೆ…: ಬೀದಿ ಜಗಳಗಳನ್ನು ಪರಿಹರಿಸಲು ಸಾಧ್ಯವಾದರೆ, ಅಂತಹ ಸ್ಥಾನದಲ್ಲಿ ನೀವಿದ್ದರೆ ಅದನ್ನು ಪರಿಹರಿಸಬೇಕು ಇಲ್ಲವೇ ಗಾಂಧೀಜಿಯ ಮೂರು ಕೋತಿಗಳಂತೆ ಸುಮ್ಮನಿರಬೇಕು. ಬೀದಿ ಜಗಳಗಳಿಂದ ವೀಕ್ಷಕರಿಗೆ ಏನೂ ತೊಂದರೆ ಇಲ್ಲವಾದರೂ ಮಕ್ಕಳನ್ನು ಇಂಥವುಗಳಿಂದ ದೂರವಿಡುವುದು ಒಳ್ಳೆಯದು. ಅಲ್ಲಿ ಬಳಸುವ ಭಾಷೆ ಮತ್ತು ಭಾವನೆಗಳ ಅತಿರೇಕತೆ ಅವರ ಮನಸಿನ ಮೇಲೆ ಪ್ರಭಾವ ಬೀರಬಹುದು.
* ನೂತನರಾಗ