Advertisement

ದಕ್ಷಿಣ ಕನ್ನಡ: 15 ತಿಂಗಳಲ್ಲಿ 9,573 ನಾಯಿ ಕಡಿತ ಪ್ರಕರಣ

09:51 PM Mar 31, 2021 | Team Udayavani |

ಮಹಾನಗರ: ದ.ಕ. ಜಿಲ್ಲೆಯಲ್ಲಿ 15 ತಿಂಗಳಲ್ಲಿ 9,573 ನಾಯಿ ಕಡಿತ ಪ್ರಕರಣಗಳು ಆಗಿವೆ. ಆದರೆ ಈ ಪೈಕಿ ಯಾವುದೇ ಹುಚ್ಚು ನಾಯಿ ಕಡಿತದ ಪ್ರಕರಣ ವರದಿಯಾಗಿಲ್ಲ ಎನ್ನುವುದು ಸಮಾಧಾನದ ಸಂಗತಿ.

Advertisement

ಪಶು ಸಂಗೋಪನ ಇಲಾಖೆಯ ಅಧಿಕಾರಿಗಳು ಸಾಕು ನಾಯಿಗಳಿಗೆ ವ್ಯಾಪಕವಾಗಿ ರೇಬಿಸ್‌ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ಜಿಲ್ಲಾದ್ಯಂತ ಹಮ್ಮಿಕೊಂಡಿದೆ. ಆದರೆ ಹಾಗೆಂದು ಜಿಲ್ಲೆಯಲ್ಲಿ ಹುಚ್ಚು ನಾಯಿಗಳೇ ಇಲ್ಲ ಅಂದಲ್ಲ; ಕಡಬದಲ್ಲಿ ಹುಚ್ಚು ನಾಯಿ ರೋಗದಿಂದ ಈ ವರ್ಷದಲ್ಲಿ ಎರಡು ದನಗಳು ಸಾವನ್ನಪ್ಪಿವೆ. ಈ ದನಗಳಿಗೆ ಕಡಿದ ಹುಚ್ಚು ನಾಯಿಗಳು ಯಾವುದೆಂದು ಪತ್ತೆಯಾಗಿಲ್ಲ.

ರೇಬಿಸ್‌ ನಿರೋಧಕ ಲಸಿಕೆ ಅಭಿಯಾನದಡಿ ಈ ವರ್ಷ ಜಿಲ್ಲೆಯಲ್ಲಿ 15,000 ಸಾಕು ನಾಯಿಗಳಿಗೆ ರೇಬಿಸ್‌ (ನಾಯಿ ಹುಚ್ಚು) ನಿರೋಧಕ ಲಸಿಕೆ ಹಾಕಲಾಗಿದೆ ಎಂದು ಪಶು ಸಂಗೋಪನ ಇಲಾಖೆ ಜಿಲ್ಲಾ ಕಚೇರಿಯ ಅಂಕಿ-ಅಂಶ ಹೇಳುತ್ತಿದೆ. 2030ರ ವೇಳೆಗೆ ರೇಬಿಸ್‌ ಮುಕ್ತ ದೇಶವನ್ನಾಗಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಅದರನ್ವಯ ಪಶು ಸಂಗೋಪನ ಇಲಾಖೆಯ ದ.ಕ. ಜಿಲ್ಲಾ ಉಪ ನಿರ್ದೇಶಕರು ಈ ಕಾರ್ಯಕ್ರಮವನ್ನು ಆದ್ಯತೆಯಾಗಿ ಪರಿಗಣಿಸಿ ಜಿ.ಪಂ. ಅನುದಾನದಿಂದ ಪ್ರತಿ ತಾಲೂಕಿನಲ್ಲಿ 10 ಶಿಬಿರ ನಡೆಸುವ ಗುರಿ ಇರಿಸಿ ಕಾರ್ಯೋನ್ಮುಖರಾಗಿದ್ದು, ತಾಲೂಕಿಗೆ 3,000ದಂತೆ 5 ತಾಲೂಕುಗಳಲ್ಲಿ ಒಟ್ಟು 15,000 ನಾಯಿಗಳಿಗೆ ಲಸಿಕೆ ಹಾಕಲಾಗಿದೆ. 5 ತಾಲೂಕುಗಳಲ್ಲಿ ಒಟ್ಟು 50 ಕಡೆ 2-3 ತಂಡಗಳನ್ನು ರಚಿಸಿ ಆಯಾ ಗ್ರಾಮಗಳ ಎಲ್ಲ ಶ್ವಾನಗಳಿಗೆ ರೇಬಿಸ್‌ ನಿರೋಧಕ ಲಸಿಕೆ ಹಾಕುವ ಕಾರ್ಯ ನಡೆದಿದೆ.

2021ರಲ್ಲಿ ನಾಯಿ ಕಡಿತ 1,924 ಪ್ರಕರಣ  :

ಜಿಲ್ಲೆಯಲ್ಲಿ 2020, 2021ರ ಮಾರ್ಚ್‌ ವರೆಗಿನ 15 ತಿಂಗಳುಗಳಲ್ಲಿ 9,573 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. 2020ರಲ್ಲಿ 7,649 ಪ್ರಕರಣ, 2021ರಲ್ಲಿ ಇದುವರೆಗೆ (ಜನವರಿಯಿಂದ ಮಾರ್ಚ್‌ 24ರ ತನಕ) 1,924 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಸಾಕು ನಾಯಿ ಕಡಿತದ ಪ್ರಕರಣಗಳೇ ಅಧಿಕ. ಈ ಪೈಕಿ ಒಂದೇ ಒಂದು ಹುಚ್ಚು ನಾಯಿ ಕಡಿತದ ಪ್ರಕರಣ ಇದ್ದ ಬಗ್ಗೆ ವರದಿಯಾಗಿಲ್ಲ.

Advertisement

ಜಿಲ್ಲೆಯಲ್ಲಿ   2017ರಲ್ಲಿ  ಓರ್ವ, 2018ರಲ್ಲಿ ಓರ್ವ ವ್ಯಕ್ತಿ ರೇಬಿಸ್‌ಗೆ ಬಲಿಯಾ ಗಿದ್ದರು. ಆ ಬಳಿಕ ಇದುವರೆಗೆ ಎಲ್ಲಿಯೂ ಹುಚ್ಚು ನಾಯಿ ಕಡಿತದಿಂದ ಮನುಷ್ಯರು ಮೃತಪಟ್ಟ ಬಗ್ಗೆ ವರದಿಯಾಗಿಲ್ಲ. ಇನ್ನು ಕಡಬದ ಪ್ರಕರಣದಲ್ಲಿ ದನಗಳನ್ನು ಗುಡ್ಡ ಅಥವಾ ಕಾಡಿಗೆ ಮೇಯಲು ಬಿಟ್ಟ ಸಂದರ್ಭ ಹುಚ್ಚು ನಾಯಿ ಕಚ್ಚಿ ಈ ರೋಗ ಬಂದಿರುವ ಸಾಧ್ಯತೆ ಇದೆ. ಹಾಗಾಗಿ ಹುಚ್ಚು ನಾಯಿ ರೋಗ ಜಿಲ್ಲೆಯಲ್ಲಿ ಇದೆ ಎನ್ನುವುದು ಖಾತರಿ. ರೇಬಿಸ್‌ನಿಂದ ಸಾಕು ನಾಯಿಗಳು, ಬೀದಿ ನಾಯಿಗಳು ಸತ್ತಿರುವ ಸಾಧ್ಯತೆ ಇದ್ದರೂ ಈ ಬಗ್ಗೆ ಅಂಕಿ ಅಂಶಗಳು ಲಭ್ಯವಿಲ್ಲ.

ರೇಬಿಸ್‌ ನಿರೋಧಕ ಲಸಿಕೆ ಹಾಕುವ ಸಂಘಟಿತ ಪ್ರಯತ್ನ ಇದುವರೆಗೆ ನಡೆದಿರಲಿಲ್ಲ; ಈ ವರ್ಷ (2020-21) ಅದು ನಡೆದಿದೆ. ನಾಯಿ ಸಾಕುವವರ ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕಲಾಗಿದೆ. ಜಿ.ಪಂ.ನ ಅನುದಾನ ಪಡೆದು ಪ್ರತಿ ತಾಲೂಕಿನಲ್ಲಿ 10 ಕಡೆ ಶಿಬಿರಗಳನ್ನು ನಡೆಸಿ ಸಾಕು ನಾಯಿಗಳಿಗೆ ಲಸಿಕೆ ಹಾಕಲಾಗಿದೆ.  -ಡಾ| ಪ್ರಸನ್ನ ಕುಮಾರ್‌ ಟಿ.ಜಿ.,  ಉಪ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ದ.ಕ.

 

-ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next