ಮಲ್ಪೆ: ತೋನ್ಸೆ ಗ್ರಾ.ಪಂ. ವ್ಯಾಪ್ತಿಯ ಹೂಡೆ ಪರಿಸರದಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗುತ್ತಿದ್ದು ಜನರ ಮೇಲೆ ದಾಳಿ ಮಾಡಿದ ಕುರಿತು ವರದಿಯಾಗಿದೆ.
ಶನಿವಾರ ಬೆಳಗ್ಗೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನಾಯಿಗಳು ದಾಳಿಗೆ ಮುಂದಾಗಿದ್ದು ಬಾಲಕಿ ಕೈಯಲ್ಲಿದ್ದ ಕೊಡೆ ಬೀಸಿ ತನ್ನನ್ನು ರಕ್ಷಿಸಿಕೊಂಡಿದ್ದಾರೆ. ಹೂಡೆ ದಾರುಸ್ಸಾಲಂ ಶಾಲೆಯ ಬಳಿಯ ಆಕೆ ಮಣಿಪಾಲದ ಶಾಲೆಯೊಂದರಲ್ಲಿ 3ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ ಎನ್ನಲಾಗಿದೆ. ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದು ತತ್‌ಕ್ಷಣ ಬೀದಿ ನಾಯಿ ಹಾವಳಿಗೆ ಸೂಕ್ತ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.
ಸಾರ್ವಜನಿಕರ ಸಹಕಾರ ಅಗತ್ಯ
ಈ ಕುರಿತು ಪಂಚಾಯತ್ ಅಧಿಕಾರಿ ಅವರಲ್ಲಿ ಮಾತನಾಡಿದಾಗ ನಾಯಿಗಳನ್ನು ಹಿಡಿದು ಕೊಲ್ಲುವ ಅಧಿಕಾರ ಗ್ರಾ.ಪಂ .ಗೆ ಇಲ್ಲ. ಕಳೆದ ಮೂರು ವರ್ಷಗಳಿಂದ ವರ್ಷಕ್ಕೊಂದು ಬಾರಿ ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ರೇಬಿಸ್ ನಿರೋಧಕ ಲಸಿಕೆ ಹಾಕಿಸಿ, ಹಿಡಿದಲ್ಲಿಗೆ ವಾಪಸ್ ಬಿಡಬೇಕಾಗಿದೆ. ಗ್ರಾ.ಪಂ. ನಿಂದ ವರ್ಷಕ್ಕೆ ಒಂದು ಸಲ ಮಾತ್ರ ಈ ಕೆಲಸ ಮಾಡಿಸಬಹುದಾಗಿದೆ. ಅಲ್ಲದೇ ನಾಯಿಗಳನ್ನು ಹಿಡಿಯುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ನಾಯಿಯನ್ನು ಹಿಡಿಯುವಾಗ ಜಿಪಿಎಸ್ ಪೋಟೋ ತೆಗೆಯಬೇಕು. ಶಸ್ತ್ರ ಚಿಕಿತ್ಸೆ ನಡೆಸಿದ ಬಳಿಕ ಮತ್ತೆ ಹಿಡಿದ ಸ್ಥಳದಲ್ಲಿಯೇ ತಂದು ಬಿಡಬೇಕು ಆ ಸಮಯದಲ್ಲೂ ಮತ್ತೆ ಜಿಪಿಎಸ್ ಮಾಡಬೇಕಾಗುತ್ತದೆ. ಬೀದಿ ನಾಯಿಗಳಿಗೆ ಊಟ ಹಾಕುವುದರಿಂದಲೂ ನಾಯಿಗಳು ರಸ್ತೆಯಲ್ಲಿ ಓಡಾಡುವ ಜನರ ಮೇಲೆ ದಾಳಿ ನಡೆಸುತ್ತವೆ. ಇದಕ್ಕೆಲ್ಲ ಕಡಿವಾಣ ಹಾಕಲು ಸಾರ್ವಜನಿಕರ ಸಹಕಾರವೂ ಅಗತ್ಯ ಎಂದವರು ಹೇಳುತ್ತಾರೆ.
ಜನಪ್ರತಿನಿಧಿಗಳು, ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯವಾಗಿ ಶಾಲಾ ಮಕ್ಕಳನ್ನು ನಾಯಿ ದಾಳಿಯಿಂದ ರಕ್ಷಿಸಬೇಕಾಗಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.