Advertisement

ಬೀದಿ ನಾಯಿಗಳ ದಾಳಿ: ಚಿಂತಾಜನಕ ಸ್ಥಿತಿಯಲ್ಲಿ ಬಾಲಕ

12:10 PM Aug 31, 2018 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಹತ್ತಾರು ನಾಯಿಗಳು ಏಕಾಏಕಿ ದಾಳಿ ಮಾಡಿದ ಪರಿಣಾಮ ಪ್ರವೀಣ್‌ ಎಂಬ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ವಿಭೂತಿಪುರದಲ್ಲಿ ನಡೆದಿದೆ. 

Advertisement

ವಿಭೂತಿಪುರದ ನಿವಾಸಿಗಳಾದ ಮುರಗಮ್ಮ ಹಾಗೂ ಮನೋಜ್‌ ದಂಪತಿಯ ನಾಲ್ಕು ವರ್ಷದ ಮಗ ಪ್ರವೀಣ್‌ ಬುಧವಾರ ಸಂಜೆ ಆಟವಾಡುವ ವೇಳೆ 10ಕ್ಕೂ ಹೆಚ್ಚು ನಾಯಿಗಳ ದಂಡು ಏಕಾಏಕಿ ಪ್ರವೀಣ್‌ ಮೇಲೆ ದಾಳಿ ನಡೆಸಿವೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬಾಲಕನ ನೆರವಿಗೆ ಬಂದಿದ್ದು, ನಾಯಿಗಳಿಂದ ಆತನನ್ನು ರಕ್ಷಿಸಿ, ಕೂಡಲೇ ಸಮೀಪದ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೀದಿ ನಾಯಿಗಳ ದಾಳಿಗೆ ಒಳಗಾಗಿರುವ ಪ್ರವೀಣ್‌ ಸ್ಥಿತಿ ಚಿಂತಾಜನಕವಾಗಿದೆ. ತುರ್ತು ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದ್ದು, ಮುಂದಿನ 24 ಗಂಟೆಗಳು ಬಾಲಕನ ಸ್ಥಿತಿಯ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿ¨ªಾರೆ. ಇದರಿಂದ ಬಾಲಕನ ಪೋಷಕರು ಅಘಾತಗೊಂಡಿದ್ದಾರೆ.

ಘಟನೆ ಸಂಬಂಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ ಬಗ್ಗೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದಾಗಿ ಬಾಲಕ ಜೀವನ, ಮರಣದ ನಡುವೆ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.

ವಿಭೂತಿಪುರದಲ್ಲಿ ಹೆಚ್ಚಿನ ಮಾಂಸದ ಅಂಗಡಿಗಳಿರುವುದೇ ನಾಯಿಗಳ ಹೆಚ್ಚಳಕ್ಕೆ ಕಾರಣವಾಗಿದ್ದು, ಅಂಗಡಿಗಳಿಂದ ಹೊರ ಚೆಲ್ಲುವ ಮಾಂಸದ ತ್ಯಾಜ್ಯ ತಿನ್ನುವುದು ರೂಢಿ ಮಾಡಿಕೊಂಡಿರುವ ನಾಯಿಗಳು ಜನರ ಮೇಲೂ ದಾಳಿ ನಡೆಸುಲು ಪ್ರಾರಂಭಿಸಿವೆ. ಹೀಗಾಗಿ ಎಲ್ಲೆಂದರಲ್ಲಿ ಮಾಂಸ ತ್ಯಾಜ್ಯ ವಿಲೇವಾರಿ ಮಾಡದಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

Advertisement

ಮಾನವೀಯತೆ ಮೆರೆದ ಇನ್ಸ್‌ಪೆಕ್ಟರ್‌: ಮಗನನ್ನು ಉಳಿಸಿಕೊಳ್ಳಲು ಹತ್ತಾರು ಜನ ಬಳಿ ಆರ್ಥಿಕ ನೆರವು ಕೋರುತ್ತಿದ್ದ ಪೋಷಕರನ್ನು ಕಂಡು ಎಚ್‌ಎಎಲ್‌ ಠಾಣೆ ಇನ್ಸ್‌ಪೆಕ್ಟರ್‌ ಮೆಹಬೂಬ್‌ ಪಾಷ ಅವರು ತಮ್ಮ ಬಳಿಯಿಂದ ಐದು ಸಾವಿರ ರೂ.ಗಳನ್ನು ಪೋಷಕರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. 

ವೈದ್ಯಕೀಯ ವೆಚ್ಚ ಪಾಲಿಕೆಯಿಂದ: ಬೀದಿ ನಾಯಿಗಳ ದಾಳಿಯಿಂದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ವಿಷಯ ತಿಳಿದ ಹಿನ್ನೆಲೆಯಲ್ಲಿ ಗುರುವಾರ ಆಸ್ಪತ್ರೆಗೆ ಭೇಟಿ ನೀಡಿದ ಮೇಯರ್‌ ಆರ್‌.ಸಂಪತ್‌ರಾಜ್‌ ಬಾಲಕನ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಬಾಲಕನ ಪೋಷಕರಿಗೆ ಸಾಂತ್ವನ ಹೇಳಿದ ಮೇಯರ್‌ ಬಾಲಕ ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚವನ್ನು ಪಾಲಿಕೆಯಿಂದ ಭರಿಸುವುದಾಗಿ ತಿಳಿಸಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇದರೊಂದಿಗೆ ವಿಭೂತಿಪುರದಲ್ಲಿನ ಬೀದಿನಾಯಿಗಳ ಹಾವಳಿ ತಡೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next