Advertisement
“ಸ್ವಚ್ಛಭಾರತ್ ಮಿಷನ್’ನ ಯೋಜನೆ ಯಡಿ ಗ್ರಾ.ಪಂ.ಗಳ ಮೂಲಕ ಸಾರ್ವಜನಿಕ ಶೌಚಾಲಯ ನಿರ್ಮಾಣ ನಡೆಯುತ್ತಿದ್ದು, ಶೌಚಾಲಯ ಘಟಕ ನಿರ್ಮಾಣದ ಒಟ್ಟು ವೆಚ್ಚದ ಶೇ.70ನ್ನು ಸ್ವಚ್ಛ ಭಾರತ್ ಮಿಷನ್ ಭರಿಸುತ್ತಿದೆ. ಗ್ರಾ.ಪಂ.ಗಳು ಅಥವಾ ಸಾರ್ವ ಜನಿಕರಿಂದ ಬೇಡಿಕೆ ಬಂದರೆ ಅದನ್ನು ಕೂಡ ಪರಿಗಣಿಸಲಾಗುತ್ತಿದೆ. ಇದರ ಜತೆಗೆ ನಿರ್ವಹಣೆಯ ಸಮಸ್ಯೆಯೂ ಆಗಬಾರದು ಎಂಬ ಉದ್ದೇಶದಿಂದ ಇದೀಗ ಶೌಚಾಲಯ ನಿರ್ವಹಣೆಯ ಹೊಣೆಯನ್ನು ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಮಾಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಘನತ್ಯಾಜ್ಯ ಘಟಕಗಳ ನಿರ್ವಹಣೆ ಹೊಣೆಯನ್ನು ಸ್ತ್ರೀ ಶಕ್ತಿ ಗುಂಪುಗಳಿಗೆ ವಹಿಸಲು ಜಿ.ಪಂ. ತೀರ್ಮಾನಿಸಿದೆ.
Related Articles
Advertisement
ಅನೇಕ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ರಸ್ತೆ ಬದಿ, ಬಸ್ ನಿಲ್ದಾಣ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯದ ಬೇಡಿಕೆ ಇದೆ. ಆದರೆ ಕೆಲವು ಗ್ರಾ.ಪಂ.ಗಳು ತಮ್ಮ 15ನೇ ಹಣಕಾಸಿನಲ್ಲಿ ಶೌಚಾಲಯ ವೆಚ್ಚದ ಶೇ. 30ರಷ್ಟನ್ನು ಭರಿಸಲು ಆಸಕ್ತಿ ತೋರಿಸುತ್ತಿಲ್ಲ. ಇದರ ಜತೆಗೆ ಪ್ರಸ್ತುತ ಯಾವುದೇ ಗ್ರಾ.ಪಂ.ಗೆ ಸಾರ್ವಜನಿಕ ಶೌಚಾಲಯವನ್ನು ಮಂಜೂರು ಮಾಡಬೇಕಾದರೆ ಆ ಶೌಚಾಲಯಕ್ಕೆ ಬೇಕಾದ ಕನಿಷ್ಠ 2 ಸೆಂಟ್ಸ್ ಜಾಗ ಪಂಚಾಯತ್‌ನ ಸುಪರ್ದಿಯಲ್ಲಿರುವುದು ಕಡ್ಡಾಯ. ಈ ನಿಯಮದಿಂದಾಗಿಯೂ ಕೆಲವು ಪಂ.ಗಳು ನಿರ್ಲಕ್ಷ್ಯ ವಹಿಸುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ಅಲ್ಲದೆ ಜಿಲ್ಲೆಯಲ್ಲಿ ಮಳೆ ಹೆಚ್ಚು ಬೀಳುವುದರಿಂದ ಆರ್‌ಸಿಸಿ ಛಾವಣಿಯ ಕಟ್ಟಡವನ್ನೊಳಗೊಂಡ ಶೌಚಾಲಯ ನಿರ್ಮಿಸುವುದು ಅನಿವಾರ್ಯ. ಇದಕ್ಕೆ ಹೆಚ್ಚುವರಿ ವೆಚ್ಚ ತಗಲುತ್ತದೆ. ಇದನ್ನು ಗ್ರಾ.ಪಂ. ಭರಿಸಬೇಕಾಗಿದೆ. ಈ ಕಾರಣದಿಂದಲೂ ಕೆಲವು ಪಂ.ಗಳು ಹೆಚ್ಚಿನ ಆಸಕ್ತಿ ತೋರಿಸಿಲ್ಲ ಎನ್ನಲಾಗಿದ್ದು, ಈ ತೊಡಕುಗಳ ನಡುವೆಯೂ ಜಿಲ್ಲೆಯಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಸಮರ್ಪಕಗೊಳಿಸಲು ಅಭಿಯಾನ ರೂಪದಲ್ಲಿ ಗ್ರಾ.ಪಂ.ಗಳನ್ನು ಪ್ರೇರೇಪಿಸಲಾಗುತ್ತಿದೆ.
ನೇರವಾಗಿ ಬೇಡಿಕೆ :
ಸಲ್ಲಿಸಲು ಅವಕಾಶ : ಈಗಾಗಲೇ ಗ್ರಾಮಾಂತರದಲ್ಲಿ ರಸ್ತೆ ಬದಿಗಳು ಸಹಿತ ಅಗತ್ಯ ಇರುವಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಗ್ರಾ.ಪಂ.ಗಳಿಂದ ನೇರವಾಗಿ ಬೇಡಿಕೆ ಬರದೇ ಇದ್ದರೂ ಸ್ವತ್ಛ ಭಾರತ್ ಮಿಷನ್‌ನಿಂದ ಪರಿವೀಕ್ಷಿಸಿ ಅಗತ್ಯವಿದ್ದರೆ ಶೌಚಾಲಯ ನಿರ್ಮಾಣಕ್ಕೆ ಪಂಚಾಯತ್ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಸಾರ್ವಜನಿಕರು ಕೂಡ ಸ್ವಚ್ಛ ಭಾರತ್ ಮಿಷನ್‌ಗೆ (9480985555) ಕರೆ ಮಾಡಿ ಯಾವ ಪ್ರದೇಶದಲ್ಲಿ ಶೌಚಾಲಯ ಅಗತ್ಯವಿದೆ ಎಂಬ ಬಗ್ಗೆ ತಿಳಿಸಬಹುದಾಗಿದೆ ಎಂದು ಸ್ವತ್ಛ ಭಾರತ್ ಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮಾತ್ರವಲ್ಲದೆ ನಿರ್ವಹಣೆಗೂ ಆದ್ಯತೆ ನೀಡಲಾಗುತ್ತಿದೆ. ಈ ಉದ್ದೇಶದಿಂದ ಶೌಚಾಲಯಗಳ ನಿರ್ವಹಣೆಯನ್ನು ಸ್ತ್ರೀ ಶಕ್ತಿ ಗುಂಪುಗಳಿಗೆ ವಹಿಸಿಕೊಡಲು ಪಂಚಾಯತ್‌ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. –ಡಾ| ಕುಮಾರ್, ಸಿಇಒ ದ.ಕ. ಜಿ.ಪಂ.
-ಸಂತೋಷ್ ಬೊಳ್ಳೆಟ್ಟು