ಮದ್ದೂರು: ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ವಿವಿಧ ಪ್ರದೇಶಗಳಲ್ಲಿ ಹೆಚ್ಚಿರುವ ಬೀದಿ ನಾಯಿಗಳ ಹಾವಳಿಯಿಂದ ಸ್ಥಳೀಯ ನಿವಾಸಿಗಳು ಸೇರಿದಂತೆ ವಾಹನ ಸವಾರರು, ಮಕ್ಕಳು, ವೃದ್ಧರ ಆತಂಕಕ್ಕೆ ಕಾರಣವಾಗಿದೆ.
ಹಳೇ ಎಂ.ಸಿ.ರಸ್ತೆಯ ಪೇಟೇಬೀದಿಯುದ್ದಕ್ಕೂ ಇರುವ ಕೋಳಿ ಮಾಂಸದ ಅಂಗಡಿಗಳೆದುರು, 200ಕ್ಕೂ ಹೆಚ್ಚು ಶ್ವಾನಗಳು ಗುಂಪು ಗುಂಪಾಗಿ ನಿಲ್ಲುತ್ತಿದ್ದು, ರಸ್ತೆಯಲ್ಲಿ ಓಡಾಡುವವರ ಮೇಲೆ ದಾಳಿ ಮಾಡಲು ಮುಂದಾಗುತ್ತಿವೆ. ಚನ್ನೇಗೌಡ ಬಡಾವಣೆ, ಸಿದ್ಧಾರ್ಥನಗರ, ರಾಮ್ ರಹೀಂ ನಗರ, ಹಳೇ ಒಕ್ಕಲಿಗರ ಬೀದಿ, ಶಿಕ್ಷಕರ ಬಡಾವಣೆ, ಸರ್ಕಾರಿ ಪಪೂ ಕಾಲೇಜು ಹೊರ ಆವರಣ, ಕೆಮ್ಮಣ್ಣು ನಾಲಾ ವೃತ್ತ ಹಾಗೂ ಕೊಲ್ಲಿ ವೃತ್ತಗಳಲ್ಲಿ ಜನ ಓಡಾಡುವುದೇ ದುಸ್ತರ ಎನ್ನುವಂತಾಗಿದೆ.
ಮಾಂಸದಂಗಡಿಗಳಲ್ಲಿ ಸಿಗುವ ತ್ಯಾಜ್ಯಕ್ಕಾಗಿ ರಸ್ತೆಗಳಲ್ಲಿ ಕಾಯುತ್ತ ನಿಲ್ಲುವ ಬೀದಿ ನಾಯಿಗಳು ಕೆಲವೊಮ್ಮೆ, ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡ್ಡ ಬಂದು ಅಪಘಾತಕ್ಕೆ ಎಡೆ ಮಾಡಿಕೊಡುತ್ತಿವೆ. ನಾಯಿಗಳ ದಾಳಿ ಭಯದಲ್ಲಿ ಸಂಚರಿಸುವ ಕೆಲ ವಾಹನ ಸವಾರರು ಅಪಘಾತಕ್ಕೀಡಾಗಿ ಪೆಟ್ಟು ಮಾಡಿಕೊಂಡಿರುವ ಘಟನೆಗಳೂ ಹಲವು ಬಾರಿ ನಡೆದಿವೆ. ಹೀಗಾಗಿ ಕೊಲ್ಲಿ ವೃತ್ತದಿಂದ ಪ್ರವಾಸಿ ಮಂದಿರ ವೃತ್ತ ತಲುಪುವವರೆಗಿನ ಸುಮಾರು ಒಂದೂವರೆ ಕಿಮೀ ಅಂತರದ ಮಾರ್ಗ ಸಂಚಾರ ಅತ್ಯಂತ ಸವಾಲಾಗಿದೆ.
ಪುರಸಭೆ ಆಡಳಿತ ನಿರ್ಲಕ್ಷ್ಯ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನೇದಿನೆ ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ಪುರಸಭೆ ಆಡಳಿತ ಮುಂದಾಗಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿ ಅನ್ವಯ ಕ್ರಮವಹಿಸಬೇಕೆಂಬುದು ಸ್ಥಳೀಯರ ಒತ್ತಾಯ. ಶಾಲಾ-ಕಾಲೇಜುಗಳು ಆರಂಭವಾಗುವ ಸಮಯ ಹಾಗೂ ಮುಕ್ತಾಯಗೊಳ್ಳುವ ವೇಳೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಅಧಿಕವಾಗಿರುತ್ತದೆ. ಆದರೆ, ಕೆಲ ಶ್ವಾನಗಳು ರಸ್ತೆಗಳಲ್ಲಿ ಅಡ್ಡಾದಿಡ್ಡಿ ಓಡೋಡಿ ಬಂದು ವಾಹನ ಸವಾರರ ಜೀವಕ್ಕೆ ಎರವಾಗುತ್ತಿವೆ. ಇನ್ನೂ ಕೆಲ ಶ್ವಾನಗಳು ಸವಾರರನ್ನು ಅಟ್ಟಾಡಿಸಿಕೊಂಡು ಹೋಗಿ ಅಪಘಾತಕ್ಕೆ ಎಡೆ ಮಾಡಿಕೊಡುತ್ತಿವೆ.
ಮಾಂಸ ತ್ಯಾಜ್ಯ ವಿಲೇವಾರಿ ಅವೈಜ್ಞಾನಿಕ: ಸಂಜೆಯಾಗುತ್ತಿದ್ದಂತೆ ಕೆಲ ಕೋಳಿ ಮಾಂಸದ ಅಂಗಡಿ ಮಾಲೀಕರು ಕೋಳಿ ತ್ಯಾಜ್ಯಗಳನ್ನು ಪಟ್ಟಣಕ್ಕೆ ಹೊಂದಿಕೊಂಡಂತ್ತಿರುವ ಹೊರವಲಯದ ನಿವೇಶನಗಳು, ರಸ್ತೆಬದಿಯ ಜಮೀನುಗಳು ಹಾಗೂ ನಿರ್ಜನ ಪ್ರದೇಶ, ಕಾಲುವೆಗಳಿಗೆ ಅವೈಜ್ಞಾನಿಕವಾಗಿ ಸುರಿಯುತ್ತಿರುವುದು ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಕಾರಣವಾಗಿದೆ. ಪೇಟೇಬೀದಿ ಬದಿಯ ಪಾಳು ನಿವೇಶನಗಳು, ಚರಂಡಿಗಳಲ್ಲಿ ಮರಿ ಹಾಕಿರುವ ಕೆಲ ಬೀದಿ ನಾಯಿಗಳು ತಮ್ಮ ಮರಿಗಳ ರಕ್ಷಣೆ ದೃಷ್ಟಿಯಿಂದ ಆ ವ್ಯಾಪ್ತಿಯಲ್ಲಿ ಸಂಚರಿಸುವ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಶಾಲಾ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ ಎಂಬುದು ಸಾರ್ವಜನಿಕರ ಆರೋಪ.
ಬೀದಿ ನಾಯಿಗಳ ನಿಯಂತ್ರಣ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಪುರಸಭೆಯಿಂದ ಕ್ರಮ ವಹಿಸುವ ಜತೆಗೆ ವೈಜ್ಞಾನಿಕ ರೀತಿಯಲ್ಲಿ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳೊಡನೆ ಚರ್ಚಿಸಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ಕುರಿತಾಗಿ ಕ್ರಮ ವಹಿಸಲಾಗುವುದು.
-ಅಶೋಕ್, ಪುರಸಭೆ ಮುಖ್ಯಾಧಿಕಾರಿ, ಮದ್ದೂರು.
ದಿನೇದಿನೆ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿಯಿಂದ ವಾಯು ವಿಹಾರಿಗಳು, ಹಿರಿಯ ನಾಗರಿಕರು ಹಾಗೂ ವಾಹನ ಸವಾರರು ರಸ್ತೆಯಲ್ಲಿ ಜೀವ ಭಯದಿಂದಲೇ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಬಂಧಿಸಿದ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕಿದೆ.
-ವಿ.ಕೆ. ಗೌತಮ್, ಮದ್ದೂರು ಪಟ್ಟಣ ನಿವಾಸಿ
-ಎಸ್.ಪುಟ್ಟಸ್ವಾಮಿ