ವಿಜಯಪುರ: ಮಕ್ಕಳ ಮೇಲೆ ದಾಳಿ ನಡೆಸಿ ಜನಾಕ್ರೋಶಕ್ಕೆ ಗುರಿಯಾಗಿದ್ದ ಬೀದಿ ನಾಯಿಗಳನ್ನು ಮಾಂಸದಲ್ಲಿ ವಿಷ ಹಾಕಿ ಮಾರಣ ಹೋಮ ಮಾಡಿರುವ ಅಮಾನವೀಯ ಘಟನೆ ನಗರದಲ್ಲಿ ಜರುಗಿದೆ.
ಶನಿವಾರ ಬೆಳಗ್ಗೆ ನಗರದ ಬಡಿಕಮಾನ್, ಕುಂಬಾರ ಓಣಿ ಪ್ರದೇಶದಲ್ಲಿ ಸುಮಾರು 20ಕ್ಕೂ ಹೆಚ್ಚು ಬೀದಿ ನಾಯಿಗಳು ವಿಷದ ಮಾಂಸ ಸೇವಿಸಿ ಸಾಮೂಹಿಕವಾಗಿ ಜೀವ ಕಳೆದುಕೊಂಡಿವೆ.
ಕಳೆದ ಕೆಲವು ದಿನಗಳ ಹಿಂದೆ ನಗರದ ಕೆಲ ಪ್ರದೇಶಗಳ ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದವು. ಗಾಯಾಳು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸಿದ ಕುರಿತು ಸಾರ್ವಜನಿಕರು ಮಹಾನಗರ ಪಾಲಿಕೆಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಬೀದಿ ನಾಯಿಗಳನ್ನು ಸೆರೆ ಹಿಡಿದು ಸಂತಾಹರಣ ಶಸ್ತ್ರ ಚಿಕಿತ್ಸೆ ಹಾಗೂ ರೋಗ ನಿರೋಧಕ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ನಡೆಸಿತ್ತು.
ಈ ಬೆಳವಣಿಗೆ ಮಧ್ಯೆಯೇ ಶನಿವಾರ ಬೆಳಗ್ಗೆ ಬಡಿಕಮಾನ್ ಹಾಗೂ ಕುಂಬಾರ ಓಣಿ ಪ್ರದೇಶಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಬೀದಿ ನಾಯಿಗಳು ವಿಷದ ಮಾಂಸ ಸೇವಿಸಿ ಸಾವಿಗೀಡಾಗಿವೆ.
ಬೀದಿ ನಾಯಿಗಳಿಗೆ ವಿಷ ಬೆರೆಸಿ ಸಾಮೂಹಿಕ ಹತ್ಯೆ ಮಾಡಿರುವ ಅಮಾನವೀಯ ಕೃತ್ಯಕ್ಕೆ ಕಾರಣವಾದವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುವಂತೆ ಮಾಡಿದೆ.