ಬೆಂಗಳೂರು: ಬಿಜೆಪಿ ಈಗಾಗಲೇ 212 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹಲವು ಕ್ಷೇತ್ರಗಳಲ್ಲಿ ಬಂಡಾಯ ಸಿಡಿದಿದ್ದರೆ, ಇನ್ನು ಹಲವೆಡೆ ಅಸಮಾಧಾನ ಇದೆ. ಪರಿಸ್ಥಿತಿ ಇನ್ನಷ್ಟು ಕೈ ಮೀರುವ ಮೊದಲು ತಹಬಂದಿಗೆ ತರುವ ಕಾರ್ಯತಂತ್ರಗಳ ಬಗ್ಗೆ ಪಕ್ಷದ ಹಿರಿಯ ನಾಯಕರು ಶುಕ್ರವಾರ ಸಮಾಲೋಚನೆ ನಡೆಸಿದ್ದಾರೆ.
ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾ. ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಸಂಘಟನ ಕಾರ್ಯದರ್ಶಿ ರಾಜೇಶ್, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂಡಾಯ ಶಮನದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ.
ಲಕ್ಷ್ಮಣ ಸವದಿ, ಆರ್. ಶಂಕರ್, ಗೂಳಿಹಟ್ಟಿ ಶೇಖರ್, ಎಂ.ಪಿ. ಕುಮಾರಸ್ವಾಮಿ, ಶಶಿಕಾಂತ್ ಅಕ್ಕಪ್ಪ ನಾಯಕ್, ಸೊಗಡು ಶಿವಣ್ಣ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಉಳಿದಂತೆ ಜಗದೀಶ್ ಶೆಟ್ಟರ್, ನೆಹರು ಓಲೆಕಾರ್, ಆಯನೂರ್ ಮಂಜುನಾಥ್, ಕಳಕಪ್ಪ ಬಂಡಿ ಸೇರಿ ಹತ್ತು ಹಲವು ಮುಖಂಡರಲ್ಲಿ ಅಸಮಾಧಾನ ಮಡುಗಟ್ಟಿದೆ. ಇವರಲ್ಲಿ ಕೆಲವರು ಪಕ್ಷ ಬಿಡುವ ಬಗ್ಗೆ ಈಗಾಗಲೇ ತೀರ್ಮಾನ ಕೈಗೊಂಡಿದ್ದರೆ, ಮೂರನೇ ಪಟ್ಟಿ ಪ್ರಕಟಗೊಂಡ ಬಳಿಕ ಉಳಿದವರು ತಮ್ಮ ನಿರ್ಧಾರ ಬಹಿರಂಗ ಪಡಿಸಲಿದ್ದಾರೆ.
ಯಾರ ಮನವೊಲಿಕೆ ಸಾಧ್ಯವಾಗಲಿದೆ, ಯಾರು ಪಕ್ಷ ತ್ಯಜಿಸುವುದು ನಿಶ್ಚಿತ ಮುಂತಾದ ಅಂಶಗಳ ಬಗ್ಗೆಯೂ ನಾಯಕರು ಸಮಾಲೋಚಿಸಿದ್ದಾರೆ. ಮನವೊಲಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು. ಮನವೊಲಿಸುವ ಪ್ರಯತ್ನದಲ್ಲಿ ನಾಯಕರೆಲ್ಲ ಒಟ್ಟಾಗಿ ಪ್ರಯತ್ನಿಸೋಣ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.
ಬಿಎಸ್‌ವೈ, ಬೊಮ್ಮಾಯಿ ಭೇಟಿ
ಹಾವೇರಿಯಿಂದ ಬಿಜೆಪಿ ಟಿಕೆಟ್ ವಂಚಿತ ಶಾಸಕ ನೆಹರು ಓಲೇಕಾರ್ ಅವರು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿಎಸ್‌ವೈ ಅವರನ್ನು ಭೇಟಿಯಾಗಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ “ಇನ್ನು ಟಿಕೆಟ್ ನೀಡಲು ಸಾಧ್ಯವಿಲ್ಲ’ ಎಂದು ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿರುವ ಹಿನ್ನೆಲೆಯಲ್ಲಿ ಶನಿವಾರ ತಮ್ಮ ತೀರ್ಮಾನ ಪ್ರಕಟಿಸುವುದಾಗಿ ಓಲೇಕಾರ್ ಹೇಳಿದ್ದಾರೆ. ರೋಣ ಕ್ಷೇತ್ರದ ಬಿಜೆಪಿ ಟಿಕೆಟ್ ಇನ್ನೂ ಪ್ರಕಟವಾಗಿರದ ಹಿನ್ನೆಲೆಯಲ್ಲಿ ಅಲ್ಲಿನ ಹಾಲಿ ಶಾಸಕ ಕಳಕಪ್ಪ ಬಂಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ.