ದಾವಣಗೆರೆ: ವಿಶ್ವ ಬಾಲಕಾರ್ಮಿಕರ ದಿನದ ಧ್ಯೇಯೋದ್ದೇಶ ಈಡೇರಿಕೆಗೆ ವಿವಿಧ ಇಲಾಖೆಗಳು ಕೈಜೋಡಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ವಿಶ್ವ ಬಾಲಕಾರ್ಮಿಕರ ವಿರೋಧಿ ದಿನ ಆಚರಣೆ ಕುರಿತು ಚರ್ಚಿಸಲು ಸೋಮವಾರ ಜಿಲ್ಲಾಡಳಿತ ಕಚೇರಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೂನ್ 12ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಅಸಂಘಟಿತ ಕಾರ್ಮಿಕರು, ಕಾರ್ಮಿಕ ಮುಖಂಡರು, ಹೊಟೇಲ್, ಇಟ್ಟಿಗೆ ಭಟ್ಟಿ, ಗ್ಯಾರೇಜ್ ಹಾಗೂ ಮಂಡಕ್ಕಿ ಭಟ್ಟಿ ಮಾಲೀಕರನ್ನು ಕರೆಯಿಸಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜಾಗೃತಿ ಹಾಗೂ ತಮ್ಮ ಕೆಲಸದ ಸ್ಥಳಗಳಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಂಡು ಕಾರ್ಯನಿರ್ವಹಿಸಿದರೆ ಕಾನೂನಿನ ಪ್ರಕಾರ ಕೈಗೊಳ್ಳಲಾಗುವ ಕ್ರಮಗಳ ಕುರಿತು ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಲಿದ್ದು, ಅಗತ್ಯ ಕಾರ್ಯತಂತ್ರ ರೂಪಿಸಿಕೊಳ್ಳಬೇಕು. ಬಾಲ ಕಾರ್ಮಿಕತೆಗೆ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಸ್ಥಿತಿ ಮತ್ತು ಬಡತನ ಪ್ರಮುಖ ಕಾರಣವಾಗಿದ್ದು ಇಂತಹ ಬಾಲಕಾರ್ಮಿಕರು ಜಿಲ್ಲೆಯ ಯಾವ ಭಾಗದಲ್ಲಿ ಹೆಚ್ಚು ಕಂಡುಬರುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಅಂತಹ ವರ್ಗದ ಮನ ಪರಿವರ್ತಿಸಲು ಪ್ರಯತ್ನಿಸಬೇಕು. ಈ ಕಾರ್ಯಕ್ರಮದಿಂದ ನಾಲ್ಕಾರು ಕುಟುಂಬಗಳು ಪರಿವರ್ತನೆಯಾದರೆ ಕಾರ್ಯಕ್ರಮ ಆಯೋಜಿಸಿದ್ದಕ್ಕೂ ಸಾರ್ಥಕವಾಗಲಿದೆ ಎಂದು ಹೇಳಿದರು.
ಈ ವೇಳೆ ಕಾರ್ಯಕ್ರಮದ ಯೋಜನಾ ನಿರ್ದೇಶಕ ಪ್ರಸನ್ನ ಮಾತನಾಡಿ, ಕಳೆದ ಬಾರಿ ಆಯೋಜಿಸಿದಂತೆ ಕಾರ್ಯಕ್ರಮದ ದಿನದಂದು ಮಿಲ್ಲತ್ ಶಾಲಾ ಮಕ್ಕಳಿಂದ ಮಂಡಕ್ಕಿ ಭಟ್ಟಿ ಪ್ರದೇಶದಲ್ಲಿ ಜಾಥಾ ನಡೆಸಲಾಗುವುದು. ಅಂದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಐದು ದಿನಗಳ ಮುಂಚೆಯೇ ಬಾಲ ಕಾರ್ಮಿಕ ಪಿಡುಗಿನ ಬಗ್ಗೆ ಆಟೋಗಳ ಮೂಲಕ ಪ್ರಚಾರ ಮಾಡಿಸಲಾಗುವುದು ಹಾಗೂ ಮೂರು ಕಡೆ ಬೀದಿನಾಟಕ ಆಯೋಜಿಸಲಾಗುವುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಅಂದು ಜಾಥಾ ನಡೆಸುವ ಪ್ರಾರಂಭ ಸ್ಥಳದಿಂದ ಮುಕ್ತಾಯದ ಸ್ಥಳದವರೆಗೆ ಪೊಲೀಸ್ ಇಲಾಖೆಗೆ ಟ್ರಾಫಿಕ್ ಸಮಸ್ಯೆಯಾಗದಂತೆ ಕ್ರಮ ವಹಿಸಲು ಪತ್ರ ಬರೆಯಬೇಕು. ಶಿಕ್ಷಣ ಇಲಾಖೆಯು ಸಹ ಇದಕ್ಕೆ ಅಗತ್ಯ ಬೆಂಬಲ ಸೂಚಿಸಿ ಶಿಕ್ಷಕರು ಸಹ ಜಾಥಾದದಲ್ಲಿ ಭಾಗವಹಿಸಬೇಕು. ಜಿಲ್ಲೆಯ ಎಲ್ಲಾ ಪಿಡಿಒಗಳಿಗೆ ಬಾಲ ಕಾರ್ಮಿಕತೆ ಕುರಿತು ಒಂದು ಕಾರ್ಯಾಗಾರ ಏರ್ಪಡಿಸಿ ಅದರ ಅರಿವು ಹಾಗೂ ಅವರ ಅಧಿಕಾರದ ಬಗ್ಗೆ ತಿಳಿಸಿಕೊಡಬೇಕು ಎಂದು ಬಿ.ಟಿ. ಕುಮಾರಸ್ವಾಮಿ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಅವರಿಗೆ ಸಲಹೆ ನೀಡಿದರು. ಹರಿಹರದಲ್ಲಿ ಸಹ ಬಾಲಕಾರ್ಮಿಕರು ಇಟ್ಟಿಗೆ ಭಟ್ಟಿಗಳಲ್ಲಿ ಹೆಚ್ಚು ಕಂಡುಬರುತ್ತಿದ್ದು ಅಲ್ಲಿಯೂ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಡಿ.ಎಚ್.ಓ .ಡಾ| ತ್ರಿಪುಲಾಂಬ ಮಾತನಾಡಿ, ಅಂದಿನ ಕಾರ್ಯಕ್ರಮದಲ್ಲಿ ಬಾಲ ಕಾರ್ಮಿಕತೆಯಿಂದ ಮುಕ್ತಿಹೊಂದಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡವರನ್ನು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಮಕ್ಕಳನ್ನು ಪುರಸ್ಕರಿಸಿದರೆ ಒಳಿತು ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ(ಪ್ರಭಾರ), ಅಂತಹ ಮಕ್ಕಳನ್ನು ಪ್ರೋತ್ಸಾಹಿಸಿ ಉತ್ತೇಜಿಸಿದರೆ ಇದರಿಂದ ಇತರರು ಬದಲಾಗಬಹುದು ಎಂದರು. ಸಭೆಯಲ್ಲಿ ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಜಾಕೀರ್ ಬಾಷಾ, ಕಾರ್ಮಿಕ ಅಧಿಕಾರಿ ಇಬ್ರಾಹಿಂ, ಜಿಲ್ಲಾ ಆಯುಷ್ ಅಧಿಕಾರಿ ಸಿದ್ದೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.