Advertisement

ಮಿಡತೆಗಳ ನಿಯಂತ್ರಣಕ್ಕೆ ಕಾರ್ಯತಂತ್ರ

05:30 AM May 29, 2020 | Lakshmi GovindaRaj |

ಮೈಸೂರು: ಉತ್ತರ ಭಾರತದಲ್ಲಿ ರಕ್ಕಸ ಮಿಡತೆಗಳು ಬೆಳೆ ನಾಶ ಪಡಿಸುತ್ತಿದ್ದು, ರಾಜ್ಯದಲ್ಲಿ ಕೃಷಿ ಇಲಾಖೆ ಹಾಗೂ ಜಲ ಸಂಪನ್ಮೂಲ ಇಲಾಖೆ ಒಟ್ಟಿಗೆ ಸಭೆ ನಡೆಸಿ ಮಿಡತೆಗಳ ನಿಯಂತ್ರಣಕ್ಕೆ ಕಾರ್ಯತಂತ್ರ ರೂಪಿಸಲಾಗುವುದು ಎಂದು  ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದರು.

Advertisement

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸಂಕಷ್ಟದ ಕಾಲದಲ್ಲಿ ಅತ್ಯುತ್ತಮ  ಆರ್ಥಿಕ ಪ್ಯಾಕೇಜ್‌ ಘೋಷಿಸಿದೆ. 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಇನ್ನೂ ಇಲಾಖೆಗಳಿಗೆ ಹಂಚಿಕೆಯಾಗಿಲ್ಲ. ಅದರಲ್ಲಿ ಜಲ ಸಂಪನ್ಮೂಲ ಇಲಾಖೆಗೆ ಎಷ್ಟು ಸಿಗುತ್ತದೆ ಎಂಬುದು ಶೀಘ್ರದಲ್ಲೇ  ತಿಳಿಯಲಿದೆ ಎಂದರು.

ಸ್ಥಿತಿಗತಿ ಗಮನಿಸಿ ತೀರ್ಮಾನ: ಕೃಷಿಗೆ ನೀರು ಹರಿಸುವ ವಿಚಾರ ಸಂಬಂಧ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆದಿದ್ದು, ರಾಜ್ಯದ ಜಲಾಶಯಗಳ ಸ್ಥಿತಿಗತಿ ಗಮನಿಸಿ ತೀರ್ಮಾನ ಕೈಗೊಳ್ಳಲಾಗುವುದು. ಕಾವೇರಿ ಹಾಗೂ  ಕಬಿನಿ ಜಲಾಶಯಗಳು ಅಂತರರಾಜ್ಯ ಸಂಬಂಧ ಹೊಂದಿವೆ.

ಈ ಜಲಾಶಯಗಳಿಂದ ನೀರು ಹರಿಸಲು ಕೇಂದ್ರೀಯ ಜಲ ಮಂಡಳಿಯಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಸಭೆಯಲ್ಲಿ ನೀರು ಹರಿಸುವ ಸಂಬಂಧ ಚರ್ಚೆಯಾಗಿದೆ. ಅಂತರ್ಜಲ  ಮಟ್ಟ ಹೆಚ್ಚಿಸಲು ರೈತರು ತುಂತುರು ನೀರಾವರಿ ಮೂಲಕ ವ್ಯವಸಾಯ ಮಾಡುವುದು ಒಳ್ಳೆಯದು. ಅಂತರ್ಜಲ ಮಟ್ಟ ಹೆಚ್ಚಿಸಲು ಇಲಾಖೆಯಿಂದ ಕಾರ್ಯ ಕ್ರಮ ರೂಪಿಸಲಾಗುವುದು ಎಂದರು.

ಎಂಎಲ್‌ಸಿ ಸ್ಥಾನ ಹೈಕಮಾಂಡ್‌ ನಿರ್ಧಾರ: ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರಿಗೆ ಎಂಎಲ್‌ಸಿ ಸ್ಥಾನ ನೀಡುವ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಇದರಲ್ಲಿ ಪಕ್ಷದ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಈ ಬಗ್ಗೆ ಚರ್ಚೆ  ಮಾಡಿದ ಬಳಿಕ ಯಾರಿಗೆ ಎಂಎಲ್‌ಸಿ ಸ್ಥಾನ ನೀಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದರು.

Advertisement

ಎಜು ಕೌಶಲ್‌ ಆಪ್‌ ಬಿಡುಗಡೆ: ಪ್ರಾಥಮಿಕ ಹಂತದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಕೌಶಲಗಳನ್ನು ಅಭಿವೃದ್ಧಿಪಡಿಸುವ ಎಜು ಕೌಶಲ್‌ ಆಪ್‌ ಬಿಡುಗಡೆ ಮಾಡಲಾಯಿತು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್‌  ಜಾರಕಿಹೊಳಿ ಬಿಡುಗಡೆ ಮಾಡಿದರು. ಸಂಸದ ಪ್ರತಾಪಸಿಂಹ, ಜೆಎಸ್‌ಎಸ್‌ ಮಹಾವಿದ್ಯಾ ಪೀಠದ ಮುಖ್ಯ ಕಾರ್ಯ ನಿರ್ವಾಹಣಾ ಧಿಕಾರಿ ಡಾ.ಸಿ.ಜಿ.ಬೆಟ ಸೂರಮಠ, ಉಪ ಕಾರ್ಯದರ್ಶಿ ಎಸ್‌.ಶಿವಕುಮಾರಸ್ವಾಮಿ ಇದ್ದರು.

ಶೈಕ್ಷಣಿಕ ಪ್ರಗತಿಗೆ ಆಪ್‌ ಸಹಕಾರಿ: 1ರಿಂದ 5ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆ ಅಭಿವೃದ್ಧಿಪಡಿಸಲು ಅವರ ಪಠ್ಯ ಪುಸ್ತಕಗಳನ್ನು ಆಧರಿಸಿ, ಸ್ವತಂತ್ರವಾಗಿ ಶೈಕ್ಷಣಿಕ ಕೌಶಲಗಳನ್ನು ಡಿಜಿಟಿಲ್‌ ಇಂಡಿಯಾದ ಮೂಲಕ  ಅಭಿವೃದ್ಧಿಪಡಿಸುವುದು. ಎಜು ಕೌಶಲವನ್ನು ಬಳಸಿ ರಾಜ್ಯಪಠ್ಯಕ್ರಮವನ್ನು ಅನುಸರಿಸುತ್ತಿರುವ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಕೌಶಲಗಳನ್ನು ಸುಲಭ ಮತ್ತು ಸ್ವಕಲಿಕೆಯಿಂದ ಕಲಿಯಲು ಅವಕಾಶ ಕಲ್ಪಿಸಲಾಗಿದೆ.

ಮಕ್ಕಳ ಕಲಿಕೆಗಾಗಿ  ಅವಶ್ಯಕವಿರುವ ಆಡಿಯೋ ವಿಷುಯಲ್‌ ಮತ್ತು ಬಹು ಮುಖ್ಯವಾದ ಕೈನ್‌ಸ್ಥೆಟಿಕ್‌ ಪ್ರಕ್ರಿಯೆಗಳನ್ನು ಸಂಯೋಜಿಸಲಾಗಿದೆ. ಎಜು ಕೌಶಲವನ್ನು ಕನ್ನಡ, ಇಂಗ್ಲಿಷ್‌ ಮಾಧ್ಯಮದ ಮಕ್ಕಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಮಕ್ಕಳು ಪಾಠ,  ಪ್ರಶ್ನೋತ್ತರ ಮತ್ತು ಸ್ವ ಮೌಲ್ಯಮಾಪನ ಮಾಡಿಕೊಳ್ಳಲು ಎಜು ಕೌಶಲ್‌ ಆಪ್‌ ಸಹಕಾರಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next