ರೋಣ ತಾಲೂಕಿನ 35 ಗ್ರಾಪಂಗಳ ಪೈಕಿ 18 ಪಂಚಾಯತ್‌ಗಳಲ್ಲಿ ಇಂಗುಗುಂಡಿಗಳ ನಿರ್ಮಿಸುವ ಕಾಮಗಾರಿ ಭರದಿಂದ ನಡೆದಿದ್ದು, ಒಟ್ಟು 4482 ಇಂಗು ಗುಂಡಿಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ಸದ್ಯ 300ಕ್ಕೂ ಹೆಚ್ಚು ಗುಂಡಿಗಳನ್ನು ನಿರ್ಮಿಸಲಾಗಿದೆ.
ರೋಣ: ಗ್ರಾಮೀಣ ಪ್ರದೇಶಗಳಲ್ಲಿ ಬರುವ ಸಣ್ಣ ಪುಟ್ಟ ಹಳ್ಳ ಕೊಳ್ಳಗಳಿಗೆ ಅಡ್ಡವಾಗಿ ಇಂಗು ಗುಂಡಿಗಳನ್ನು ನಿರ್ಮಿಸಿ, ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ವೈಜ್ಞಾನಿಕವಾಗಿ ಹಿಡಿದಿಟ್ಟುಕೊಂಡು ಭೂಮಿಗೆ ಇಂಗುವಂತೆ ಮಾಡುವ ಮಹತ್ವದ ಕಾರ್ಯಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಮುಂದಾಗಿದೆ.
ಶಂಕರ ಗುರೂಜಿ ಅವರ ಸಾಮಾಜಿಕ ಸಂಸ್ಥೆ ಆರ್ಟ್ ಆಫ್ ಲೀವಿಂಗ್ ಈ ಕಾರ್ಯವನ್ನು ವಹಿಸಿಕೊಂಡಿದ್ದು, ತಾಲೂಕಿನ ವ್ಯಾಪ್ತಿಯ 35 ಗ್ರಾಪಂಗಳ ಪೈಕಿ 18 ಪಂಚಾಯತ್‌ಗಳಲ್ಲಿ ಈಗಾಗಲೇ ಕಾಮಗಾರಿ ಭರದಿಂದ ಸಾಗಿದೆ.
4482 ಗುಂಡಿ ನಿರ್ಮಿಸುವ ಗುರಿ: ತಾಲೂಕಿನಲ್ಲಿ ಒಟ್ಟು 35 ಗ್ರಾಪಂಗಳು 4482 ಇಂಗು ಗುಂಡಿಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಇದರಲ್ಲಿ ಸದ್ಯ 300ಕ್ಕೂ ಹೆಚ್ಚು ಗುಂಡಿಗಳನ್ನು ನಿರ್ಮಿಸಲಾಗಿದೆ. ಒಂದು ಗುಂಡಿಗೆ 1,23,500 ಹಣವನ್ನು ನರೇಗಾ ಯೋಜನೆಯಡಿ ನೀಡಲಾಗುತ್ತದೆ. ಒಟ್ಟು ಇಂಗು ಗುಂಡಿಗಳು ಸೇರಿ ಅಂದಾಜು 4,48,20,000 ಮೊತ್ತದ ಕ್ರಿಯಾಯೋಜನೆಗೆ ಗದಗ ಜಿಪಂನಿಂದ ಅನುಮೋದನೆ ಪಡೆಯಲಾಗಿದೆ. ಒಂದು ಗುಂಡಿ ಸುಮಾರು 20 ಅಡಿ ಆಳ, 4 ಅಡಿ ಅಗಲ ತೋಡಲಾಗುತ್ತದೆ. ಅದಕ್ಕೆ 1 ಅಡಿ ಗಾತ್ರದ ರಿಂಗ್ ಅಳವಡಿಸಿ ಮೇಲೆ ಮುಚ್ಚಳ ಹಾಕಲಾಗುತ್ತದೆ. ಇಂಗು ಗುಂಡಿಯ ಹಿಂದುಗಡೆ ನೀರನ್ನು ನಿಧಾನವಾಗಿ ಚಲಿಸುವಂತೆ ಮಾಡಲು ಕಲ್ಲಿನಿಂದ ತಡೆಗೋಡೆ ನಿರ್ಮಿಸಲಾಗುತ್ತದೆ.
ಪ್ರಯೋಜನ ಏನು?: ರೈತರ ಭೂಮಿ ಜಮೀನುಗಳ ಅಕ್ಕಪಕ್ಕದಲ್ಲಿ ಹಾದು ಹೋಗುವ ಹಳ್ಳಗಳನ್ನು ಗುರುತಿಸಿ ಆರ್ಟ್ ಆಫ್ ಲೀವಿಂಗ್ ಸಂಸ್ಥೆ ಇಸ್ರೋ ಸಹಾಯದೊಂದಿಗೆ ಉಪಗ್ರಹ ಆಧಾರಿತ ತಂತ್ರಜ್ಞಾನದಿಂದ ಸೂಚಿಸಲ್ಪಟ್ಟ ಸ್ಥಳಗಳಲ್ಲಿ ಗುಂಡಿ ನಿರ್ಮಿಸುತ್ತದೆ. ಈ ಕಾಮಗಾರಿಗೆ ನರೇಗಾದಿಂದ ಹಣ ಭರಿಸಲಾಗುತ್ತದೆ. ಒಂದು ಬಾರಿ ಮಳೆಯಾಗಿ ಹಳ್ಳ ಕೊಳ್ಳ ಹರಿದರೆ ಸುಮಾರು 10 ಸಾವಿರ ಲೀಟರ್ ನೀರನ್ನು ಗುಂಡಿ ಇಂಗಿಸುತ್ತದೆ. ಮಳೆಗಾಲದಲ್ಲಿ ವರ್ಷಕ್ಕೆ 4-5 ಮಳೆಗಳು ಚೆನ್ನಾಗಿ ಸುರಿದರೆ ಸುಮಾರು 50 ಸಾವಿರ ಲೀಟರ್ ನೀರನ್ನು ಭೂಮಿಗೆ ಇಂಗಿಸುವ ಕಾರ್ಯವನ್ನು ಗುಂಡಿ ಮಾಡಲಿದೆ. ಇದರಿಂದ ಅಂತರ್ಜಲ ವೃದ್ಧಿಯಾಗುವುದರ ಜತೆಗೆ ದೀರ್ಘಾವಧಿ ನಂತರ ರೈತರು ಬೆಳೆದ ಬೆಳೆಗಳು ಹೆಚ್ಚಿನ ಇಳುವರಿ ಪಡೆಯಲಿದೆ. ಇದು ಪರಿಸರ ಸ್ನೇಹಿಯಾಗಿದೆ.
ಕೊಳವೆ ಬಾವಿ ರೀಚಾರ್ಜ್
ಇಂಗು ಗುಂಡಿ ಕಾರ್ಯಕ್ರಮ ನರೇಗಾ ಯೋಜನೆಯಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ಈ ಯೋಜನೆಯಿಂದ ಅಂತರ್ಜಲ ಮಟ್ಟ ಸುಧಾರಿಸುವುದರ ಜತೆಗೆ ರೈತರ ಕೊಳವೆ ಬಾವಿಗಳನ್ನು ರೀಚಾರ್ಜ್ ಮಾಡುವ ಕೆಲಸ ಇದಾಗಿದೆ. ಈ ಕಾಮಗಾರಿಯಲ್ಲಿ ಸಂಪೂರ್ಣ ಮಾನವ ನಿರ್ಮಿತವಾಗುವುದರಿಂದ ಜನರಿಗೆ ಉದ್ಯೋಗ ನೀಡುವ ಕಾರ್ಯಕ್ಕೆ ಮುಂದಾಗಿದೆ.
ಸಂತೋಷ ಪಾಟೀಲ,
ತಾಪಂ ಸಹಾಯಕ ನಿರ್ದೇಶಕ
ಪರಿಸರ ಸಂರಕ್ಷಣೆ ಉದ್ದೇಶ
ಮುಗಿದು ಹೋಗುವ ಸಂಪನ್ಮೂಲಗಳಲ್ಲೊಂದಾದ ನೀರನ್ನು ಹಿಡಿದಿಟ್ಟುಕೊಂಡು ಭೂಮಿಗೆ ಇಂಗಿಸುವುದರ ಜೊತೆಗೆ ಪರಿಸರ ಸಂರಕ್ಷಿಸುವ ಉದ್ದೇಶವನ್ನು ಇಟ್ಟುಕೊಂಡು ಇಂಗುಗುಂಡಿಗಳನ್ನು ನಿರ್ಮಿಸಲಾಗುತ್ತದೆ. ಪ್ರತಿ ಗ್ರಾಪಂ ಮಟ್ಟದಲ್ಲಿ ಈಗಾಗಲೆ ಇಂಗು ಗುಂಡಿಗಳನ್ನು ನಿರ್ಮಿಸಲು ಸೂಚನೆ ನೀಡಿದ್ದೇನೆ.ಈ ಕಾಮಗಾರಿಗೆ ಮನುಷ್ಯನ್ನು ಹೊರತುಪಡಿಸಿ ಯಾವುದೇ ಯಂತ್ರಗಳನ್ನು ಬಳಸುವಂತಿಲ್ಲವೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಕಳಕಪ್ಪ ಬಂಡಿ, ಶಾಸಕ
ಯಚ್ಚರಗೌಡ ಗೋವಿಂದಗೌಡ್ರ