ಬೆಳಗಾವಿ: ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ವಿಚಿತ್ರ ಬಲೂನ್ ಪತ್ತೆಯಾಗಿದ್ದು, ಈ ಬಲೂನ್ ನಲ್ಲಿ ಕೆಲ ಎಲೆಕ್ಟ್ರಾನಿಕ್ ವಸ್ತುಗಳು ಇರುವುದರಿಂದ ಆತಂಕಕ್ಕೆಡೆ ಮಾಡಿಕೊಟ್ಟಿದೆ.
ಗದ್ದಿಕರವಿನಕೊಪ್ಪ ಗ್ರಾಮದ ಹೊಲದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಈ ಬಲೂನ್ ಬಂದು ಬಿದ್ದಿತ್ತು. ಕೂಡಲೇ ಗ್ರಾಮಸ್ಥರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಬಂದು ಪರಿಶೀಲನೆ ನಡೆಸಿದರು.
ಈ ದೊಡ್ಡದಾದ ಬಲೂನ್ ನಲ್ಲಿ ಕೆಲ ಎಲೆಕ್ಟ್ರಾನಿಕ್ ವಸ್ತುಗಳು, ಬ್ಯಾಟರಿ ಪತ್ತೆಯಾಗಿದೆ. ಹೆಚ್ಚಿನ ಪರಿಶೀಲನೆಗೆ ಬೆಳಗಾವಿಗೆ ತರಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಲವೇ ಕ್ಷಣಗಳಲ್ಲಿ ನೀಡುವುದಾಗಿ ಎಸ್ ಪಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.
ಚೀನ, ಯುಎಸ್ ಎ ಹಾಗೂ ಜರ್ಮನಿಯಲ್ಲಿ ಕಂಡು ಬರುವ ಬಲೂನ್ ನಂತೆ ಇದು ಕಂಡು ಬರುತ್ತಿದ್ದು, ಹೆಚ್ಚಿನ ಮಾಹಿತಿ ಸಿಗಬೇಕಾಗಿದೆ.
ಬೆಳಗಾವಿ ಜಿಲ್ಲೆಯ ಗದ್ದಿಕರವಿನಕೊಪ್ಪದಲ್ಲಿ ಕಂಡುಬಂದ ಬಲೂನಿನ ಬಗ್ಗೆ ಪ್ರಾಥಮಿಕ ತನಿಖೆ ಮಾಡಲಾಗಿದ್ದು ಇದು ಅತೀ ಎತ್ತರದ ಪ್ರದೇಶದಲ್ಲಿ ಹವಾಮಾನ ನಿರ್ಧರಿಸಲು ಬಳಸುವ ಸಾಧನವಾಗಿದೆ. ಹೀಗಾಗಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಹೇಳಿದ್ದಾರೆ. ಗದ್ದಿಕರವಿನಕೊಪ್ಪ ಗ್ರಾಮದ ಹೊಲದಲ್ಲಿ ಪತ್ತೆಯಾದ ಬಲೂನನ್ನು ವಶಪಡಿಸಿಕೊಳ್ಳಲಾಗಿದ್ದು ಇದರ ಮೂಲವನ್ನು ಸಹ ಪತ್ತೆಹಚ್ಚಲಾಗಿದೆ. ಸಂಪೂರ್ಣ ತನಿಖೆಯ ನಂತರ ಮಾಹಿತಿ ನೀಡಲಾಗುವುದು ಎಂದರು. ಇದು ಎತ್ತರದ ತಾಪಮಾನದ, ಗಾಳಿಯ ವೇಗ ಹಾಗೂ ಗಾಳಿಯ ಒತ್ತಡದ ಮೇಲ್ವಿಚಾರಣೆ ಮಾಡಲು ಬಳಸುವ ಸಾಧನವಾಗಿದೆ ಎಂದು ಜಿಲ್ಲಾ ಎಸ್. ಪಿ. ತಿಳಿಸಿದ್ದಾರೆ.