ಸಾಮಾನ್ಯವಾಗಿ ಟೀಸರ್ ಮತ್ತು ಪ್ರೋಮೋ ಬಿಡುಗಡೆ ಮಾಡುವ ಚಿತ್ರಗಳಲ್ಲಿ ಸಹಜವಾಗಿ ಸಂಭಾಷಣೆಗಳಿರುತ್ತವೆ. ಆದರೆ, ಮೋಷನ್ ಪೋಸ್ಟರ್‌ಗಳಲ್ಲಿ ಯಾವುದೇ ಸಂಭಾಷಣೆಗಳಿರುವುದಿಲ್ಲ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ “ಧೈರ್ಯಂ’ ಚಿತ್ರತಂಡ, “ಸ್ಟೋರಿಲೈನ್ ಮೋಷನ್ ಪೋಸ್ಟರ್’ ಬಿಡುಗಡೆ ಮಾಡುವ ಮೂಲಕ ಜೋರು ಸುದ್ದಿ ಮಾಡಿದೆ. ಮೋಷನ್ ಪೋಸ್ಟರ್ ಅಂದರೆ, ಚಿತ್ರದ ಸ್ಟಿಲ್‌ಗಳನ್ನು ಮಾತ್ರ ಹಾಕಿ, ಅದಕ್ಕೊಂದು ಹಿನ್ನೆಲೆ ಸಂಗೀತ ಕೊಟ್ಟು ರಿಲೀಸ್ ಮಾಡುವುದು ವಾಡಿಕೆ.
“ಧೈರ್ಯಂ’ ಚಿತ್ರತಂಡ ಒಂದು ಹೆಜ್ಜೆ ಮುಂದೆ ಹೋಗಿ, ಸ್ಟೋರಿಲೈನ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಸಾಮಾಜಿಕ ತಾಣಗಳಲ್ಲಿ ಲಕ್ಷಾಂತರ ಜನರು ಅದನ್ನು ಲೈಕ್ ಮಾಡುವಂತಾಗಿದೆ. ಈಗಾಗಲೇ ಇಂತಹ ಪ್ರಯತ್ನ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್‌ನಲ್ಲಾಗಿವೆ. ಆದರೆ, ಕನ್ನಡದಲ್ಲಿ ಮೊದಲ ಬಾರಿಗೆ ಸ್ಟೋರಿಲೈನ್ ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಪ್ರಯತ್ನ ಮಾಡಿದ್ದು “ಧೈರ್ಯಂ’.
ಯು ಟ್ಯೂಬ್‌ನಲ್ಲಿ “ಧೈರ್ಯಂ’ ಚಿತ್ರದ ಮೋಷನ್ ಪೋಸ್ಟರ್ ಕ್ಲಿಕ್ ಮಾಡಿದರೆ, ಅಲ್ಲಿ ಅಜೇಯ್ ರಾವ್ ರಗಡ್ ಲುಕ್‌ನಲ್ಲಿರುವ ಒಂದಷ್ಟು ಫೋಟೋಗಳು ಹರಿದಾಡುತ್ತವೆ. ಅಷ್ಟೇ ಅಲ್ಲ, ಅವರದೇ ಧ್ವನಿಯಿಂದ ಜಬರ್‌ದಸ್ತ್ ಡೈಲಾಗ್‌ಗಳೂ ಕೇಳಿಸುತ್ತವೆ. ಅದಕ್ಕೆ ಸರಿಹೊಂದುವ ಹಿನ್ನೆಲೆ ಸಂಗೀತವೂ ಕೇಳಿಸುತ್ತಾ ಹೋಗುತ್ತದೆ.
“ಮನಿ ಮನಿ ಮನಿ, ಇದು ದುಡ್ಡಿನ ದುನಿಯಾ. ಇಲ್ಲಿ ಎಲ್ಲರಿಗೂ ದುಡ್ಡು ಬೇಕು. ಮನುಷ್ಯ ಹುಟ್ಟೋಕು ದುಡ್ಡು ಬೇಕು, ಸತ್ತಮೇಲೂ ಮಣ್ಣಿಗೋಕೋಕು ದುಡ್ಡು ಬೇಕು. ದುಡ್ಡಿದ್ರೆ, ಪ್ರೀತ್ಸೋಳು ಹತ್ತಿರ ಬರ್ತಾಳೆ. ಸ್ನೇಹಿತರು ಜತೆಗಿರ್ತಾರೆ. ದುಡ್ಡಿಲ್ಲಾಂದ್ರೆ, ಹೆಂಡತಿನೂ ಬೆನ್ನು ಹಾಕಿ ಮಲಕ್ಕೊತ್ತಾಳೆ. ನಿಯತ್ತಿನಿಂದ ದುಡಿಯೋನಿಗೆ ಮಾತ್ರ ದುಡ್ ಒಲಿಯುತ್ತೆ ಅನ್ನೋದು ವೇದಾಂತ. ನೀತಿಗೆಟ್ರೂ ಪರವಾಗಿಲ್ಲ ದುಡ್ ಮಾಡ್ಬೇಕು ಅನ್ನೋದು ನನ್ನ ಸಿದ್ಧಾಂತ. ಐ ಯಾಮ್ ರೆಡಿ ಟು ಡು ಎನಿಥಿಂಗ್ ಫಾರ್ ಮನಿ …’
ಎಂಬ ಈ ಡೈಲಾಗ್‌ಗಳು ಸಖತ್ ಸೌಂಡು ಮಾಡುತ್ತಿವೆ ಅಜೇಯ್ ರಾವ್ ಖಡಕ್ ಲುಕ್‌ನಲ್ಲಿ ಮಾಸ್ ಹೀರೋ ಆಗಿರುವ ಈ ಚಿತ್ರವನ್ನು ಶಿವತೇಜಸ್ ನಿರ್ದೇಶಿಸಿದ್ದಾರೆ. ಕೆ ರಾಜು ಈ ಸಿನಿಮಾದ ನಿರ್ಮಾಪಕರು. ನಾಯಕಿಯಾಗಿ ಅದಿತಿ ನಟಿಸಿದ್ದಾರೆ. ಎಮಿಲ್ ಸಂಗೀತ ಮತ್ತು ಶೇಖರ್ ಚಂದ್ರು ಅವರ ಛಾಯಾಗ್ರಹಣವಿದೆ.