Advertisement

ಬಾಲ ಸಿಕ್ಕಿ ಹಾಕಿಕೊಂಡಿರುವುದೊಂದೇ ಅಡ್ಡಿ!

12:30 AM Nov 28, 2020 | sudhir |

“ಇವತ್ತು ಒಂದು ಕಥೆ ಹೇಳಿ’
ಝೆನ್‌ ಗುರುಗಳ ಬಳಿ ಶಿಷ್ಯರು ಬೇಡಿ ದರು. “ಆಗಬಹುದು. ಆದರೆ ಕಥೆಯ ಕೊನೆಯಲ್ಲಿ ನಾನೊಂದು ಪ್ರಶ್ನೆ ಕೇಳು ತ್ತೇನೆ, ಉತ್ತರಿಸಬೇಕು’ ಎಂದು ಗುರು ಗಳು ಷರತ್ತು ವಿಧಿಸಿದರು. “ಆದೀತು’ ಎಂದರು ಶಿಷ್ಯರು.

Advertisement

ಒಂದಾನೊಂದು ಊರಿನಲ್ಲಿ ಒಂದು ಕೊಬ್ಬಿದ ಕೋಣ ಇತ್ತು. ಪ್ರತೀ ದಿನವೂ ಅದು ಮೇಯುವುದಕ್ಕಾಗಿ ಹೊಲದತ್ತ ಹೋಗುವಾಗ ದಾರಿಯಲ್ಲಿ ಒಂದು ಗುಡಿಸಲಿನ ಮುಂದಿನಿಂದ ಹಾದು ಹೋಗ ಬೇಕಿತ್ತು. ಆ ಗುಡಿಸಲಿನ ಛಾವಣಿಯ ಮೇಲೆ ಹಲವಾರು ಬೈಹುಲ್ಲಿನ ಸೂಡಿಗಳನ್ನು ಪೇರಿಸಿಟ್ಟಿದ್ದರು.

ಕೋಣ ದಿನವೂ ಕೊರಳು ಎತ್ತರಿಸಿ ಆ ಬೈಹುಲ್ಲಿನ ಸೂಡಿಗಳು ಎಟಕುತ್ತವೆಯೇ ಎಂದು ನೋಡುವುದಿತ್ತು. ಜತೆಗೆ, ಛಾವ ಣಿಯ ಮೇಲೆಯೇ ಇಷ್ಟು ಸೂಡಿ ಇರಿಸಿದ್ದಾರೆ ಎಂದಾದರೆ ಗುಡಿಸಲಿನ ಒಳಗೆ ಇನ್ನಷ್ಟು ಬೈಹುಲ್ಲು ಇರಲೇಬೇಕು ಎಂದೂ ಯೋಚಿಸುತ್ತಿತ್ತು ಅದು. ಆದರೆ ಗುಡಿಸಲಿಗೆ ಇದ್ದುದು ಒಂದೇ ಕಿಟಕಿ; ಅದು ಕೂಡ ದಿನವೂ ಮುಚ್ಚಿಕೊಂಡಿರು ತ್ತಿತ್ತು. ದಿನಗಳು ಹೀಗೆಯೇ ಹೊರಳುತ್ತಿದ್ದವು.

ಒಂದು ದಿನ ಕೋಣ ಎಂದಿನಂತೆ ಮೇಯಲು ಹೊರಟು ಗುಡಿಸಲಿನ ಬಳಿ ಬಂದಾಗ ಕಿಟಕಿಯನ್ನು ಕಂಡು ಅದರ ಕಣ್ಣುಗಳು ಮಿರಿಮಿರಿ ಮಿನುಗಿದವು. ಏಕೆಂದರೆ ಅಂದು ಕಿಟಕಿ ತೆರೆದಿತ್ತು. ಕೋಣ ತನ್ನ ಕೊಂಬುಗಳು ಕಿಟಕಿಯ ಸರಳುಗಳ ನಡುವೆ ಸಿಕ್ಕಿ ಹಾಕಿಕೊಳ್ಳದಂತೆ ಮೆಲ್ಲನೆ ಒಳಗೆ ಇಣುಕಿತು. ಅಲ್ಲಿ ನೋಡಿದರೆ, ಅದರೆಣಿಕೆ ನಿಜವಾಗಿತ್ತು; ಬೈಹುಲ್ಲು ಸೂಡಿಗಳ ರಾಶಿಯೇ ಅಲ್ಲಿತ್ತು. ಕೋಣ ಇನ್ನಷ್ಟು ಎಚ್ಚರಿಕೆಯಿಂದ ತಲೆಯನ್ನು ಕಿಟಕಿಯ ಒಳಕ್ಕೆ ತೂರಿಸಿತು. ಉಹ್ಹುಂ, ಬೈಹುಲ್ಲು ಎಟುಕ ಲೊಲ್ಲದು. ಅದು ಮತ್ತಷ್ಟು ತಿಣುಕಾಡಿ ಮುಖ ಮತ್ತು ಮುಂಗಾಲು ಗಳನ್ನೂ ಒಳಕ್ಕೆ ತೂರಿಸಿತು. ಇಲ್ಲ, ಬೈಹುಲ್ಲು ರಾಶಿ ಇನ್ನೂ ದೂರವಿದೆ. ಮತ್ತೂ ಒದ್ದಾಡಿ ಎದೆ, ಹೊಟ್ಟೆ, ಹಿಂಗಾಲುಗಳನ್ನೂ ಒಳಕ್ಕೆ ತಂದಿತು. ಈಗ ಕೋಣ ಪೂರ್ತಿಯಾಗಿ ಗುಡಿಸಲಿನ ಒಳಗಿದೆ. ಆದರೂ ಬೈಹುಲ್ಲು ರಾಶಿ ಎಟಕುತ್ತಿಲ್ಲ. ಯಾಕೆಂದರೆ, ಬಾಲ ಸಿಕ್ಕಿಹಾಕಿಕೊಂಡಿದೆ.

ಗುರುಗಳು ಕಥೆಯನ್ನು ಇಲ್ಲಿಗೆ ನಿಲ್ಲಿಸಿ, “ಇದು ಸಾಧ್ಯವೇ’ ಎಂದು ಪ್ರಶ್ನಿಸಿದರು.

Advertisement

ಶಿಷ್ಯರು, “ಸಾಧ್ಯವೇ ಇಲ್ಲ. ಕೋಣನ ದಢೂತಿ ದೇಹ ಗುಡಿಸಲಿನ ಒಳಗೆ ತೂರಿದೆ. ಬಾಲ ಪುಟ್ಟದು, ಅದು ಸಿಕ್ಕಿಹಾಕಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ’ ಎಂದರು. ಗುರುಗಳು “ನೀವೂ ಕೋಣಗಳಂತೆಯೇ’ ಎಂದು ಕಥೆ ಮುಗಿಸಿದರು.

ಭಗವಾನ್‌ ಬಾಹುಬಲಿಯ ಜೀವನ ದಲ್ಲಿ ಒಂದು ಪ್ರಸಂಗ ಬರುತ್ತದೆ. ಅಣ್ಣ ಭರತ ನೊಂದಿಗೆ ಯುದ್ಧ ಮಾಡಿ ಗೆದ್ದ ಸಂದರ್ಭದಲ್ಲಿ ಬಾಹುಬಲಿಗೆ ವೈರಾಗ್ಯ ಮೂಡುತ್ತದೆ. ನಿಂತ ನಿಲು ವಿನಲ್ಲಿಯೇ ಆತ 14 ವರ್ಷಗಳ ಕಠಿನ ತಪ ಶ್ಚರ್ಯೆ ಕೈಗೊಳ್ಳುತ್ತಾನೆ. ಆದರೂ ಅವನಿಗೆ ಕೇವಲ ಜ್ಞಾನ ಪ್ರಾಪ್ತಿ ಆಗುವುದಿಲ್ಲ. ಕೊನೆಗೆ “ಅಣ್ಣನಿಗೆ ತಲೆ ಬಾಗಲಾರೆ ಎಂಬ ಕ್ಲೇಶ ನಿನ್ನ ಮನದಲ್ಲಿದೆ. ಅದು ನೀಗಿ ದರೆ ಕೇವಲ ಜ್ಞಾನ ಪ್ರಾಪ್ತಿ ಯಾಗುತ್ತದೆ’ ಎಂದು ಅಶರೀರವಾಣಿಯಾಯಿತು. ಆ ಒಂದು ಸಣ್ಣ ಅಡ್ಡಿ ನೀಗಿದೊಡನೆಯೇ ಬಾಹುಬಲಿಗೆ ಜ್ಞಾನೋದಯವಾಯಿತು.

ನಮ್ಮೆಲ್ಲರಿಗೆ ಇರುವ ತೊಂದರೆಯೂ ಇದುವೇ. ಬದುಕಿನ ಒಂದು ಆಯಾಮ ದಿಂದ ಇನ್ನೊಂದು ಆಯಾಮಕ್ಕೆ ಹೊರಳಿ ಕೊಳ್ಳುವಾಗ ಯಾವುದೋ ಒಂದು ಸಣ್ಣ ಎಳೆ ಮುಂದಕ್ಕೆ ಹೋಗಲು ಆಗದಂತೆ ಹಿಡಿದಿ ಡುತ್ತದೆ. ಗಾಢವಾದ ಒಂದು ನೆನಪು, ದಿನವೂ ಮಲಗುತ್ತಿದ್ದ ಹಾಸಿಗೆ, ಕಲಿತ ಒಂದು ಸಂಗತಿ… ಹೀಗೆ ನಮಗೆ ಗೊತ್ತೇ ಇಲ್ಲದ ಹಾಗೆ ಒಂದು ಸಣ್ಣ ಎಳೆ ಕಟ್ಟಿ ಹಾಕುತ್ತದೆ.
ಇಡೀ ದೇಹ ಕಿಟಕಿಯ ಮೂಲಕ ತೂರಿ ಒಳಗೆ ಹೋದರೂ ಬಾಲ ಸಿಕ್ಕಿ ಹಾಕಿ ಕೊಳ್ಳುವುದು ಹೀಗೆ. ಇದು ಬಾಲ ಕತ್ತರಿಸುವ ಸಮಯ…

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next