Advertisement
ಅನೇಕ ಬಾರಿ ಅವರು ಕಾಣದಿದ್ದಾಗ ಆಕೆ ಚಡಪಡಿಸಿದ್ದುಂಟು. ಅವರನ್ನು ಯಾರಾದರೂ ಈ ನಗರದಲ್ಲಿ ಬಿಟ್ಟು ಹೋಗಿರುವರೆ? ಅವರ ಹಿಂದೆ ಯಾರಾದರೂ ಇದ್ದಾರೆಯೇ? ಆಕೆಯ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ಈ ಪ್ರಶ್ನೆಗಳಿಗೆ ಉತ್ತರ ಎಂದು ಸಿಗುವುದೋ ಕಾತುರದಿಂದ ಕಾಯುತ್ತಿರುವಾಗ, ಆ ಜೋಡಿ ಇದ್ದಕ್ಕಿದ್ದಂತೆ ಅಲ್ಲಿಂದ ಕಣ್ಮರೆಯಾಯಿತು.
Related Articles
“”ಆದರೆ ನೀನು ಏನೂ ಕೇಳುವುದೇ ಇಲ್ಲ?”
“”ನಾನು ಕೇಳುವುದಿಲ್ಲ. ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತೇನೆ” ಚುಟುಕಾಗಿ ಉತ್ತರಿಸಿದಳು. ಸುಮತಿ ನೂರರ ನೋಟನ್ನು ನೀಡಿದಳು. ಬೇಡವೆಂದು ಮುಖ ತಿರುಗಿಸಿದಳು. ನಂತರ ಐವತ್ತರ ನೋಟನ್ನು ನೀಡಿದಾಗ ಮನಸ್ಸಿಲ್ಲದ ಮನಸ್ಸಿನಿಂದ ತೆಗೆದುಕೊಂಡಳು. ಸುಮತಿ ಸಲಿಗೆಯಿಂದ ಮತ್ತೆ ಪ್ರಶ್ನಿಸಿದಳು, “”ಅಜ್ಜ ಹೇಗೆ ಸತ್ತರು?”
ಅಜ್ಜಿ ಮೊದಲು ಸಂಶಯಗೊಂಡವಳಂತೆ ಕಂಡರೂ ನಂತರ ಹಿಂಜರಿಯದೆ ಉತ್ತರಿಸಿದಳು, “”ನಾನು ಮೈಸೂರಿನವಳು, ನನ್ನ ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದೇನೆ. ಮಕ್ಕಳಿಗೆ ಭಾರವಾಗಿರಬಾರದೆಂದು ಹೀಗೆ ಊರೂರು ಸುತ್ತುತ್ತಿದ್ದೆವು. ಆಗಾಗ ಮಕ್ಕಳ ಹತ್ತಿರ ಹೋಗಿ ಇದ್ದು ಬರುತ್ತೇವೆ. ಅವರು ನಮ್ಮನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ” ಎಂದಳು. ಕೊನೆಯ ಸಾಲನ್ನು ಪದೇಪದೇ ಹೇಳುತ್ತಿದ್ದಳು.
Advertisement
“”ಎಲ್ಲಿಯಾದರೂ ಆಶ್ರಮಕ್ಕೆ ಸೇರಬಾರದೆ?”ಸುಮತಿಯ ಬಾಯಿಯಿಂದ ಅವಳಿಗರಿವಿಲ್ಲದಂತೆ ಮಾತು ಹೊರಬಂತು. ಅದು ಅಜ್ಜಿಯ ಕಿವಿಗೆ ಬಿದ್ದದ್ದೇ ತಡ ಆಕೆ ನೀಡಿದ ಐವತ್ತರ ನೋಟನ್ನು ಸುಮತಿಯ ಮುಖಕ್ಕೆ ಎಸೆದಳು. ಆಕೆ ದಿಗಿಲುಗೊಂಡು ಅತ್ತಿತ್ತ ನೋಡಿದಳು. ಯಾರೂ ನೋಡುತ್ತಿಲ್ಲವೆಂದು ಗೊತ್ತಾದಾಗ ಸಾವರಿಸಿಕೊಂಡು ಕೆಳಗೆ ಬಿದ್ದ ನೋಟನ್ನು ಎತ್ತಿಕೊಂಡಳು. “”ಆಶ್ರಮವಂತೆ… ಆಶ್ರಮ. ಹಾಗಿದ್ದರೆ ನೀನು ಅಲ್ಲಿಂದ ಬಂದವಳೇ. ಹಣ ಕೊಡುವಾಗಲೇ ಅಂದುಕೊಂಡೆ. ಆವತ್ತು ಒಬ್ಬ ಹಾಗೆ ಮಾಡಿದ. ಆಶ್ರಮಕ್ಕೆ ಸೇರಿಸುತ್ತೇನೆಂದು ಕರೆದುಕೊಂಡು ಹೋದ. ಅಲ್ಲಿ ನಮಗೆ ಮಲಗಲು ನಿದ್ರೆ ಮಾತ್ರೆ ಕೊಡುತ್ತಾರೆ. ಅದನ್ನು ಕುಡಿದೇ ನನ್ನ ಗಂಡ ಸತ್ತ. ಅಲ್ಲಿದ್ದ ಅನೇಕರು ಆ ಮಾತ್ರೆಯನ್ನು ಟಾಯ್ಲೆಟ್‌ನೊಳಗೆ ಹಾಕುತ್ತಾರೆ. ನಾನೂ ಹಾಗೆ ಮಾಡುತ್ತಿದ್ದೆ. ನಂತರ ನಾವು ಸ್ವಲ್ಪ ಮಂದಿ ಅಲ್ಲಿಂದ ತಪ್ಪಿಸಿಕೊಂಡು ಬಂದೆವು. ಅದಕ್ಕೆ ಬದುಕಿ ಉಳಿದ್ದೇನೆ” ಎಂದಳು. ಕಂಡಕಂಡಲ್ಲಿ ಬಿಟ್ಟಿ ಸಲಹೆ ಕೊಡುವುದು ಸರಿಯಲ್ಲ ಎಂದು ಸುಮತಿಗೆ ಸ್ಪಷ್ಟ ಅರಿವಾಯಿತು. ಅಜ್ಜಿ, “”ಹೋಗು ಇಲ್ಲಿಂದ” ಎಂದು ಗದರಿದಳು. ನಂತರದ ಮಾತಿಗೆ-ಸಾಂತ್ವಾನಕ್ಕೆ ಅಲ್ಲಿ ಅವಕಾಶವಿರಲಿಲ್ಲ. ಅಜ್ಜಿಯ ಮಾತುಗಳು ನಂಬುವಂತಹುದೇ. ನಂಬಿಕೆ-ಅಪನಂಬಿಕೆಗಳ ಮಧ್ಯೆ ಗುದ್ದಾಟ ಆಕೆಯ ಮನದಲ್ಲಿ ಸಾಗುತ್ತಿತ್ತು. ಅಜ್ಜಿಯ ಬದುಕಿನ ಬಗೆಗಿನ ಪ್ರೀತಿ, ಉತ್ಸಾಹ ಆಕೆಯನ್ನು ನಾಚುವಂತೆ ಮಾಡಿತು. ಕೈಯಲ್ಲಿದ್ದ ನೋಟನ್ನು ಅಜ್ಜಿಯ ಮಡಿಲಿಗಿಟ್ಟು ಹಿಂದಿರುಗಿ ನೋಡದೆ ಆಕೆ ನಡೆದಳು. ಮನಸ್ಸು ಭಾರವಾಗಿತ್ತು. ಮತ್ತೆ ಅಜ್ಜಿ ಅಲ್ಲಿ ಕಾಣಲಿಲ್ಲ. ಆಕೆಯ ಕಣ್ಣುಗಳು ಅಜ್ಜಿಯನ್ನು ಅರಸುತ್ತಿದ್ದರೂ ಪಶ್ಚಾತ್ತಾಪದ ಛಾಯೆ ಮಾತ್ರ ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ನನ್ನಿಂದಲೇ ಅಜ್ಜಿ ಈ ಊರುಬಿಟ್ಟು ಹೋದಳೆ? ಈ ಘಟನೆ ಆಗಿ ಒಂದು ವರ್ಷವಾಗಿರಬೇಕು. ಆಕೆಗೆ ಅಜ್ಜಿ ಮತ್ತೆ ಕಂಡಳು. ಆ ಊರಲ್ಲಲ್ಲ ಬೇರೆಯೇ ಊರು. ಆದರೆ, ಪ್ರಸಿದ್ಧ ದೇವಸ್ಥಾನದ ಎದುರು. ಅದೇ ಕೋಲು, ಬಟ್ಟೆಗಂಟು, ಬುತ್ತಿ. ಆದರೆ, ಶರೀರ ನಿಶ್ಶಕ್ತವಾಗಿತ್ತು. ವಾಲುತ್ತ, ವಾಲುತ್ತ ರಸ್ತೆಯಲ್ಲಿ ನಡೆಯುತ್ತಿದ್ದ ಅಜ್ಜಿಯನ್ನು ಹೋಗಿ ಹಿಡಿದುಕೊಳ್ಳಬೇಕೆನಿಸಿತು. ಈ ದೇವಸ್ಥಾನದಲ್ಲಿ ಹಗಲು-ರಾತ್ರಿ ಅನ್ನದಾನದ ವ್ಯವಸ್ಥೆ ಇದೆ. ಎರಡು ಹೊತ್ತಿನ ಊಟಕ್ಕೇನೂ ತೊಂದರೆ ಇಲ್ಲ. ಆಕೆಯನ್ನು ಮಾತನಾಡಿಸಲೆ? ಮತ್ತೆ ಅಳುಕಾಯಿತು. ಈ ಅಜ್ಜಿ ತನ್ನವರ ಬಳಿಗೂ ಹೋಗುವುದಿಲ್ಲ. ಯಾರಾದರೂ ಏನಾದರೂ ನೀಡಿದರೆ ತಿನ್ನುವುದು, ದೇವಸ್ಥಾನಗಳಲ್ಲಿ ನಡೆಯುವ ಅನ್ನದಾನಗಳೇ ಇವರ ಹಸಿವನ್ನು ನೀಗಿಸಿದ್ದುಂಟು. ದಕ್ಷಿಣಕನ್ನಡದ ದೇವಾಲಯಗಳು ಅನ್ನದಾನಕ್ಕೆ ಹೆಸರುವಾಸಿ. ಅದಕ್ಕಾಗಿ ಅಜ್ಜಿ ಅಲ್ಲೇ ಊರೂರು ಅಲೆಯುತ್ತಿರುವುದಂತೂ ಸತ್ಯ. ಈ ಅಜ್ಜಿ , ತಾನು ಮಕ್ಕಳ ಬಳಿ ಹೋಗಿ ಬರುತ್ತೇನೆ, ಅವರು ನನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ ಎಂದಿದ್ದು ಸುಳ್ಳಾಗಿರಬಹುದೇ? ತನಗೆ ಯಾರ ಕನಿಕರ, ಕಾಳಜಿ ಅಗತ್ಯವಿಲ್ಲ ಎಂದು ತೋರಿಸಲು ಹೃದಯ ಕಲ್ಲಾಗಿಸಿ ಹೇಳಿದ ಮಾತುಗಳಾಗಿರಬಹುದು. ಮತ್ತೆ ತನ್ನದೇ ಊರಲ್ಲಿ ಸುಮತಿಗೆ ಅಜ್ಜಿಯ ದರ್ಶನವಾಯಿತು. ಈ ಅಜ್ಜಿ ಬೈದರೆ ಬೈಯ್ಯಲಿ ಎಂದುಕೊಂಡು ಸುಮತಿ ಹೋಗಿ ಮಾತನಾಡಿಸಿದಳು. ಅಜ್ಜಿ ಕೈ ಚಾಚುತ್ತಿರಲಿಲ್ಲ. ದಂಡೆ ಹಿಡಿದು ಕೈಚರ್ಮ ಸವೆದು ಗಾಯವಾಗಿತ್ತು. ಅಜ್ಜಿ ಬೈಯಲಿಲ್ಲ. ಬಳಿ ಕರೆದು ಒಂದು ಚೀಟಿ ನೀಡಿದರು. “”ಇದು ನನ್ನ ಮಗನ ಮನೆ ವಿಳಾಸ. ನಾನು ತೀರಿಕೊಂಡರೆ, ಈ ವಿಳಾಸಕ್ಕೆ ಒಂದು ಪತ್ರ ಬರೆದುಬಿಡು ಮಗಾ. ಆದರೆ, ಅದಕ್ಕೆ ಮೊದಲೇ ನಾನಿಲ್ಲಿ ಇದ್ದೇನೆ ಎಂದು ಹೇಳಬೇಡ. ನಿನ್ನ ದಮ್ಮಯ್ಯ..” ಎಂದು ಹೇಳಿದರು.
ಸುಮತಿ ಮೌನವಾಗಿ ಚೀಟಿ ತೆಗೆದುಕೊಂಡಳು. ವನಿತಾ ಪಿ.