ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ಕಡವ’ ಚಿತ್ರ ಇತ್ತೀಚೆಗೆ ಸೆಟ್ಟೇರಿದೆ. “ದಿಲ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನೃತ್ಯ ಸಂಯೋಜಕನಾಗಿ ಪರಿಚಯವಾಗಿ, ಇಲ್ಲಿಯವರೆಗೆ ಸುಮಾರು ಇನ್ನೂರಕ್ಕೂ ಹೆಚ್ಚಿನ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಅಕುಲ್. ಎನ್ “ಕಡವ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಜಿಮ್ ರಘು ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದು, ಭುವನ ಗೌಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಉಳಿದಂತೆ ಚಿತ್ರದಲ್ಲಿ ಬಲ ರಾಜವಾಡಿ, ಪದ್ಮಜಾ ರಾವ್ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಇನ್ನು ಚಿತ್ರದ ಟೈಟಲ್ ಬಗ್ಗೆ ಮಾತನಾಡಿದ ನಿರ್ದೇಶಕ ಅಕುಲ್ ಎನ್, “ಕಡವ’ ಎಂಬ ಪದಕ್ಕೆ ಹುಂಬ, ಧೈರ್ಯವಂತ ಎಂಬ ಅರ್ಥವಿದೆ. ಸಂಸ್ಕೃತದಲ್ಲಿ ದೇವಕನ್ಯೆಗೂ “ಕಡವ’ ಎಂದು ಕರೆಯುತ್ತಾರೆ. ಚಿತ್ರದ ನಾಯಕ ಮತ್ತು ನಾಯಕಿ ಇಬ್ಬರಿಗೂ ಹೋಲಿಕೆಯಾಗುವುದರಿಂದ ಇದೇ ಹೆಸರನ್ನು ಚಿತ್ರದ ಟೈಟಲ್ ಆಗಿ ಇಟ್ಟುಕೊಂಡಿದ್ದೇವೆ.
ತಾಂಡಾದಲ್ಲಿ ವಾಸವಾಗಿರುವ ಹುಡುಗನೊಬ್ಬ ಹೇಗೆ, ಅಡೆತಡೆಗಳನ್ನು ದಾಟಿ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾನೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ’ ಎಂದರು. ಚಿತ್ರದ ನಾಯಕ ಜಿಮ್ ರಘು, ತಾಂಡಾದ ಹುಂಬ ಹುಡುಗನಾಗಿ, ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ರಘು, “ಇದೊಂದು ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಚಿತ್ರ.
ಒಂದು ಚಿತ್ರದಲ್ಲಿ ಪ್ರೇಕ್ಷಕರು ಏನೇನು ನಿರೀಕ್ಷಿಸುತ್ತಾರೋ, ಆ ಎಲ್ಲಾ ಅಂಶಗಳೂ ಈ ಚಿತ್ರದಲ್ಲಿದೆ. ಭರ್ಜರಿ ಆ್ಯಕ್ಷನ್ಸ್, ಮೆಲೋಡಿ ಸಾಂಗ್, ರಿಚ್ ಮೇಕಿಂಗ್ ಎಲ್ಲವೂ ಚಿತ್ರದಲ್ಲಿದೆ. ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ’ ಎಂದರು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ನವ ಸಂಗೀತ ನಿರ್ದೇಶಕ ವಿಶಾಲ್ ಚಕ್ರವರ್ತಿ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಗೌಸ್‌ಪೀರ್ ಈ ಎಲ್ಲಾ ಹಾಡುಗಳಿಗೆ ಸಾಹಿತ್ಯ ಒದಗಿಸುತ್ತಿದ್ದಾರೆ.
ಚಿತ್ರದ ದೃಶ್ಯಗಳಿಗೆ ಭರತ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದ ಸಾಹಸ ದೃಶ್ಯಗಳಿಗೆ ಪ್ರೇಮ್ ಸಾಗರ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. “ಕಳಸ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ರಘು. ಜೆ ಮತ್ತು ಉದ್ಯಮಿ ಬಿ. ಎಂ ರಾಮಚಂದ್ರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿಕ್ಕಮಗಳೂರು, ಬೆಂಗಳೂರು, ಹೆಚ್.ಡಿ ಕೋಟೆ ಸುತ್ತಮುತ್ತ ಸುಮಾರು 60 ದಿನಗಳ ಕಾಲ “ಕಡವ’ ಚಿತ್ರದ ಚಿತ್ರೀಕರಣ ನಡೆಯಲಿದೆ.