Advertisement

ಜಾತಕ ಕತೆಗಳು: ಕುಳ್ಳ ಬಿಲ್ಲುಗಾರ

09:50 AM Feb 17, 2020 | mahesh |

ಒಂದು ಊರಿನಲ್ಲಿ ಸುಕಾಸ ಎಂಬ ಕುಳ್ಳಗಿನ ಬಿಲ್ಲುಗಾರನಿದ್ದ. ಅವನ ಬೆನ್ನು ಗೂನಾಗಿತ್ತು. ಆದರೆ ಬಿಲ್ವಿದ್ಯೆಯಲ್ಲಿ ಅವನು ಬಹಳ ಚುರುಕಾಗಿದ್ದ. ಇಷ್ಟು ಪ್ರತಿಭೆ ಇದ್ದರೂ ತನಗೆ ಸೈನ್ಯ ಸೇರಿ ಕೆಲಸ ಮಾಡುವ ಅವಕಾಶ ಸಿಗುವುದಿಲ್ಲವಲ್ಲಾ ಎಂಬ ಬೇಸರ ಅವನ್ನನ್ನು ಕಾಡುತ್ತಿತ್ತು. ಒಂದು ದಿನ ಅವನು ದಾರಿಯಲ್ಲಿ ನಡೆಯುತ್ತಿದ್ದಾಗ, ಪ್ರಕಾಶ ಎಂಬ ಕಟ್ಟುಮಸ್ತಾದ ವ್ಯಕ್ತಿಯೊಬ್ಬ, ಗುಂಡಿ ತೋಡುವ ಕೆಲಸ ಮಾಡುತ್ತಿದ್ದ. ಆಗ ಸುಕಾಸನಿಗೆ ಹೊಸ ವಿಚಾರ ಹೊಳೆಯಿತು.

Advertisement

ಪ್ರಕಾಶನನ್ನು ಭೇಟಿಯಾದ ಸುಕಾಸ, “ನೋಡು ನೀನು ಎತ್ತರವಾಗಿ ಒಳ್ಳೆಯ ಆಳ್ತನ ಹೊಂದಿದ್ದಿ. ನಾನು ಕುಳ್ಳಗಿರುವೆ. ಆದರೆ ನನಗೆ ಬಿಲ್ವಿದ್ಯೆ ಚೆನ್ನಾಗಿ ಗೊತ್ತಿದೆ. ನೀನು ರಾಜನ ಬಳಿ ಹೋಗಿ ಸೇನೆಗೆ ಸೇರಿಸಿಕೊಳ್ಳುವಂತೆ ಮನವಿ ಮಾಡು. ರಾಜನು ನಿನಗೆ ಒದಗಿಸುವ ಕೆಲಸವನ್ನು ನಾನು ನಿಭಾಯಿಸುತ್ತೇನೆ. ನಿನಗೆ ರಾಜನು ಕೊಡುವ ಸಂಬಳ ಮತ್ತು ಪ್ರಶಸ್ತಿಯಲ್ಲಿ ಅರ್ಧದಷ್ಟು ನನಗೆ ಕೊಡು’.

ಪ್ರಕಾಶನಿಗೆ ಈ ಒಪ್ಪಂದ ಇಷ್ಟವಾಯಿತು. ಅವನು ರಾಜನನ್ನು ಭೇಟಿಯಾಗಿ, ತಾನು ಬಿಲ್ವಿದ್ಯೆಯಲ್ಲಿ ನಿಪುಣನೆಂದು ಹೇಳಿಕೊಂಡನು. ರಾಜನಿಗೆ ಪ್ರಕಾಶನ ಆಳ್ತನ ನೋಡಿಯೇ ಬಹಳ ಖುಷಿಯಾಯಿತು. ಆತನನ್ನು ಸೇನೆಗೆ ಸೇರಿಸಿಕೊಂಡ.  ಕೆಲವು ದಿನಗಳಲ್ಲಿ, ಹುಲಿಯೊಂದು ಕಾಡಿನ ಅಂಚಿಗೆ ಬಂದು ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಜನರು ರಾಜನಲ್ಲಿ ದೂರು ನೀಡಿದರು. ರಾಜನು, ಪ್ರಕಾಶನನ್ನು ಕರೆದು, “ಹುಲಿಯನ್ನು ಕೊಂದು ಜನರ ಸಮಸ್ಯೆ ಬಗೆಹರಿಸು’ ಎಂದು ಆಜ್ಞೆ ಮಾಡಿದರು. ಪ್ರಕಾಶನು, ಸುಕಾಸನನ್ನು ಕರೆದುಕೊಂಡು ಕಾಡಿಗೆ ಹೋದಾಗ, ಸುಕಾಸನೇ ಹುಲಿಯನ್ನು ಕೊಂದನು. ಸಮಸ್ಯೆ ಬಗೆಹರಿದುದನ್ನು ಕಂಡು ರಾಜನಿಗೆ ಖುಷಿಯಾಯಿತು. ಸೂಕ್ತ ಉಡುಗೊರೆಗಳನ್ನು ನೀಡಿ ಪ್ರಕಾಶನನ್ನು ಗೌರವಿಸಿದನು. ಪ್ರಕಾಶ ಮತ್ತು ಸುಕಾಸ ಉಡುಗೊರೆಗಳನ್ನು ಹಂಚಿಕೊಂಡು ಸಂಭ್ರಮಿಸಿದರು.

ಕೆಲವು ದಿನಗಳ ನಂತರ ಕಾಡುಕೋಣವೊಂದು ಊರಿಗೆ ನುಗ್ಗಿ ದಾಳಿ ಮಾಡಲಾರಂಭಿಸಿತು. ಈ ಸಾರಿಯೂ ರಾಜನು ಪ್ರಕಾಶನನ್ನು ಕರೆಸಿ, ಕೋಣವನ್ನು ಕೊಲ್ಲುವಂತೆ ಹೇಳಿದನು. ಎಂದಿನಂತೆ ಪ್ರಕಾಶ ಮತ್ತು ಸುಕಾಸ ಒಟ್ಟಾಗಿ ತೆರಳಿ, ಕೋಣವನ್ನು ಕೊಂದು ಹಾಕಿದರು. ರಾಜನಿಂದ ಬಂದ ಉಡುಗೊರೆಗಳನ್ನು ಹಂಚಿಕೊಂಡರು. ಆದರೆ ಅಷ್ಟರಲ್ಲಿ ಪ್ರಕಾಶನಿಗೆ ಬಹಳ ಜಂಭ ಬಂದಿತ್ತು. ರಾಜನಿಂದ ಉಡುಗೊರೆ ಪಡೆದ ಪ್ರಕಾಶನಿಗೆ ಎಲ್ಲರೂ ಸಲಾಂ ಹೊಡೆಯುತ್ತಿದ್ದರು. ಈ ಕುಳ್ಳ ಸುಕಾಸನಿಗೆ ತನ್ನ ಯಶಸ್ಸಿನಲ್ಲಿ ಪಾಲು ಕೊಡುವುದು ಅವನಿಗೆ ಇಷ್ಟವಾಗಲಿಲ್ಲ. ಅವನು ಸುಕಾಸನನ್ನು ಅತ್ಯಂತ ಒರಟಾಗಿ ನಡೆಸಿಕೊಳ್ಳಲು ಶುರು ಮಾಡಿದ. ಇದರಿಂದ ಸುಕಾಸನಿಗೆ ಬಹಳ ನೋವಾದರೂ ಮೌನವಾಗಿಯೇ ಇದ್ದ.

ಹೀಗಿರಲು, ರಾಜ್ಯದ ಮೇಲೆ ಶತ್ರರಾಜನೊಬ್ಬ ದಂಡೆತ್ತಿ ಬಂದ. ಇಡೀ ಸೇನೆಯೇ ಯುದ್ಧಕ್ಕೆ ಸಜ್ಜಾ ಯಿತು. ಹುಲಿಯನ್ನೂ, ಕಾಡುಕೋಣವನ್ನೂ ಕೊಂದ ಪ್ರಕಾಶನಿಗೆ ರಾಜನು ಪ್ರತ್ಯೇಕ ಆನೆಯನ್ನು ಕೊಟ್ಟು, ಉತ್ತಮ ಬಿಲ್ಲು ಬಾಣಗಳನ್ನು ಒದಗಿಸಿದ. ಪ್ರಕಾಶನಿಗೆ ನೆರವಾಗಲು, ಆನೆಯ ಹಿಂಭಾಗದಲ್ಲಿ ಸುಕಾಸನು ಕುಳಿತ. ಆನೆಯು ರಣರಂಗವನ್ನು ಪ್ರವೇಶಿಸುತ್ತಿದ್ದಂತೆಯೇ, ಪ್ರಕಾಶ ದೊಡ್ಡ ಸೇನೆಯನ್ನು ನೋಡಿ ನಡುಗಲಾರಂಭಿಸಿದ. ಸುಕಾಸ ಎಷ್ಟೇ ಧೈರ್ಯ ತುಂಬಿದರೂ ಪ್ರಕಾಶನಿಗೆ ಆನೆ ಮೇಲೆ ಕುಳಿತುಕೊಳ್ಳುವುದು ಸಾಧ್ಯವಾಗಲಿಲ್ಲ. ಅವನು ಆನೆಯಿಂದ ಕೆಳಕ್ಕೆ ಜಿಗಿದು ಓಡಲಾರಂಭಿಸಿದ. ಸುಕಾಸನು, ಶತ್ರುಗಳ ಮೇಲೆ ಬಾಣಗಳ ಮಳೆಗರೆದು, ವಿರೋಧಿ ಬಣದ ಸೇನಾ ನಾಯಕನನ್ನೇ ಕೊಂದು ಹಾಕಿದನು.

Advertisement

ಯುದ್ಧದಲ್ಲಿ ಆತನ ಶೌರ್ಯವನ್ನು ಎಲ್ಲರೂ ಬಣ್ಣಿಸಿದರು. ರಾಜನಿಗೂ ನಿಜವಿಷಯದ ಅರಿವಾಯಿತು.
“ಕುಳ್ಳನಾದರೂ ಪರವಾಗಿಲ್ಲ, ನೀನೇ ನನ್ನ ಸೇನೆಯ ನಾಯಕನಾಗಿರು’ ಎಂದು ರಾಜನು ಸುಕಾಸನಿಗೆ ನಾಯಕತ್ವ ಒದಗಿಸಿದ.

Advertisement

Udayavani is now on Telegram. Click here to join our channel and stay updated with the latest news.

Next