Advertisement

ಜಾತಕ ಕತೆಗಳು: ತಾನೊಂದು ಬಗೆದರೆ…

10:37 AM Feb 01, 2020 | mahesh |

ಒಂದು ಊರಿನಲ್ಲಿ ಸೋಮಲ ಮತ್ತು ದಾಂಡೀಲ ಎಂಬ ಇಬ್ಬರು ವರ್ತಕರಿದ್ದರು. ಇಬ್ಬರ ಬಳಿಯೂ ಸುಮಾರು 500 ಗಾಡಿಗಳಿದ್ದವು. ಅವರಿಬ್ಬರೂ ವ್ಯಾಪಾರಕ್ಕಾಗಿ ಸಾಮಾನುಗಳನ್ನು ಒಂದು ಊರಿನಿಂದ ಮತ್ತೂಂದು ಊರಿಗೆ ಹೋಗಬೇಕಾಗಿತ್ತು. ಇಬ್ಬರೂ ಸ್ಪರ್ಧಿಗಳಾದರೂ, ಪ್ರಯಾಣದ ಬಗ್ಗೆ ತುಸು ವಿಚಾರ ವಿನಿಮಯ ಮಾಡಿದರು. ಸೋಮಲ ಹೇಳಿದ: “”ನಾನು ಮೊದಲು ಪ್ರಯಾಣಿಸುತ್ತೇನೆ. ಇಬ್ಬರೂ ಒಟ್ಟಾಗಿ ಪ್ರಯಾಣಿಸಿದರೆ ದಾರಿಯಲ್ಲಿ ಗಾಡಿಗಳು ನಿಧಾನವಾಗಿ ಚಲಿಸಬೇಕಾಗಿ, ಪ್ರಯಾಣ ತಡವಾಗುತ್ತದೆ”. ಆದರೆ ಮನಸ್ಸಿನಲ್ಲಿ ಅವನು ಬೇರೆಯೇ ಯೋಚನೆ ಮಾಡಿದ್ದ. ಮೊದಲು ಪ್ರಯಾಣಿಸಿದರೆ, ದಾರಿ ಕೆಸರಾಗಿರುವುದಿಲ್ಲ. ದಾರಿ ಇಕ್ಕೆಲವೂ ಹಣ್ಣು ಹಂಪಲು, ಎತ್ತುಗಳಿಗೆ ಬೇಕಾದ ಹಸಿರು ಹುಲ್ಲು, ಸ್ವತ್ಛವಾದ ನೀರು ಸಿಗುವುದು. ಮೊದಲೇ ಮಾರುಕಟ್ಟೆ ತಲುಪಿ, ವ್ಯಾಪಾರ ಶುರು ಮಾಡಿಬಿಡಬಹುದು ಎಂಬುದು ಅವನ ಲೆಕ್ಕಾಚಾರವಾಗಿತ್ತು. ಸೋಮಲ ಮೊದಲು ಪ್ರಯಾಣಿಸುತ್ತೇನೆ ಎಂದಾಗ ದಾಂಡೀಲ ಮರುಮಾತಿಲ್ಲದೇ ಒಪ್ಪಿದ. ಅವನ ಮನಸ್ಸಿನಲ್ಲಿ ಬೇರೆಯೇ ಲೆಕ್ಕಾಚಾರವಿತ್ತು.

Advertisement

ಇವನು ಮೊದಲು ಹೋಗಿ ಮಾರುಕಟ್ಟೆಯಲ್ಲಿ ದರ ನಿಗದಿ ಮಾಡಲಿ. ನಾನು ಅದೇ ದರಕ್ಕೆ ಅಥವಾ ಹೆಚ್ಚಿನ ದರಕ್ಕೆ ಮಾರಾಟ ಮಾಡಬಹುದು. ಇವನ ಎತ್ತುಗಳು ದಾರಿಯಲ್ಲಿ ಬೆಳೆದ ಹುಲ್ಲು ಮೇಯಲಿ, ನಮ್ಮ ಎತ್ತುಗಳಿಗೆ ಎಳೆ ಚಿಗುರು ಹುಲ್ಲು ಸಿಗುವುದು. ಹೊಸ ಹಣ್ಣು ಹಂಪಲೂ ಸಿಗುತ್ತದೆ. ದಾರಿಯ ಅಡೆತಡೆಯನ್ನೆಲ್ಲ ಇವನ ಕೆಲಸದವರೇ ನಿವಾರಿಸಿಕೊಂಡಿರುತ್ತಾರೆ ಎಂದು ಬಗೆದ.

ಸೋಮಲನ ಪ್ರಯಾಣ ಆರಂಭವಾಯಿತು. ಕಾಡು ಹಾದಿಯನ್ನು ಬಹಳ ಕಷ್ಟದಲ್ಲಿ ಕ್ರಮಿಸಿದ ಬಳಿಕ, ಕಾಡಂಚಲ್ಲಿದ್ದ ಕೆ‌ಲವು ಜನರು ಸೋಮಲನಿಗೆ ಒಂದು ಸಲಹೆ ನೀಡಿದರು. “”ಇಲ್ಲಿಂದ ಮುಂದೆ ನೀರಿಲ್ಲ ಮರುಭೂಮಿ ಸಿಗುತ್ತದೆ. ಅಲ್ಲಿ ಕಳ್ಳರಿದ್ದಾರೆ. ಅವರು ನಿಮ್ಮ ದಾರಿ ತಪ್ಪಿಸುವ, ಕಳ್ಳತನ ಮಾಡುವ ಪ್ರಯತ್ನ ಮಾಡಬಹುದು. ಆದರೆ ನೀವು ಅವರ ಮಾತು ಕಿವಿಗೆ ಹಾಕಿಕೊಳ್ಳಬೇಡಿ”. ಸೋಮಲ ಒಪ್ಪಿದ.

ಮರುಭೂಮಿಯಲ್ಲಿ ಸ್ವಲ್ಪ ದೂರ ಸಾಗಿದಾಗ, ಇಬ್ಬರು ವ್ಯಕ್ತಿಗಳು ಎದುರಾದರು. “”ಯಾಕಿಷ್ಟು ದಣಿದಿದ್ದೀರ. ನಿಮ್ಮ ಎತ್ತುಗಳು ನೀರನ್ನು ಹೊತ್ತು ಎಳೆದು ದಣಿದಿವೆ. ನೋಡಿ ದೂರದ ದಿಗಂತದ ಬಳಿ ನೀರು ಕಾಣುತ್ತಿದೆಯಲ್ಲ. ಮತ್ಯಾಕೆ ಅಲ್ಲಿಯವರೆಗೆ ಈ ನೀರು ಹೊರುತ್ತೀರಿ. ಇಲ್ಲೇ ಚೆಲ್ಲಿದರೆ, ಪ್ರಯಾಣ ವೇಗವಾಗಿ ಸಾಗುವುದು” ಎಂದು ಸಲಹೆ ಮಾಡಿದರು. ಸೋಮಲನಿಗೆ ಈ ಮಾತು ಹೌದೆನಿಸಿತು. ಅವನು ನೀರನ್ನು ಚೆಲ್ಲಿದ. ಆದರೆ ದಿಗಂತದತ್ತ ಎಷ್ಟು ನಡೆದರೂ ನೀರು ಸಿಗಲಿಲ್ಲ. ತಂಡದ ಸದಸ್ಯರು, ಎತ್ತುಗಳು ನೀರಿಲ್ಲದೇ ದಣಿದು ಮಲಗಿದಾಗ, ಕಳ್ಳರು ದಾಳಿ ಮಾಡಿ ಎಲ್ಲವನ್ನೂ ಕಿತ್ತುಕೊಂಡುಹೋದರು. ಕೈ ಸಿಕ್ಕವರನ್ನೆಲ್ಲ ಕೊಚ್ಚಿ ಹಾಕಿದರು.

ಇತ್ತ ಕೆಲವು ತಿಂಗಳ ಬಳಿಕ ದಾಂಡೀಲ ತನ್ನ ತಂಡದವರ ಜೊತೆಗೆ ಪ್ರಯಾಣ ಬೆಳೆಸಿದ. ಅವನ ಪ್ರಯಾಣವೂ ಸುಖವಾಗಿಯೇನೂ ಇರಲಿಲ್ಲ. ಕಾಡಂಚಿನಲ್ಲಿ ಸಿಕ್ಕ ಕೆಲವರು ಅವನಿಗೆ ಕಳ್ಳರ ಕುರಿತು ಕಿವಿಮಾತು ಹೇಳಿದರು. ದಾಂಡೀಲ ಅವರಿಗೆ ವಂದಿಸಿದ. ಅವರು ಅದೇ ನೀರಿಲ್ಲದ ಮರುಭೂಮಿಯತ್ತ ಸಾಗಿದರು. ಮರುಭೂಮಿಯ ಕಳ್ಳರು ಸಜ್ಜನರಂತೆ ವೇಷ ಧರಿಸಿ ದಾಂಡೀಲನನ್ನು ಭೇಟಿಯಾದರು. ತಮ್ಮ ನಯವಾದ ಮಾತುಗಳಿಂದ ನೀರನ್ನು ಚೆಲ್ಲುವಂತೆ ಸಲಹೆ ಮಾಡಿದರು. ಆಗ ದಾಂಡೀಲ ಹೇಳಿದ: “”ಮತ್ತೂಂದು ವಸ್ತು ಸಿಗುವವರೆಗೆ ಇರುವ ವಸ್ತುವನ್ನು ಬಿಸಾಡುವುದು ವ್ಯಾಪಾರಿಗಳ ಲಕ್ಷಣವಲ್ಲ. ಆದ್ದರಿಂದ ನೀರು ಕಂಡ ಮೇಲೆ ಈ ನೀರನ್ನು ಚೆಲ್ಲುತ್ತೇವೆ” ಎಂದು ಮುಂದುವರೆದ. ರಾತ್ರಿ ಒಂದು ಕಡೆ ನೆಲೆಯಾಗಿ, ಊಟ ಮಾಡಿದ ಬಳಿಕ ಕೆಲವರನ್ನು ಪಹರೆಗೆ ನಿಲ್ಲಿಸಿದ. ಕಳ್ಳರಿಗೆ ದಾಳಿಮಾಡಲು ಅವಕಾಶವ ಸಿಗಲಿಲ್ಲ.

Advertisement

ಮರುದಿನ ಬೆಳಿಗ್ಗೆ ಅವರಿಗೆ ಸೋಮಲನ ತಂಡದವರು ದರೋಡೆಗೆ ಒಳಗಾದ ಜಾಗ ಕಾಣಿಸಿತು. ಅಲ್ಲಿ ಅಳಿದುಳಿದ ಸಾಮಾನುಗಳನ್ನು ತಮ್ಮ ಗಾಡಿಯಲ್ಲಿ ತುಂಬಿಸಿಕೊಂಡು ದಾಂಡೀಲ ಮುಂದುವರೆದ. “ತಾನೊಂದು ಬಗೆದರೆ, ದೈವ ಬೇರೆಯದೇ ಬಗೆಯುತ್ತದಲ್ಲ’ ಎಂದು ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತ ಮಾರುಕಟ್ಟೆ ತಲುಪಿದ.

Advertisement

Udayavani is now on Telegram. Click here to join our channel and stay updated with the latest news.

Next