ಕನ್ನಡದಲ್ಲಿ ಉತ್ತಮ ಕಥೆಗಾರರು, ಬರಹಗಾರರನ್ನು ಹುಡುಕುವುದಕ್ಕಾಗಿಯೇ “ರೈಟ್ ಕರ್ನಾಟಕ’ ಎಂಬ ವೇದಿಕೆಯೊಂದು ಸಿದ್ಧವಾಗಿದೆ. ನಿಮಗೇನಾದರೂ ಕಥೆ ಬರೆಯುವ ಹವ್ಯಾಸ – ಆಸಕ್ತಿಯಿದ್ದರೆ, ಅದನ್ನು ಸಿನಿಮಾ ಮಾಡಬಹುದು ಎಂದು ನಿಮಗನಿಸಿದ್ದರೆ, ಆ ಕಥೆಯನ್ನು 2000 ಪದಗಳಿಗೆ ಮೀರದಂತೆ “ರೈಟ್ ಕರ್ನಾಟಕ’ಕ್ಕೆ ಬರೆದು ಕಳುಹಿಸಬಹುದು.
“ನಿಮ್ಮ ಕಥೆ ಕೇಳುವುದಕ್ಕೆ ನಾವಿದ್ದೇವೆ’ ಎನ್ನುವ ಹೆಸರಿನಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ನಿಮ್ಮ ಕಥೆ ತೀರ್ಪುಗಾರರಿಗೆ ಇಷ್ಟವಾದರೆ, ಆ ಕಥೆ ಸಿನಿಮಾ ಆಗಲಿದ್ದು, ಜೊತೆಗೆ ಒಂದು ಲಕ್ಷ ಬಹುಮಾನ ಕೂಡ ಸಿಗಲಿದೆ. ಅಲ್ಲದೆ ಬಂದ ಒಟ್ಟು ಕಥೆಗಳಲ್ಲಿ ಅತ್ಯುತ್ತಮ 20 ಕಥೆಗಳನ್ನು ತೀರ್ಪುಗಾರ ಸಮಿತಿ ಆಯ್ಕೆ ಮಾಡಿ ಅದನ್ನು ಪುಸ್ತಕ ರೂಪದಲ್ಲಿ ಕೂಡ ಹೊರತರಲಿದೆ.
ಇನ್ನು ಆಯ್ಕೆಯಾದ 20 ಕಥೆಗಳ ಕಥೆಗಾರರಿಗೆ “ಯು ಟರ್ನ್’ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಒಂದು ದಿನದ ಚಿತ್ರಕಥಾ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಚಿತ್ರರಂಗದ ಕಡೆಗೆ ಸಮಾನ ಆಸಕ್ತಿ, ಅಭಿರುಚಿಯನ್ನು ಹೊಂದಿರುವ ನಿರ್ಮಾಪಕರು, ನಿರ್ದೇಶಕರು, ಪ್ರಕಾಶಕರು, ಪತ್ರಕರ್ತರು, ವಿಮರ್ಶಕರು, ಸಿನಿಮಾಸಕ್ತರು, ಹೀಗೆ ಚಿತ್ರರಂಗದ ಸಮಾನ ಮನಸ್ಕರು ಸೇರಿ ರೈಟ್ ಕರ್ನಾಟಕ ಎನ್ನುವ ಹೆಸರಿನಲ್ಲಿ ಉತ್ತಮ ಕಥೆಗಾರರು, ಬರಹಗಾರರನ್ನು ಹುಡುಕಾಟ ನಡೆಸುತ್ತಿದ್ದು, ಕಥೆಗಾರರು ತಮ್ಮ ಕಥೆಯನ್ನು ಏಪ್ರಿಲ್ 30ರ ಒಳಗೆ
writekarnataka@gmail.com ಈ ಇಮೇಲ್ ಗೆ ಕಳುಹಿಸಬೇಕು.
ನಿರ್ದೇಶಕರಾದ “ರಾಮಾ ರಾಮಾರೇ’ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್, “ಶ್ರೀನಿವಾಸ ಕಲ್ಯಾಣ’, “ಬೀರ್‌ಬಲ್’ ಖ್ಯಾತಿಯ ಶ್ರೀನಿ, ಹಿರಿಯ ಪತ್ರಕರ್ತ ಜೋಗಿ, ಪ್ರಕಾಶಕ ಜಮೀಲ್ ಸಾವಣ್ಣ, ಹರೀಶ್ ಮಲ್ಯ ಮೊದಲಾದವರು ತೀರ್ಪುಗಾರರಾಗಿದ್ದು ಉತ್ತಮ ಕಥೆಗಳನ್ನು ಆಯ್ಕೆ ಮಾಡಲಿದ್ದಾರೆ.