Advertisement
ಕೆಲಸವನ್ನೇ ಮಾಡದೆ ಫಲ ಬೇಕೆಂದರೆ ಸಿಗುವುದೂ ಇಲ್ಲ. ಇದನ್ನೇ ಅಲ್ಲವೇ ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳುವುದು? ಆದರೆ ನಾವು ಬೇಕೆನಿಸಿದ್ದನ್ನು ಪಡೆಯಲು ಹಂಬಲಿಸಿ, ಶ್ರಮಿಸಿದ ಮಾತ್ರಕ್ಕೆ ಒಳ್ಳೆಯ ಫಲಿತಾಂಶವೇ ಸಿಕ್ಕಿ ಬಿಡುತ್ತದೆಂದು ಹೇಳುವುದು ಸಾಧ್ಯವಿಲ್ಲ. ಕೆಲವೊಮ್ಮೆ ಬಯಸದೇ ಭಾಗ್ಯ ಬಾಗಿಲಲ್ಲಿ ನಿಂತರೆ, ಮತ್ತೆ ಕೆಲವೊಮ್ಮೆ ಬಯಸಿದ ಭಾಗ್ಯ ಕೈ ತಪ್ಪಿ ಹೋಗುತ್ತದೆ.
Related Articles
Advertisement
ಅಂದಿನ ಕಾಲದಲ್ಲಿ ತನ್ನ ತಪ್ಪು ಇಲ್ಲದಿದ್ದರೂ ಗಂಡ ಸತ್ತ ಎಂಬ ಏಕೈಕ ಕಾರಣಕ್ಕೆ ವಿಧವೆ ಒಬ್ಬಳನ್ನು ಆಜೀವನ ಪರ್ಯಂತ ಇತರರು ಅನುಭವಿಸುವ ಎಲ್ಲ ಸುಖಗಳಿಂದ ವಂಚಿತಳನ್ನಾಗಿಸಿ ಅವಳನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ರೀತಿ ಮನಸ್ಸಿಗೆ ಖೇದವನ್ನುಂಟು ಮಾಡುತ್ತದೆ.
ಅಂತಹ ಸಮಯದಲ್ಲೂ ಜೀವನದ ರಥವನ್ನು ಸಮರ್ಥವಾಗಿ ಮುನ್ನಡೆಸಿ ಮಗಳನ್ನೂ ಬೆಳೆಸಿ ಕಷ್ಟಗಳಿಗೆ ಕಲ್ಲಾಗಿ ನಿಲ್ಲುವ ರಂಗಮ್ಮ ಬತ್ತದ ಜೀವನ್ನೋತ್ಸಾಹದ ದ್ಯೋತಕವಾಗಿ ಕಾಣುತ್ತಾಳೆ. ಆಕೆಯ ಜೀವನ ಪ್ರೀತಿ, ಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುವ ಧೈರ್ಯ, ಸಣ್ಣಪುಟ್ಟ ಸಮಸ್ಯೆಗಳನ್ನೂ ದೊಡ್ಡದು ಮಾಡಿಕೊಂಡು ಕೊರಗುವ ನಮ್ಮಂತ ಯುವ ಜನರಿಗೆ ಮಾದರಿ.
ಇನ್ನು ಇಡೀ ಕತೆಯನ್ನು ಸೂತ್ರದಂತೆ ಬಿಗಿದು ಕಥೆಯ ಉದ್ದಕ್ಕೂ ವಿಜೃಂಭಿಸಿರುವುದು ಪ್ರೀತಿಯೇ. ತಾಯಿ -ಮಗಳು, ತಂದೆ -ಮಕ್ಕಳು, ಗಂಡ -ಹೆಂಡಿರ ಹಾಗೂ ಗೆಳತಿಯರ ನಡುವಣ ನಿಷ್ಕಲ್ಮಶ ಪ್ರೀತಿಯೇ ಕತೆಯ ಜೀವಾಳ. ಜೀವನದಲ್ಲಿ ಎಲ್ಲವೂ ಮುಗಿದು ಹೋಯಿತು ಎಂದುಕೊಂಡಾಗ ಮತ್ತೆ ಮನಸಿನಲ್ಲಿ ಜೀವನೋತ್ಸಾಹ ಮೂಡಿಸಿ ಚಿಂತೆಯ ಕಾರ್ಮೋಡಗಳಿಂದ ಹೊರಬಂದು ಭರವಸೆಯ ಭಾಸ್ಕರ ಮತ್ತೆ ಪ್ರಜ್ವಲಿಸುವಂತೆ ಮಾಡಿ ಜೀವನವನ್ನು ಧನಾತ್ಮಕ ದೃಷ್ಟಿಯಲ್ಲಿ ನೋಡುವಂತೆ ಮಾಡುವ ಶಕ್ತಿ ಪ್ರೀತಿಗೆ ಇದೆ ಎನ್ನುವುದನ್ನು ಕಥೆ ರುಜುವಾತು ಪಡಿಸುತ್ತದೆ.
ಕಥೆಯ ಧಾರುಣ, ಅನಿರೀಕ್ಷಿತ ಅಂತ್ಯ ಮಾತ್ರ ಒಂದರೆಕ್ಷಣ ಎದೆ ಧಸಕ್ ಎನ್ನಿಸಿ ಒಂದೇ ಗತಿಯಲ್ಲಿ ಕಥೆಯನ್ನು ಆಸ್ವಾದಿಸಿಕೊಂಡು ಹೋಗುತ್ತಿದ್ದ ಮನಸ್ಸಿಗೆ ಲಘು ಆಘಾತವನ್ನುಂಟು ಮಾಡುತ್ತದೆ. ಆದರೆ ಉಪಸಂಹಾರದಲ್ಲಿ ಎಲ್ಲವೂ ತಕ್ಕ ಮಟ್ಟಿಗೆ ಮೊದಲಿನಂತಾಗಿ ಕೊಂಚ ಸಮಾಧಾನದಿಂದ ಪುಸ್ತಕ ಮುಚ್ಚಿಡುವಂತಾಗುತ್ತದೆ.
ಒಟ್ಟಿನಲ್ಲಿ ಪುಸ್ತಕ ಸರಳ, ಆದರೆ ಸುಂದರವಾಗಿ, ಹೃದಯ ತಂತಿಯನ್ನು ಮೀಟಿ ಬಹಳ ಹೊತ್ತು ಕಥೆಯನ್ನು ಮೆಲುಕು ಹಾಕುತ್ತಾ ಮನಸ್ಸು ಕಥೆಯ ಸುತ್ತವೇ ಸುತ್ತುವಂತೆ ಮಾಡುತ್ತದೆ.
-ಅಭಿರಾಮ್ ಭಾಗವತ್