ಯೋಚನೆಗಳಿಗೆ ವಯಸ್ಸಿನ ಹಂಗಿಲ್ಲ. ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಎನ್ನುವ ಮಾತಿಗೆ ಅದೆಷ್ಟೋ ಯುವ ಪ್ರತಿಭೆಗಳು ಪ್ರತಿನಿತ್ಯ ಏನಾದರೂ ಮಾಡುವ ಹಂಬಲದಲ್ಲಿ ಅವಕಾಶದ ವೇದಿಕೆಯನ್ನು ಹತ್ತಲು ಕಾಯುತ್ತಿವೆ. ಕೆಲವೊಬ್ಬರಿಗೆ ತಮ್ಮ ಯೋಚನೆಯೇ ಕ್ರಮಿಸಲು ಹೂರಟ ಹಾದಿಗೆ ಪೂರ್ವ ಪೀಠಿಕೆ.
ಮುಂಬಯಿಯ ತಿಲಕ್ ಮೆಹ್ತಾ ಪ್ರತಿನಿತ್ಯ ಶಾಲೆಯ ಪಾಠ, ಸ್ನೇಹಿತರ ಜೊತೆಗಿನ ಆಟದ ಖುಷಿಯೊಂದಿಗೆ ಇರುತ್ತಾನೆ. ನಿತ್ಯದ ದಿನಚರಿಯಲ್ಲಿ ಅದೊಂದು ದಿನ ತನ್ನ ಅಂಕಲ್ ಮನೆಯಿಂದ ಅಗತ್ಯವಿದ್ದ ಪುಸ್ತಕವೊಂದನ್ನು ಮರೆತು ಬಂದಿರುತ್ತಾನೆ. ತಿಲಕ್ ನಿಗೆ ಓದಲು ಅವಶ್ಯವಾಗಿದ್ದ ಆ ಪುಸ್ತಕ ಅದೇ ದಿನ ಬೇಕಾಗಿತ್ತು.ಇದಕ್ಕಾಗಿ ತನ್ನ ತಂದೆಯ ಬಳಿ ಕೊರಿಯರ್ ನಲ್ಲಿ ತರಿಸಿದರೆ ಇಂದೇ ಪುಸ್ತಕ ದೊರೆಯಬಹುದೇ ಎಂದು ಕೇಳಿ ನೋಡುತ್ತಾನೆ. ಆದರೆ ಪುಸ್ತಕದ ಬೆಲೆಗಿಂತ ಕೊರಿಯರ್ ವೆಚ್ಚವೇ ಅಧಿಕವಾಗುತ್ತದೆ ಹಾಗೂ ಇದಕ್ಕಾಗಿ ಬೇರೆ ಯಾವ ಉಪಾಯ ಇಲ್ಲ ಎಂದು ಮಗನ ಮಾತಿಗೆ ತಂದೆ ಸಮಾಜಾಯಿಷಿ ನೀಡುತ್ತಾರೆ.
ಯೋಚನೆ ಯೋಜನೆ ಆಗುವ ಮುನ್ನ… ತಿಲಕ್ ಅಂಕಲ್ ಮನೆಯಿಂದ ಒಂದೇ ದಿನದಲ್ಲಿ ಕೆಲವೇ ಗಂಟೆಗಳಲ್ಲಿ ಪುಸ್ತಕವನ್ನು ಮನೆಗೆ ತಲುಪಿಸುವ ಯಾವುದಾದರೂ ಯೋಜನೆ ಇರಬೇಕಿತ್ತು ಎನ್ನುವ ಯೋಚನೆಯಲ್ಲಿ ತರಗತಿಯಲ್ಲಿ ಮಗ್ನನಾಗಿ ಕೂತಾಗ ಶಾಲೆಯ ಆವರಣದಲ್ಲಿ ಡಬ್ಬಾವಾಲಾ ( ಮುಂಬಯಿಯಲ್ಲಿ ಆಹಾರವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ, ಹೇಳಿದ ವಿಳಾಸಕ್ಕೆ ಸೈಕಲ್ ನಲ್ಲಿ ಒಂದು ಡಬ್ಬಿಯಲ್ಲಿ ತಲುಪಿಸುವವರು ಡಬ್ಬಾವಾಲಾಗಳು. ಇಂದು ಇದು ಮುಂಬಯಿ ನಗರದಲ್ಲಿ ಬೆಳೆದು ನಿಂತಿರುವ ಡೆಲಿವೆರಿ ವ್ಯಾಪಾರ) ರನ್ನು ನೋಡುತ್ತಾನೆ. ಅದೇ ಕ್ಷಣ ಹದಿಮೂರರ ಹರೆಯದ ತಿಲಕ್ ಒಂದು ಯೋಜನೆಯ ಕುರಿತು ಯೋಚಿಸುತ್ತಾನೆ. ಅದುವೇ ತಾನು ಈ ಡಬ್ಬಾವಾಲಾಯವರ ಹಾಗೆ ಆಹಾರದ ವಸ್ತುಗಳ ಜೊತೆ ಇತರೆ ವಸ್ತುಗಳನ್ನು ಜನರು ಹೇಳಿದ ಕಡೆಗೆ ಶೀಫ್ರ ಗತಿಯಲ್ಲಿ ಅದೇ ದಿನ ರವಾನಿಸುವ ಹಾಗೆ ಒಂದು ಉದ್ಯಮವನ್ನು ಆರಂಭಿಸಬೇಕು ಎಂಬುದು.
ಸಣ್ಣ ವಯಸ್ಸಿನ ದೊಡ್ಡ ಅಲೋಚನೆಯ ಯೋಜನೆಯ ಕುರಿತು ತಿಲಕ್ ಗಾಢವಾಗಿ ಗಮನ ಹರಿಸುತ್ತಾನೆ. ಹೊಸ ಬಗೆಯ ಉದ್ಯಮದ ಕುರಿತು ತನ್ನ ತಂದೆಯ ಜೊತೆ ಚರ್ಚಿಸಿದಾಗ ಸ್ವತಃ ಉದ್ಯಮಿಯಾಗಿರುವ ವಿಶಾಲ್ ಮೆಹ್ತಾ ಮಗನ ಈ ಯೋಜನೆಯ ಆರಂಭಕ್ಕೆ ಬೆಂಬಲ ನೀಡುವ ಭರವಸೆಯೊಂದಿಗೆ ಆರ್ಥಿಕವಾಗಿ ನೆರವಾಗಲು ಮುಂದಾಗುತ್ತಾರೆ. ಇದೇ ಸಮಯದಲ್ಲಿ ತಿಲಕ್ ತನ್ನ ಯೋಜನೆಯ ಕುರಿತು ಬ್ಯಾಂಕ್ ಹುದ್ದೆಯಲ್ಲಿರುವ ತನ್ನ ಸಂಬಂಧಿಕರೊಬ್ಬರಿಗೆ ಹೇಳುತ್ತಾನೆ. ತಿಲಕ್ ನ ಈ ಯೋಜನೆ ಅವರಿಗೆ ಎಷ್ಟು ಇಷ್ಟವಾಗುತ್ತದೆ ಅಂದರೆ ಆ ವ್ಯಕ್ತಿ ತನ್ನ ಬ್ಯಾಂಕ್ ಉದ್ಯೋಗವನ್ನು ಬಿಟ್ಟು ತಿಲಕ್ ನ ಹೊಸ ಯೋಜನೆಗೆ ಬೆಂಬಲವಾಗಿ ಮುಂದೆ ಬರುತ್ತಾರೆ.
ಯೋಜನೆಯ ಮೊದಲ ಹೆಜ್ಜೆ : ತಿಲಕ್ ಸಣ್ಣ ವಯಸ್ಸಿನ ಯೋಚನೆ ಹೊಸ ಬಗೆಯ ಯೋಚನೆ ಆಗಿತ್ತು. ಅದಕ್ಕಾಗಿ ಕುಟುಂಬದವರ ಸಹಕಾರ ಹಾಗೂ ಸಲಹೆಯನ್ನು ಪಡೆದುಕೊಂಡು ಮುಂಬಯಿಯ ಡಬ್ಬಾವಾಲಾ ವ್ಯಾಪಾರಿಗಳ ಜೊತೆಗೆ ನಿರಂತರ ಚರ್ಚೆ ಹಾಗೂ ಯೋಜನೆಯ ಕುರಿತು ಸರ್ವ ಸವಾಲಿನ ಬಗ್ಗೆ ಮಾತುಕತೆ ನಡೆಸಿ ಹೇಗೆ,ಏನು,ಎಲ್ಲಿ, ಎಷ್ಟು ಎನ್ನುವುದರ ನಕ್ಷೆಯನ್ನು ತಯಾರಿಸಿಕೊಂಡು ಡಬ್ಬಾವಾಲಾಯವರ ಕೆಲಸದ ಶೈಲಿಯನ್ನು ತಿಳಿದುಕೊಳ್ಳವುದರೊಂದಿಗೆ ಅವರೊಂದಿಗೆ ಹೋಗಿ ಅವರ ಕಾರ್ಯತಂತ್ರ ಹಾಗೂ ಸಮಯಪಾಲನೆಯ ಕುರಿತು ತಿಳಿದುಕೊಳ್ಳುತ್ತಾನೆ.
ಜನ ಮನ ಮೆಚ್ಚಿದ ‘ಪೇಪರ್ ಎನ್ ಪಾರ್ಸೆಲ್’ : ಎಲ್ಲದರ ಕುರಿತು ಯೋಚಿಸಿ ಹಗಲು ಇರುಳಿನ ಪರಿಶ್ರಮದ ಫಲವಾಗಿ ಎಂಟು ತಿಂಗಳು ವ್ಯಯಿಸಿ ತಿಲಕ್ ‘ಪೇಪರ್ ಎನ್ ಪಾರ್ಸೆಲ್’ ಎನ್ನುವ ಆ್ಯಪ್ ವೊಂದನ್ನು ಅಭಿವೃದ್ಧಿ ಪಡಿಸುತ್ತಾನೆ. ಡಬ್ಬಾವಾಲಾರೊಂದಿಗಿನ ಹೊಂದಾಣಿಕೆ ಈ ಕಾರ್ಯಕ್ಕೆ ಮುನ್ನಡಿ ಆಗುತ್ತದೆ. ಪೇಪರ್ ಎನ್ ಪಾರ್ಸೆಲ್ ಆ್ಯಪ್ ಮೂಲಕ ಜನರಿಗೆ ವಸ್ತುಗಳನ್ನು ಡೆಲಿವರಿ ಮಾಡುವ ಕಾಯಕವನ್ನು ಮಾಡಲು ಆರಂಭಿಸುತ್ತದೆ. ಗರಿಷ್ಠ ಮೂರು ಕೆ.ಜಿ ಭಾರವುಳ್ಳ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ಒಂದೇ ದಿನದಲ್ಲಿ ಸುಮಾರು 300 ಕ್ಕೂ ಹೆಚ್ಚು ಡಬ್ಬಾವಾಲೆ ವ್ಯಾಪಾರಿಗಳು ಡೆಲಿವರಿ ಮಾಡಲು ಶುರು ಮಾಡುತ್ತಾರೆ. ಜುಲೈ 2018 ರಂದು ಆರಂಭವಾಗುವ ಪೇಪರ್ ಎನ್ ಪಾರ್ಸೆಲ್ ಸಂಸ್ಥೆ ದಿನ ಕಳೆದಂತೆ ಜನರಿಗೆ ಪರಿಚಯವಾಗುತ್ತ ಆತ್ಮೀಯವಾಗುತ್ತದೆ.
ಈ ಆ್ಯಪ್ ನಲ್ಲಿ ಜನರು ಮೊದಲು ವಸ್ತುಗಳು ಎಲ್ಲಿಂದ ಬರಬೇಕು ಹಾಗೂ ಎಲ್ಲಿಗೆ ತಲುಪಬೇಕು ಎನ್ನುವ ಸ್ಥಳವನ್ನು ಗುರುತಿಸಬೇಕಾಗುತ್ತದೆ. ಅದರಂತೆ ವಸ್ತುಗಳು ಗ್ರಾಹಕರ ವಿಳಾಸಕ್ಕೆ ಸರಿಯಾಗಿ ಅದೇ ದಿನ ಡಬ್ಬಾವಾಲಾಯ ಮೂಲಕ ತಲುಪುತ್ತದೆ. ಕೊರಿಯರ್ ನಲ್ಲಿ ಹೆಚ್ಚಾಗುವ ವೆಚ್ಚ ಪೇಪರ್ ಎನ್ ಪಾರ್ಸೆಲ್ ಮೂಲಕ ಕೇವಲ 40 ರೂಪಾಯಿ ಖರ್ಚಾಗುತ್ತದೆ.
ಇಂದು ಹದಿನಾಲ್ಕು ವರ್ಷದ ತಿಲಕ್ ನಿಂದ ಸ್ಥಾಪನೆಯಾದ ಪೇಪರ್ ಎನ್ ಪಾರ್ಸೆಲ್ ಕಂಪೆನಿ ಒಂದು ಉದ್ಯಮವಾಗಿ ಮುಂಬಯಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ವರ್ಷಕ್ಕೆ ಲಕ್ಷಾಂತರ ಲಾಭವನ್ನು ಪಡೆಯುವುದರ ಜೊತೆಗೆ ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ಪಾರ್ಸೆಲ್ ಗಳನ್ನು ಕಂಪೆನಿ ಡೆಲಿವರಿ ಮಾಡಿದೆ. ತಿಲಕ್ ನ ಈ ಉದ್ಯಮದ ಕುರಿತು ದೇಶ ವಿದೇಶಗಳ ಮಾಧ್ಯಮಗಳಲ್ಲಿ ಸುದ್ದಿ ಆಗಿದೆ. ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ ಪೇಪರ್ ಎನ್ ಪಾರ್ಸೆಲ್ ಕಂಪೆನಿಯ ಶಾಖೆಯನ್ನು ಪ್ರಾರಂಭಿಸುವುದರ ಜೊತೆಗೆ ನೂರು ಕೋಟಿ ಗಳಿಕೆಯನ್ನು ಪಡೆಯುವ ಗುರಿಯನ್ನು ಇಟ್ಟುಕೊಂಡಿದ್ದಾರೆ ತಿಲಕ್.
– ಸುಹಾನ್ ಶೇಕ್